ನನ್ನ ಬಗ್ಗೆ

ನನ್ನ ಹೆಸರು ತ್ರಿಲೋಚನ ರಾಜಪ್ಪ.ನಾನೊಬ್ಬ ಹವ್ಯಾಸಿ ಭಾಷಣಕಾರ ಮತ್ತು ಬರಹಗಾರ. ಪ್ರವಾಸ, ಓದು, ಯೋಗ, ಸೈಕಲ್ ತುಳಿಯುವುದು ಮತ್ತು ಈಜಾಡುವುದು ನನ್ನ ಇತರೆ ಹವ್ಯಾಸಗಳು. ಹೊಟ್ಟೆ ಪಾಡಿಗಾಗಿ ಬೆಂಗಳೂರಿನಲ್ಲಿ ಸಾಪ್ಟ್ವೇರ್ ಎಂಜಿನಿಯರ್ ಕೆಲಸ .

ನನ್ನ ಹಲವಾರು ವಿಷಯಗಳ ಆಸಕ್ತಿಗಳ ಫಲವಾಗಿ ಸಾಕಷ್ಟು ಸ್ನೇಹಿತರು ಮತ್ತು ಗುರುಗಳನ್ನು ಜೀವನದ ದಾರಿಯಲ್ಲಿ ಭೇಟಿ ಮಾಡಿದೆ. ಹಲವಾರು ಜನ ತಮ್ಮಲ್ಲಿದ್ದ ವಿದ್ವತ್ತನ್ನು ನನಗೂ ಸ್ವಲ್ಪ ಹಂಚಿದರು. ಬೇರೆ ಬೇರೆ  ಜನರ ಸಹವಾಸದಿಂದ ಜೀವನದಲ್ಲಿ ಬಹಳ ವಿಷಯಗಳನ್ನು ಕಲಿತೆ ಮತ್ತು ನಾನು ಕಲಿತದ್ದನ್ನು ಹಂಚಿಕೊಳ್ಳುತ್ತಲೇ ಬಂದೆ. 

ನಾನು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಾಮೇನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ. ಅಪ್ಪ ಅಮ್ಮ ರೈತರು. ಕೃಷಿ ಅವಲಂಬಿತ ಕುಟುಂಬ. ಚಿಕ್ಕ ವಯಸ್ಸಿನಲ್ಲಿ ತುಂಟನಿದ್ದ ಕಾರಣ ನಮ್ಮೂರನ್ನು ಬೇಗನೆ ಬಿಟ್ಟೆ.  ಪ್ರಾಥಮಿಕ ಶಿಕ್ಷಣದಲ್ಲಿ ಹೇಳಿಕೊಳ್ಳುವಂತಹ ಯಾವ ಸಾಧನೆಯನ್ನೂ ಮಾಡಲಿಲ್ಲ. ನಮ್ಮ ತಂದೆಗೆ ನಾನು ಇಂಗ್ಲೀಷ್ ಮಾಧ್ಯಮದಲ್ಲೇ ಓದಬೇಕೆಂಬ ಅಚಲವಾದ ಆಸೆಯಿತ್ತು. ಹತ್ತನೇ ತರಗತಿಯ ತನಕವೂ ಅದು ಕೂಡಿ ಬರಲಿಲ್ಲ. ಒಂದೆರಡು ಬಾರಿ ಶಾಲೆಗಳಲ್ಲಿ ಸೀಟು ಸಿಗಲಿಲ್ಲ. ಬಾಲ್ಯ ಅಷ್ಟೊಂದು ಸ್ಪುರ್ತಿದಾಯಕವಾಗಿರಲಿಲ್ಲ ಎಂದು ಹೇಳಬಹುದು. ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಾಲೆಗೆ ಮೊದಲನೆಯವನಾದೆ. ಅಲ್ಲಿಂದ ನನ್ನ ದಿನಗಳು ಶುರುವಾದವು. ನಂತರ ಮೈಸೂರಿನಲ್ಲಿ ಪಿ.ಯು.ಸಿ ಮತ್ತು ಬೆಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ ಮುಗಿಸಿದೆ. 

