Sunday, January 26, 2014

ಮಾರಣ್ಣ ಮೇಷ್ಟ್ರ ಕೂಲಿಮಠ- ಯಲ್ಡೊಂದ್ಲಾ ಯಲ್ಡು ಯಲ್ಡೆಲ್ಡ್ಲ ನಾಕು

ನನ್ನ ಬ್ಲಾಗ್ ಪೋಸ್ಟ್ ಶೀರ್ಷಿಕೆ ಬಹಳಷ್ಟು ಓದುಗರಿಗೆ ಓದಲೂ ಕಷ್ಟವಾಗಬಹುದು. ನಾನೂ ಕಷ್ಟಪಟ್ಟೇ ಬರೆದಿರುವೆ. ನಮ್ಮ ಹಳ್ಳಿಯಲ್ಲಿ ಮಗ್ಗಿಯನ್ನು ನಾವು ಚಿಕ್ಕ ಮಕ್ಕಳಿದ್ದಾಗ ಹೇಳುತ್ತಿದ್ದ ಬಗೆ ಅದು. "ಎರಡು ಒಂದ್ಲ ಎರಡು, ಎರಡು ಎರಡಲ ನಾಲ್ಕು" ಎಂದು. ಮತ್ತೆ ಮೇಲೆ ಕಣ್ಣಾಡಿಸಿ ಓದಿ, ಯಾಕಾರ ಯಾಕೆ ಎಂದು ನಿಮಗೆ ಅನಿಸುತ್ತೀರಬೇಕು, ಹಾಗೆ ನಾನು ಮತ್ತು ನನ್ನ ಸ್ನೇಹಿತರು ನಮ್ಮೂರಿನ "ಕೂಲಿ ಮಠ"ದಲ್ಲಿ ಕಲಿಯುತ್ತಿದ್ದಿದ್ದು. ನನಗೆ ಮೊದಲಿನಿಂದಲೂ ಮಗ್ಗಿ ಕಷ್ಟ. ಆದರೆ ಗಣಿತದಲ್ಲಿ ಚೆನ್ನಾಗೆ ಅಂಕ ಪಡೆಯುತ್ತಿದ್ದೆ. ಶಾಲಾ ದಿನಗಳಲ್ಲಿ ನಮ್ಮ ಬುದ್ದಿವಂತಿಕೆ ಅಳೆಯಲು ಬಳಸುತ್ತಿದ್ದ ಮಾನದಂಡ ಮಗ್ಗಿ ಹೇಳಿಸುವುದು. ನಮ್ಮ ಚಿಕ್ಕಪ್ಪ, ನನ್ನ ಮತ್ತು ನನ್ನ ತಂಗಿಯನ್ನ ಕೂರಿಸಿಕೊಂಡು ಮಗ್ಗಿ ಹೇಳಲು ಹೇಳುತ್ತಿದ್ದರು. ನಾವಿಬ್ಬರು ಕೈ ಕಟ್ಟಿಕೊಂಡು, ಎಲ್ಲಾದರೂ ಕಡಿದರೆ ಕಷ್ಟಪಟ್ಟು ಕೈ ಬಿಡಿಸಿಕೊಂಡು ಒಮ್ಮೆ ಕೆರ್ಕೊಂಡು ಮತ್ತೆ ಕೈ ಚೌಖಾಕಾರಕ್ಕೆ ಕಟ್ಟಿ ಕೂರಬೇಕಾಗಿದ್ದು ನಮ್ಮ ಕರ್ತವ್ಯ. ಏನಾದ್ರು ನಾವು ಕೆರೆದು ಕೊಳ್ಳುವುದನ್ನು ನಮ್ಮ ಚಿಕಪ್ಪ ನೋಡಿದರೆ ಸರಿಯಾಗಿ ಮೈತೊಳ್ಕೊಳಕೆ ಏನೋ ಕಷ್ಟ ನಿಂಗೆ ಅನ್ನೋರು. ಅಡಿಗೆ ಮನೆಯೊಳಗಿಂದ ಮನೆಯ ಹೆಂಗಸರ ಮುಸಿ ಮುಸಿ ನಗೆ ಬೇರೆ. ನನ್ನ ತಂಗಿ ಚೆನ್ನಾಗಿ ಬಾಯಿಪಾಠ ಹೊಡೆದು ೨೦ರ ತನಕ ಮಗ್ಗಿಯನ್ನು ಪಟ ಪಟ ಹೇಳುತ್ತಿದ್ದಳು. ನನಗೆ ಬರುತ್ತಿದ್ದುದೇ ೧೨ರ ತನಕ, ಈಗಲೂ ನನಗೆ ಬರುವುದು ಅಷ್ಟೇ. ಅವರು ಮಧ್ಯದಲ್ಲಿ ಕೇಳಿದಾಗ ಹೇಳಲಿಲ್ಲ ಅಂದ್ರೆ ಇನ್ನೊಬ್ಬರಿಂದ ಮೂಗನ್ನು ಹಿಡಿಸಿಕೊಂಡು ಕೆಪಾಲಕ್ಕೆ ಒಂದು ಚುರುಕು ಮುಟ್ಟಿಸುವ ಒದೆಯೇ  ಶಿಕ್ಷೆ. ನಾನೇ ಯಾವಾಗಲೂ ಬಲಿಪಶು. ಅವಳು ದಿನ ಕೂಲಿಮಠಕ್ಕೆ ಹೋಗಿ ಮಗ್ಗಿ ಮತ್ತು ಕಾಗುಣಿತವನ್ನು ಕರಗತ ಮಾಡಿಕೊಂಡಿದ್ದಳು.  ನಮ್ಮ ಅಜ್ಜಿಗೆ ನಾನು ಮೊದಲನೇ ಮೊಮ್ಮಗ, ಪ್ರೀತಿ ಸ್ವಲ್ಪ ಜಾಸ್ತಿ. ಮೊಮ್ಮೊಗ ಪಡುತ್ತಿದ್ದ ಕಷ್ಟ ನೋಡಿ, ಮರುಗಿ, ನಾನು ರಜೆಯಲ್ಲಿ ಊರಿಗೆ ಹೋದಾಗ ನಮೂರ ಕೂಲಿಮಠಕ್ಕೆ ಸೇರಿಸುತ್ತಿದ್ದಳು. ನಾನು ಊರಿಗೆ ದಸರಾ ರಜೆ ಮತ್ತು ಬೇಸಿಗೆ ರಜೆಯಲ್ಲಿ ಹೋಗುತ್ತಿದ್ದೆ. ಒಂದು ತಿಂಗಳಿಗೆ, ಒಂದು ಸೇರು ರಾಗಿ ಮತ್ತು ಒಂದು ತೆಂಗಿನಕಾಯಿ ನಮ್ಮ ಟ್ಯೂಶನ್ ಫೀಸು. 

ದಸರಾ ರಜೆಯಲ್ಲಿ ಮಧ್ಯವಾರ್ಷಿಕ ಪರೀಕ್ಷೆಯ ಎಲ್ಲ ಪ್ರಶ್ನೆ ಪತ್ರಿಕೆಗಳಿಗೆ ದುಂಡಾಗಿ ಉತ್ತರ ಬರೆದುಕೊಂಡು ಬನ್ನಿ ಎಂದು ನಮ್ಮ ಶಾಲೆಯ ಮಿಸ್ಸು ಹೇಳಿರ್ತಿದ್ರು. ನನಗೆ ಆ ತಲೆನೋವಿನ ಜೊತೆಗೆ ಕೂಲಿಮಠ ಮೇಷ್ಟ್ರ ತಲೆನೋವು ಬೇರೆ. ಹಳ್ಳಿಯಲ್ಲೇ ಇದ್ದ ಬಹಳ ಸ್ನೇಹಿತರು ಸಿಗುತ್ತಿದ್ದುದೇ ಆ ಒಂದು ಅಥವಾ ಎರಡು ತಿಂಗಳಿಗೆ. ಅವರ ಜೊತೆಯಲ್ಲಿ ಗೋಲಿ, ಬುಗರಿ, ಚಿನ್ನಿ ದಾಂಡು, ಲಗೋರಿ, ಟ್ರಿಕ್ಕಿ, ಕ್ರಿಕೆಟ್ ಮತ್ತು ಸ್ವಲ್ಪ ದೊಡ್ಡವನಾದ ಮೇಲೆ ಕದ್ದು ದುಡ್ಡಿನ ಆಟ ಆಡುವುದಕ್ಕೆ ಮನಸು ಹತೋರೆಯುತ್ತಿತ್ತು. ಬೆಳಗ್ಗೆ ಟ್ರಿಕ್ಕಿ ಮತ್ತು ಗೋಲಿ. ತಿಂಡಿಯಾದ ಮೇಲೆ ಕ್ರಿಕೆಟ್. ಬೇಸಿಗೆ ರಜೆಯಲ್ಲಂತೂ ನಮ್ಮ ಮನೆಯ ಹತ್ತಿರವಿರುವ ತೋಟದಲ್ಲಿ ಧಾನ್ಯಗಳನ್ನು ಒಕ್ಕುವುದಕ್ಕಾಗಿ ಮಾಡಿದ ಕಣ ನಮ್ಮ ಕ್ರಿಕೆಟ್ ಗ್ರೌಂಡ್. ರಾಗಿಯ ಬಣವೆಗೆ ಮೂರು ಕಡ್ಡಿ ಇಟ್ಟು, ಇದ್ದ ಮುರುಕಲು ಬ್ಯಾಟ್ ಹಿಡಿದು ದಿನ ಪೂರ್ತಿ ಕ್ರಿಕೆಟ್ ಆಡುತಿದ್ದೆವು. ಸಂಜೆಯಾಗುತ್ತಿದ್ದಂತೆ ಲಗೋರಿ ಅಥವಾ ಚಿನ್ನಿ ದಾಂಡು. ಇವೆಲ್ಲಾ ಸುತ್ತಮುತ್ತ ನಡೆಯುತ್ತಿರುವಾಗ ಕೂಲಿಮಠದಲ್ಲಿ ಕೂತು ಮಗ್ಗಿ, ಕಾಗುಣಿತ ಕಲಿ ಅಂದರೆ ನಾನೇನು ಮಾಡಬೇಕು. ಬೆಳಗ್ಗೆ ಮತ್ತು ಸಂಜೆ ಕೂಲಿಮಠ ಕಡ್ಡಾಯ. ನಮ್ಮ ಮೇಷ್ಟ್ರು ಬಲು ಶಿಸ್ತು, ತಪ್ಪಿಸಿದರೆ ಬೆತ್ತದಲ್ಲಿ ಒದೆ. ಬಹಳಷ್ಟು ಹುಡುಗರ ಕಣ್ಣಲ್ಲಿ ನೀರು ಬರುವ ತನಕವೂ ಒದೆ ಬಿಳುತ್ತಿದ್ದಿದ್ದು ಸರ್ವೇ ಸಾಮಾನ್ಯ. ನಾನು ಅಪರೂಪಕ್ಕೆ ಹೋಗುತ್ತಿದ್ದ ಕಾರಣ ನನ್ನ ಮೇಲೆ ಸ್ವಲ್ಪ ಕನಿಕರ, ನಿಧಾನಕ್ಕೆ ಹೊಡೆದರೂ ಕೈ ಚುರ್ ಅಂತಿತ್ತು. ಅಷ್ಟೇ ಸಾಕು ನನಗೆ. ಅಕ್ಕಪಕ್ಕದ ಮನೆಯವರಿಗೆಲ್ಲ ಕೇಳುವಂತೆ, ನಮ್ಮ ಅಜ್ಜಿಗೆ ಸುದ್ದಿ ಮುಟ್ಟುವ ತನಕ ಅಳುತಿದ್ದೆ. ನಮ್ಮಜ್ಜಿ ಒಂದಿನವೂ ಬಂದು ಬಿಡಿಸಿದವಳಲ್ಲ, ಅವಳಿಗೆ ಗೊತ್ತಿತ್ತು ಮೊಮ್ಮಗನ ಅಳು ಯಾತಕ್ಕಾಗಿ ಎಂದು. ಆದರೆ ನಮ್ಮಮ್ಮ ಒಡೆಯುತ್ತಿದ್ದಾಗ ಮಾತ್ರ ತಪ್ಪದೇ ಬಂದು ಅವಚಿಕೊಳ್ಳುತ್ತಿದ್ದಳು.

ಕೂಲಿಮಠ ನಡೆಯುತ್ತಿದ್ದುದು ನಮ್ಮೂರಿನ ಮಧ್ಯದಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ. ಬೆಳಗ್ಗೆ ಮತ್ತು ಸಂಜೆ ೭ರ ಹಾಸುಪಾಸಿಗೆ ಶುರುವಾಗುತ್ತಿತ್ತು, ಸಮಯ ಸರಿಯಾಗಿ ಜ್ಞಾಪಕವಿಲ್ಲ. "ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ" ಎನ್ನುವ ಪ್ರಾರ್ಥನೆಯೊಂದಿಗೆ ನಮ್ಮ ಮನೆ ಪಾಠ ಶುರುವಾಗುತ್ತಿತ್ತು. ಮಗ್ಗಿ ಮತ್ತು ಕಾಗುಣಿತ ಕಲಿಸುವುದೇ ಇದರ ಮುಖ್ಯ ಧ್ಯೇಯವಾಗಿತ್ತು. ನಮ್ಮ ಮೇಷ್ಟ್ರು ಬಹಳ ಕಟ್ಟುನಿಟ್ಟು, ಶಿಸ್ತು ನಮ್ಮೂರಿನ ಹುಡುಗರಲ್ಲಿ ಅಲ್ಪ ಸ್ವಲ್ಪ ಇದೆ ಅಂದರೆ ಅದಕ್ಕೆ ಅವರ ಅಪ್ಪ ಅಮ್ಮನಿಗಿಂತ ಈ ಮೇಷ್ಟ್ರ ಕೊಡುಗೆಯೇ ಅಪಾರ. ಪ್ರತಿ ದಿನವೂ ಮಗ್ಗಿಯನ್ನು ಬರೆದು ತಂದು ತೋರಿಸಬೇಕು. ಮಗ್ಗಿ ಉಲ್ಟಾ ಹೇಳುವುದನ್ನೂ ಕಲಿಯಬೇಕು. ಪ್ರತಿ ದಿನ ಒಬ್ಬರು ಮುಂದೆ ಬಂದು ಎಲ್ಲರಿಗೂ ಉಲ್ಟಾ ಮಗ್ಗಿ ಹೇಳಿಸುತ್ತಿದ್ದರು. ಸರಿ ಇದ್ದರೆ ಬಚಾವ್ ತಪ್ಪಿದರೆ ಬೆತ್ತದಿಂದ ಒದೆ.  ಬೆತ್ತ ನೋಡೇ ಬೆದರುತ್ತಿದ್ದ ಎಷ್ಟೋ ಹುಡುಗರು ಅಲ್ಲೇ ಒಂದು ಎರಡು ಮುಗಿಸಿದವರು ಇದ್ದಾರೆ. ಒಮ್ಮೆ ಒಳಗೆ ಬಂದರೆ ಆಚೆ ಹೋಗಲು ಇರುತ್ತಿದ್ದ ದಾರಿ, ಒಂದ ಅಥವಾ ಎರಡಕ್ಕೆ ಹೋಗಲು ಮಾತ್ರ. ದೇವಸ್ಥಾನದ ಪಡಸಾಲೆಯಲ್ಲಿ ಒಂದು ಸಣ್ಣ ಕಿಟಕಿ ಇತ್ತು. ಆಟ ಆಡಲೂ ಹೋಗಬೇಕು ಅಥವಾ ಇನ್ನಾವುದಾದರೂ "ಬಹಳ ಮುಖ್ಯವಾದ" ಕೆಲಸಗಳಿದ್ದರೆ ಆ ಕಿಟಕಿಯಲ್ಲಿ ಸ್ನೇಹಿತರಿಗೆ ನನ್ನ ಸ್ಲೇಟು ಕೊಟ್ಟು, "ಸಾ"(ನಮ್ಮ ಗುರುಗಳನ್ನು ಕರೆಯುದಕ್ಕೆ) ಅಂದು ಕಿರುಬೇರಳನ್ನೋ ಅಥವಾ ಮಧ್ಯದ ಎರಡು ಬೆರಳನ್ನೂ ತೋರಿಸಿ ಹೋಗುವುದು ರೂಢಿ. ರೂಢಿ ತಪ್ಪದಂತೆ ಎಲ್ಲರೂ ಎಚ್ಚರ ವಹಿಸಿ ಪಾಲಿಸುತ್ತಿದ್ದರು. ಮಾರನೇ ದಿನ ಬಂದಾಗ ಕೇಳಿದರೆ ಒಂದು ಸಣ್ಣ ಸುಳ್ಳು ಹೇಳೋ ಅಥವಾ ಮನೆಗೆ ಹೋದಾಗ ನಮ್ಮಜ್ಜಿ ದೇವರ ಪೂಜೆ ಮಾಡಿ ಹೋಗು ಎಂದಳು ಎಂದೋ ತಪ್ಪಿಸಿಕೊಳ್ಳುತ್ತಿದೆ. ಬಹಳ ಮುಖ್ಯವಾದ ಕೆಲಸವೆಂದರೆ, ಸಿಕ್ಕವರ ತೋಟಗಳಿಗೆ ಹೋಗಿ ಗಿಳಿ ಮಾವಿನಕಾಯಿ ಮತ್ತು ಸೀಬೆ ಕಾಯಿ ಕೀಳುವುದು. ಹುಣಸೆ ಹಣ್ಣನ್ನು ಉದುರಿಸಿ ಜೆಜ್ಜುಂಡಿ ಮಾಡಿ ತಿನ್ನುವುದಾಗಿತ್ತು. 

ಕೂಲಿಮಠ ನನಗೆ ಈಗ ಯಾಕೆ ಜ್ಞಾಪಕ ಬಂತು ಎಂದು ಕೆಲವಾರು ಓದುಗರಿಗಾದರೂ ಅನಿಸುತ್ತಿರಬಹುದು. ಮೊನ್ನೆ ನಮ್ಮ ಹಳ್ಳಿಗೆ ಹೋಗಿದ್ದೆ. ಸಾಮಾನ್ಯವಾಗಿ ಎಲ್ಲ ಗಂಡಸರು ಬೆಳಗ್ಗೆ ಎದ್ದು ತಮ್ಮ ತಮ್ಮ ತೋಟಗಳಿಗೆ ಹೋಗಿ ಬಿದ್ದ ತೆಂಗಿನ ಕಾಯಿಗಳನ್ನು ತರುವುದು ರೂಢಿ. ನಾನು ಶಾಲಾ ದಿನಗಳಲ್ಲಿ ಊರಿಗೆ ಹೋದಾಗ ಬೆಳಗ್ಗಿನ ತೋಟಕ್ಕೆ ಕಳುಹಿಸಲು ಮನೆಯ ಕಡಕಟ್ಟಿನಲ್ಲಿ ಮಲಗಿರುತ್ತಿದ್ದ ಅಜ್ಜಿ ಅಲ್ಲಿಂದಲ್ಲೇ ಕೂಗುತ್ತಿದ್ದಳು. ಅಟ್ಟದ ಮೇಲೆ ಮಲಗಿರುತ್ತಿದ್ದ ನಾನು, ನಮ್ಮಜ್ಜಿಯ ಕೂಗು ಕೇಳಿಸಿದರೂ ಕೇಳಿಸದಂತೆ ಬೆಚ್ಚಗೆ ಹೊದ್ದು ಮಲಗುತ್ತಿದೆ. ಆದರೆ ಹಾಸಿಗೆಯಿಂದ ಎಬ್ಬಿಸಿ ಒಂದು ದಪ್ಪ ಶಾಲು ಹೊದಿಸಿ, ತಲೆಗೊಂದು ಮಂಗನ ಟೋಪಿ ಹಾಕದಿದ್ದರೆ ನಮ್ಮ ಅಜ್ಜಿಗೆ ಅವತ್ತಿನ ಕಾಫಿ ಬಾಯಿಗೆ ಇಳಿಯುತ್ತಿರಲಿಲ್ಲ. ನಮ್ಮ ಎಲ್ಲಾ ತೋಟಗಳಿಗೆ ಹೋಗಿ ಬರಲು ಆಜ್ಞೆ ಮಾಡುತ್ತಿದ್ದಳು. ಸ್ವಲ್ಪ ತಡವಾದರೆ ಪಕ್ಕದ ತೋಟದವರು ಬಿದ್ದ ತೆಂಗಿನ ಕಾಯಿಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಆತಂಕ ಅವಳದು. ಎಲ್ಲಾ ತೋಟಗಳನ್ನು ಒಂದು ಸುತ್ತು ಹಾಕಿ ಬರುವ ತನಕ ನಮ್ಮಜ್ಜಿಯ ವಟವಟ ನಿಲ್ಲುತ್ತಿರಲಿಲ್ಲ. ಈಗ ನಮ್ಮಜ್ಜಿ ಇಲ್ಲ. ಆದರೆ ಅವಳು ಬಿಡದೆ ಮಾಡಿಸಿದ ಒಳ್ಳೆಯ ಅಭ್ಯಾಸಗಳು ರೂಢಿಯಾಗಿವೆ. ಎಂದಿನಂತೆ ಬೆಳಗ್ಗಿನ ಚಳಿಗೆ ಒಂದು ದಪ್ಪ ಶಾಲು ಹಾಕಿಕೊಂಡು ನಮ್ಮ ತೋಟಗಳನ್ನೆಲ್ಲ ಒಂದು ಸುತ್ತು ಹಾಕಿ, ಬಿದ್ದ ತೆಂಗಿನಕಾಯಿಗಳನ್ನು ಬದುವಿನಲ್ಲೇ ಇಟ್ಟು,  ಮನೆಯ ಹತ್ತಿರ ಬರುತ್ತಿದ್ದಂತೆ ನಮ್ಮೂರಿನ ಕೂಲಿ ಮೇಸ್ಟ್ರು ಕೆರೆ ಕಡೆಯಿಂದ ಬರುತ್ತಿದ್ದರು. ಅವರ ಹೆಸರು ಮಾರಣ್ಣ. ಊರಲ್ಲೆಲ್ಲ ಕೂಲಿ-ಮೇಷ್ಟ್ರು ಅಥವಾ ಮಾರಣ್ಣ ಮೇಸ್ಟ್ರು ಎಂದಷ್ಟೇ ಪರಿಚಿತರು. ಊರೊಳಗೆ ಬರಿ ಮಾರಣ್ಣ ಎಂದು ಯಾರಾದರು ಕರೆದಿದ್ದನ್ನು ನಾನು ನೋಡೇ ಇಲ್ಲ. ಅದೇ ಹಳೆಯ ಕಾಲದ, ಹೊಟ್ಟೆಯ ಹತ್ತಿರ ಜೇಬುಗಳಿರುತ್ತಿದ್ದ ಮಾಸಿದ ಒಂದು ಬನಿಯಾನು, ಬಿಳಿ ಎಂದು ತಿಳಿಯಬಹುದಾಗಿದ್ದ ಒಂದು ಪಂಚೆ ಧರಿಸಿದ್ದರು. ಅವರು ಹತ್ತಿರ ಬಂದಂತೆ ನಮಸ್ತೆ ಚೆನ್ನಾಗಿದ್ದೀರ ಅಂದೆ. ಮಿತಭಾಷಿ ಮಾರಣ್ಣ ಮೇಷ್ಟ್ರು ಚೆನ್ನಾಗಿದ್ದೀನಿ ಎಂದು ಹೇಳಿ ಅವರ ಮನೆ ಕಡೆಗೆ ಹೆಜ್ಜೆ ಹಾಕಿದರು. ಸಂಜೆ ಹೀಗೆ ನನ್ನ ದೊಡ್ಡಪ್ಪನ ಮಗ ಕಾಂತಣ್ಣನ ಜೊತೆ ಮಾತಾಡುತ್ತಿರುವಾಗ ಕೂಲಿಮಠದ ಸುದ್ದಿ ಬಂತು. ಕೂಲಿಮಠ ಈಗ ಮುಚ್ಚಿದೆ. ಹಿಂದೆ ನಮ್ಮೂರಿನ ಮಕ್ಕಳು ಪಟಪಟ ಹೇಳುತ್ತಿದ್ದ ಮಗ್ಗಿ ಮತ್ತು ಕಾಗುಣಿತ ನಮ್ಮ ಹಳ್ಳಿ ಹುಡುಗರ ಬಾಯಲ್ಲಿ ಕಣ್ಮರೆಯಾಗುತ್ತಿವೆ. ಬಹಳಷ್ಟು ಹಳ್ಳಿ ಹುಡುಗರು ಇಂಗ್ಲಿಷ್ ಮಾಧ್ಯಮ ಬೇಕು ಅಂತ ಅಕ್ಕ ಪಕ್ಕದ ಪಟ್ಟಣಗಳಿಗೆ ಸಣ್ಣ ಸಣ್ಣ ವ್ಯಾನುಗಳಲ್ಲಿ ಹೋಗಿ ಬರುತ್ತಾರೆ. ಮೇಷ್ಟ್ರಿಗೂ ವಯಸ್ಸಾಗಿದೆ. ಮಾರನೇ ದಿನ ಬೆಳಗ್ಗೆ ತೋಟ ಸುತ್ತಿ ಬರುತ್ತಿರುವಾಗ,  "ಸ್ವಾಮಿ ದೇವನೇ ಲೋಕಪಾಲನೆ" ಗುನುಗುತ್ತಿತ್ತು ಮನಸು. ಸೂರ್ಯ ಮೇಲೇರಿದ್ದ. ಹಾಕಿದ್ದ ಟೋಪಿ ತೆಗೆದು, ಊರ ಹೆಬ್ಬಾಗಿಲಿನ ಹತ್ತಿರ ಬಂದಂತೆ,  ಒಂದು ವ್ಯಾನು ಮಕ್ಕಳನ್ನು ತುಂಬಿಸಿಕೊಂಡು ಬಾಣಾವರದ ಕಡೆಗೆ ಹುಲ್ಲು ಕೊಪ್ಪಲಿನಿಂದ ಕಣ್ಣಿಗೆ ಕಾಣದಂತೆ ಮಾಯವಾಯಿತು. 

ಮನೆಯ ಹತ್ತಿರ ಬಂದಂತೆ, ಪಕ್ಕದಲ್ಲೇ ಇರುವ ದೇವಸ್ಥಾನದಲ್ಲಿ ಆಡುತ್ತಿದ್ದ ಒಂದೆರಡು ಮಕ್ಕಳು ಕಾಗುಣಿತ ಹೇಳುತ್ತಿದ್ದುದು ಕಿವಿಗೆ ಬಿತ್ತು. ತುಟಿಯಲ್ಲಿ ಒಂದು ಕಿರುನಗೆ ಅ ಕ್ಷಣದಲ್ಲಿ ಮೂಡಿತ್ತು. 

2 comments:

Gmkitti said...

Ninna lekhana thumbane chennag moodi bandide

Unknown said...

ಸುಂದರವಾದ ನೆನಪು :)