ಒಂಬತ್ತನೇ ತರಗತಿಯಲ್ಲಿದ್ದಾಗ ಒಂದು ಘಟನೆ ನಡೆಯಿತು. ಆ ಘಟನೆ ನನಗೆ ಭಾಷಣ ಕಲೆಯ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿತು. ಶಾಲೆಯಲ್ಲಿ  ಸ್ವಾತಂತ್ರೋತ್ಸವದ ಪ್ರಯುಕ್ತ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಅದು ಭಾಷಣ ಸ್ಪರ್ಧೆಯಾಗಿದ್ದರಿಂದ ಒಬ್ಬರ ನಂತರ ಒಬ್ಬರು ಬಂದು ಒಂದೇ ವಿಷಯದ ಮೇಲೆ ಭಾಷಣ ಮಾಡುತ್ತಿದ್ದರು. ನನ್ನ ಸರದಿ ಬಂತು. ನಾನು ಸಾಕಷ್ಟು ತಯಾರಿ ನಡೆಸಿದ್ದೆ. ಚೆನ್ನಾಗಿ ಬಾಯಿಪಾಠ ಮಾಡಿಕೊಂಡು ಬಂದಿದ್ದೆ. ಮಾತನಾಡುತ್ತಾ ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದೆ. ಭಾಷಣ ಕೇಳುತ್ತಿದ್ದ ನನ್ನ ಶಾಲೆಯ ಸ್ನೇಹಿತರೆಲ್ಲ ಗೊಳ್ ಎಂದು ನಕ್ಕರು. ನನ್ನ ಮನಸಿಗೆ ಬೇಜಾರಾಯಿತು. ಒಂದು ದೊಡ್ಡ ನಿಟ್ಟುಸಿರು ಬಿಟ್ಟು, ಧೈರ್ಯದಿಂದ ಮೈಕನ್ನು ಕೈಯಲ್ಲಿ ಹಿಡಿದು, ಅಲ್ಲಿ ಗೊಳ್ ಎಂದು ನಗುವುದು ಸುಲಭ ಇಲ್ಲಿ ಬಂದು ನಿಲ್ಲಿ, ದೇಹದ ಎಲ್ಲ ಭಾಗಗಳೂ ನಡುಗುತ್ತವೆ ಎಂದೆ. ಒಂದೇ ನಿಮಿಷದಲ್ಲಿ ನಿಶ್ಯಬ್ದ. ಭಾಷಣ ಮುಂದುವರಿಸಿದೆ. ಗೆದ್ದೆ. ಒಂದೇ ದಿನದಲ್ಲಿ ಶಾಲೆಯಲ್ಲಿ ಪ್ರಸಿದ್ದಿಯಾದೆ. ಈಗಲೂ ನನ್ನ ಶಿಕ್ಷಕರು ಮತ್ತು ನನ್ನ ಸ್ನೇಹಿತರು ನನ್ನನ್ನೂ ಈ ಘಟನೆಯಿಂದಲೇ ನೆನೆಯುವುದು. ಈ ಘಟನೆ ಭಾಷಣಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸಿತು.

ನನ್ನ ಈ ಬ್ಲಾಗಿನಲ್ಲಿ ನಾನು ಕಲಿತಂತಹ, ಕಲಿಯುತ್ತಿರುವ ಮತ್ತು ಕಲಿಯುವ ವಿಷಯಗಳ ಬರೆಯುತ್ತೇನೆ. ಭಾಷಣ ಕಲೆ, ಜಿವನೋತ್ಸಾಹ, ಸರಳ ಜೀವನ ಮತ್ತು ನಾನು ನನ್ನ ಜೀವನದಲ್ಲಿ ಪ್ರಯೋಗಿಸಿದ ಬದಲಾವಣೆಗಳ ಬಗ್ಗೆ ಬರೆಯುತ್ತೇನೆ. ನನ್ನ ಮಾತುಗಳು ಮತ್ತೂಬ್ಬರಿಗೆ ಉಪಕಾರಿಯಾಗಬಹುದೆಂಬ ಸಣ್ಣ ಬಯಕೆ ಅಷ್ಟೇ.

ನನ್ನ ಬರಹಗಳ ಇಂಗ್ಲೀಷ್ ಅವತರಣಿಕೆ ಇಲ್ಲಿದೆ. ಅಲ್ಲಿಯೂ ಓದಬಹುದು. ನಾನು ಫೇಸ್ಬುಕ್, ಟ್ವಿಟರ್‌, ಇಂನ್ಸ್ಟಾಗ್ರಾಮ್ ಮತ್ತು ಕೊರ ದಂತಹ ಸಮಾಜಿಕ ತಾಣಗಳಲ್ಲಿ ಲಭ್ಯನಿದ್ದೇನೆ.  ನನ್ನನ್ನು ಸಂಪರ್ಕಿಸಬಹುದು.  ನನ್ನ ಬರಹಗಳು ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರ ಬಳಿಯೂ ಹಂಚಿಕೊಳ್ಳಿ.


No comments: