Sunday, March 31, 2013

ನಮ್ಮವರು: ವೀಳ್ಯದೆಲೆ ಅಜ್ಜಿ

ಮೊನ್ನೆ ಮೊನ್ನೆ ನಮ್ಮ ಆಫೀಸಿನಲ್ಲಿ ಕಾಫಿ ಹೀರುತ್ತಾ, ಬಿಟ್ಟಿ ಬ್ರಿಟಾನಿಯ ಬಿಸ್ಕತ್ತು ತಿನ್ನುತ್ತಾ ಹರಟುತ್ತಿರುವಾಗ ಒಂದು ವಿಷಯ ಬಂತು.  ಅದು ಬಹಳ ಚಿಲ್ಲರೆ ವಿಷಯವೇ, ಆದರೂ ಅದನ್ನ ಸೂಕ್ಷ್ಮ ರೀತಿಯಲ್ಲಿ ನೋಡಿದರೆ ಇಲ್ಲೊಂದು ದೊಡ್ಡ ಕಂದಕ ಬೆಳೆಯುತ್ತಿದೆ ಎಂದು ಅನಿಸಿತು! ವಿಷಯವೇನೆಂದರೆ ನಮ್ಮ ಆಫೀಸಿನ ಬಸ್ಸುಗಳಲ್ಲಿ ಜನ ಮಾತನಾಡುವುದಿಲ್ಲ ಅನ್ನುವುದು! ನಿಮಗೆ ಅನಿಸಬಹುದು ಮತ್ತೆ ಏನು ಮಾಡುವರು ಇವರು ಅಂತ! ಕೆಲವರು ಪಕ್ಕದವರ ಬಿಟ್ಟು ದೂರದಲ್ಲಿರುವವರ ಜೊತೆ ಫೋನಿನಲ್ಲೇ ಮುಳುಗುವ ಮಂದಿ ಅಥವಾ ಸ್ವಲ್ಪ ಸಮಯ ಸಿಕ್ಕಿತಲ್ಲ ಎಂದು ಗೊರಕೆ ಹಾಕುವವರು ಸಿಗುವರು(ಕೆಲವೊಮ್ಮೆ ನಾನು ಗೊರಕೆ ಹಾಕಿದ್ದೇನೆ, ಪಕ್ಕದವರು ಹೇಳಿದ್ದು). ಹೀಗೆ ಕಾಫಿ ಕಾರ್ನರ್ ಹರಟೆ ಮುಂದುವರೆದು ನಮ್ಮ ಜೀವನ ಅದೆಷ್ಟು ಯಾಂತ್ರಿಕವಾಗುತ್ತಿದೆ ಎನ್ನುವ ಕಹಿ ಸತ್ಯ ನಮ್ಮ ಆ ದಿನದ ಟಾಪಿಕ್!

ಆದರೂ ನಮ್ಮೊಳಗೆ ಕೆಲವಾರು ಜನ ನಮ್ಮ ಯಾಂತ್ರಿಕೃತ ಬದುಕನ್ನ ಆ ಕ್ಷಣಕ್ಕೆ ನಿಲ್ಲಿಸಿ, ಒಂದು ಸಣ್ಣ ಸುಂದರ ಟಚ್  ಕೊಡುವ ಹಾಗು ಮನಸಿಗೆ ಈ ದಿನಗಳಲ್ಲೂ ಆ ಬಾಂಧವ್ಯ ಬೆಸೆಯುವ ಅನಾಮಿಕ ಸಾಮಾನ್ಯ ಜನರೂ ಸಿಗುತ್ತಾರೆ. ಆ ಸಾಮಾನ್ಯ, ಮನಸಿಗೆ ಒಳ್ಳೆಯ ಹಿತಾನುಭವ ನೀಡುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಬರೆಯೋಣ ಅಂದುಕೊಂಡು ಈ ಸರಣಿ ಶುರು ಮಾಡಿದ್ದೇನೆ.

ಅದಕ್ಕಾಗಿ ಮೊದಲಿಗೆ ಬರೆಯಬೇಕು ಅನಿಸಿದ ಮೊದಲ ವ್ಯಕ್ತಿ ವೀಳ್ಯದೆಲೆ ಅಜ್ಜಿ. ನಿಮಗೆ ಅನಿಸುತ್ತಿರಬಹುದು ಇದು ಯಾರು ಅಂದು. ನಾನು ಪ್ರತಿ ಭಾನುವಾರ ಯಶವಂತಪುರ ಸಂತೆಗೆ ಹೋದಾಗ ವೀಳ್ಯದೆಲೆಗಾಗಿ ಅಶ್ರಯಿಸಿರುವ ಒಂದು ಅಜ್ಜಿ. ಈ ದಿನಗಳಲ್ಲಿ ಅದೆಂಥಹ ಬಿಸಿಲು. ಅಲ್ಲೊಂದು ಕಪ್ಪು ಛತ್ರಿ ಹಿಡಿದು ಎಲೆ-ಅಡಿಕೆ ಜಗೆಯುತ್ತಾ ಕೂತಿರುತ್ತಾಳೆ ಆ ಅಜ್ಜಿ. ದಪ್ಪ ಶರೀರ, ಬಿಸಿಲಿಗೆ ಬೆಂದು ಕಪ್ಪಾದ ಮುಖ. ಆದರೆ, ತಲೆಯ ತಿನ್ನುವ ಗ್ರಾಹಕರ ನೋಡಿಯು ಶಾಂತ ಚಿತ್ತದಿಂದ ವೀಳ್ಯದೆಲೆ ಮಾರುವ ಅಜ್ಜಿ. ಇವಳಿಗೆ ಸರಿ ಸುಮಾರು ೬೦ ದಾಟಿರಬಹುದು. ನನ್ನ ಪರಿಚಯ ಆಕೆಗೆ ಆಗಿದ್ದು ವೀಳ್ಯದೆಲೆ ಬುಟ್ಟಿ ಇಟ್ಟುಕೊಂಡಿದ್ದ ಅಜ್ಜಿಯ ಹೋಗಿ ಕರಿಬೇವನ್ನು ಕೇಳಿದಾಗ. ನಾನು ಕೇಳಲೂ ಒಂದು ಕಾರಣವಿತ್ತು. ಆ ವೀಳ್ಯದೆಲೆ ಬುಟ್ಟಿಯ ಜೊತೆ ಒಂದು ಕಟ್ಟು ಕರಿಬೇವನ್ನ ಅಜ್ಜಿ ಇಟ್ಟುಕೊಂಡಿದ್ದಳು. ಅವಳಿಗಾಗಿ ಒಬ್ಬ ತಂದುಕೊಟ್ಟು ಹೋಗಿದ್ದ. ನಾನು ಪಟ್ಟನೆ ಹೋಗಿ ಕೇಳಿದ ತಕ್ಷಣ ಅಜ್ಜಿ ಒಂದು ನಿಮಿಷವನ್ನೂ ಯೋಚಿಸದೆ ಕೊಟ್ಟುಬಿಟ್ಟಳು. ನಾನು ದುಡ್ಡು ಎಷ್ಟು ಎಂದು ಕೇಳಿದೆ, ಅದಕ್ಕೆ ಅವಳ ಉತ್ತರ ನನಗೆ ಅದನ್ನ ಪುಕ್ಕಟೆಯಾಗಿ ಮತ್ತೊಬ್ಬ ವ್ಯಾಪಾರಿ ತಂದು ಕೊಟ್ಟ ನೀನು ದುಡ್ಡು ಕೊಡುವುದು ಬೇಡ ಅಂದು ಬಿಟ್ಟಳು. ನನಗೆ ಆಶ್ಚರ್ಯ ಮತ್ತು ಅದನ್ನು ತೆಗೆದು ಕೊಂಡು ಬರಲು ಭಯ. ನಾನು ಪುಕ್ಕಟೆಯಾಗಿ ಬೇಡವೇ ಬೇಡ ಎಂದರೂ ಅಜ್ಜಿ ಸುಮ್ಮನೆ ತೆಗೆದುಕೊಂಡು ಹೋಗು ಎಂದಳು. ಅದನ್ನ ತಗೊಂಡು ಮನೆಗೆ ಬರುವ ತನಕವೂ ಅದೇ ಯೋಚನೆ. ನಮ್ಮಲ್ಲಿಯೂ ಎಂತೆಂಥ ಜನರಿದ್ದಾರೆ.

ಅಂದಿನಿಂದ ಪ್ರತಿ ಭಾನುವಾರ ಅಲ್ಲಿಗೆ ಹೋದಾಗಲೆಲ್ಲ ಮತ್ತಷ್ಟು ಸಲಿಗೆ, ಸ್ವಲ್ಪ ಮಾತು ಮತ್ತು ಒಂದು ಸಣ್ಣ ನಗು. ಅವಳಿಗೂ ಸ್ವಲ್ಪ ಖುಷಿ ನನಗೆ ಸ್ವಲ್ಪ ಜಾಸ್ತಿಯೇ ಖುಷಿ. ಮಾನವ ಸಂಬಂಧಗಳಿಗೆಕೆ ಬೇಲಿ, ಎಲ್ಲಿ ಬೇಕಾದರೂ ಒಂದು ಸುಂದರ ಕ್ಷಣ ಸೃಷ್ಟಿ ಆಗಬಹುದು. ಸುತ್ತಲಿರುವವರನ್ನ ಸ್ವಲ್ಪ ಪ್ರೀತಿಯಿಂದ ಮಾತನಾಡಿಸೋಣ. ಇತ್ತೀಚಿನ ದಿನಗಳಲ್ಲಿ ತರಕಾರಿ ತರುವುದರಲ್ಲೂ ಖುಷಿ ಅಡಗಿದೆ ಎಂದು ಅನಿಸುತ್ತಿದೆ!

 ದೇವರಿಗೆ ಒಂದಷ್ಟು ವೀಳ್ಯದೆಲೆ ಕೊಡಜ್ಜಿ ಅಂದರೆ, ಒಂದಷ್ಟು ಕೊಟ್ಟು ಹತ್ತು ರುಪಾಯಿ ಕೊಟ್ಟರೆ ಎರಡೇ ರುಪಾಯಿ ತಗೊಂಡು ಉಳಿದ ಹಣ ವಾಪಸು ನೀಡುವ ಅಜ್ಜಿ ಎಲ್ಲಿ ನಮ್ಮ ಮನೆಯ ಹತ್ತಿರದ ಶೆಟ್ಟರು ಮೂರು ರೂಪಾಯಿಗೆ ಮೂರು ಎಲೆ ಕೊಟ್ಟು ದೇವರಿಗೆ ಕೊಡಬಹುದಾದ ಎಲೆ ಇಲ್ಲ ಎನ್ನುತ್ತಲೇ ಜಾಸ್ತಿ ದುಡ್ಡಿಗೆ ಮಾರುವವರು ಎಲ್ಲಿ!

ಮುಂದಿನ ವಾರ ಹೋದಾಗ ನನ್ನ ಮೊಬೈಲ್ ತಗೊಂಡು ಹೋದರೆ ಒಂದು ಫೋಟೋ ಕ್ಲಿಕ್ಕಿಸಿ ತಂದು ಲಗತ್ತಿಸುವೆ ಇಲ್ಲಿ!

Sunday, March 24, 2013

ನಮಗ್ಯಾಕೆ ಬೇಕು ರಾಜಕೀಯ! ಅದರಿಂದ ನಮಗೆ ಏನು ಪ್ರಯೋಜನ

ನನ್ನ ಕೆಲವು ಸ್ನೇಹಿತರಿಗೆ, ಈ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಅಂತೆಲ್ಲ ನಮ್ಮ  ಶಾಲೆಗಳಲ್ಲಿ ಓದಿದ್ದೇವೆ. ಆದರೆ ನಮ್ಮ ಪ್ರಭುಗಳು ಮತ್ತು ಪ್ರಜೆಗಳು ಇಬ್ಬರು ದ್ವಿಮುಖವಾಗುತ್ತಿರುವುದು ವಿಷಾದದ ಸಂಗತಿ.

ನಮ್ಮಲ್ಲಿ ಬಹಳ ರೀತಿಯ ಜನರಿದ್ದಾರೆ. ನಾನು ಇಲ್ಲಿ ಹೇಳುತ್ತಿರುವುದು ಆರ್ಥಿಕವಾಗಿ. ಒಂದು ಉತ್ತಮ ವರ್ಗ, ಸರ್ಕಾರದಿಂದ ಅಷ್ಟೇನೂ ಬಯಸದೆ ತಮ್ಮ ಪಾಡಿಗೆ ತಾವಿರುವ ಮತ್ತು ಮನಸಿದ್ದರೆ ಬಂದು ವೋಟು ಹಾಕುವ ಜನ. ಮತ್ತೊಂದು ಮಧ್ಯಮ ವರ್ಗ, ಇವರು ಸರಿಯಾಗಿ ವೋಟು ಮಾಡುವ ಸರ್ಕಾರದಿಂದ ಸ್ವಚ್ಛ, ಪಾರದರ್ಶಕ ಮತ್ತು ಉತ್ತಮ ಆಡಳಿತವನ್ನು ಬಯಸುವ ಜನ. ಇನ್ನೊಂದು ಆರ್ಥಿಕವಾಗಿ ದುರ್ಬಲ ವರ್ಗ, ಇವರು ಅವರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ವೋಟು ಕೊಡುವ ಜನ.

ನಮ್ಮ ದೇಶದಲ್ಲಿ ನಾವು ಓದಿರುವಂತೆ ಮತ್ತು ನೋಡಿರುವಂತೆ ಆರ್ಥಿಕವಾಗಿ ದುರ್ಬಲ ವರ್ಗದವರೇ ಜಾಸ್ತಿ. ಬಹಳಷ್ಟು ಜನಕ್ಕೆ     Maslow's hierarchy of needs ಬಗ್ಗೆ ಗೊತ್ತಿರಬಹುದು( ಗೊತ್ತಿರದವರು ಇಲ್ಲಿ ಓದಿ - http://en.wikipedia.org/wiki/Maslow's_hierarchy_of_needs). ಮೊದಲು ಮಾನವನಿಗೆ ಬೇಕಾಗಿರುವುದು ಗಾಳಿ, ಊಟ, ವಸತಿ ಮತ್ತು ಆ ಕ್ಷಣದ ಅನುಕೂಲಗಳು. ಇದರಿಂದಾಗಿಯೇ ಬಹಳ ಜನ ನಮ್ಮಲ್ಲಿ ದುಡ್ಡು ತಗೊಂಡು ವೋಟು ಹಾಕುವುದು ಅಥವಾ ವಿವೇಚನೆ ಇಲ್ಲದೆ ವೋಟು ಹಾಕುವುದು ಎಂಬುದು ನನ್ನ ಅನಿಸಿಕೆ(ಇದು ತಪ್ಪು ಇರಲು ಬಹುದು, ನೀವು ಯೋಚಿಸಿ)

ಆದರೆ ಅರ್ಥಿಕ ಸ್ಥಿತಿ ಉತ್ತಮವಾದಂತೆ ಈ ರೀತಿಯ ಪರಿಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಇದರ ಬಗ್ಗೆ ಅಷ್ಟೇನೂ ತಲೆಯ ಕೆಡಿಸಿ ಕೊಳ್ಳುವ ಅಗತ್ಯ ಇಲ್ಲ. ಆದರೆ ನಮ್ಮ ಮನಸ್ಥಿತಿ ದೇಶವೇ ಹೀಗೆ, ನಮ್ಮ ಜನ ಒಳ್ಳೆವರನ್ನ ಗೆಲ್ಲಿಸುವುದಿಲ್ಲ, ಗೆದ್ದರೂ ಅವರು ಕೆಲಸ ಮಾಡುವುದಿಲ್ಲ ಅನ್ನುವ ಮನೋಭಾವ ಬದಲಾಗಬೇಕಿದೆ. ನಮ್ಮಲ್ಲಿ ಬದಲಾವಣೆಗಳು ಆಗುತ್ತಿವೆ, ಆದರೆ ಅದು ನಿಧಾನವಾಗಿ ನಡೆಯುತ್ತಲೇ ಇವೆ. RTI, ಭೂಮಿ (http://bhoomi.karnataka.gov.in/landrecordsonweb/) ಮತ್ತು ಸಕಾಲ ನನಗೆ ತಿಳಿದಿರುವಂತೆ ಉತ್ತಮ ಯೋಜನೆಗಳೇ. It takes time ಅಷ್ಟೇ! 


ಇನ್ನೇನು ಕರ್ನಾಟಕದ ವಿಧಾನಸಭೆಗೆ ಚುನವಾಣೆ ಘೋಷಣೆಯಾಗಿದೆ. ನಮ್ಮ ದೇಶವೇ ಹೀಗೆ ಉದ್ದರವಾಗೋಲ್ಲ, ನಮ್ಮ ಜನಾನೇ ಹೀಗೆ ಅನ್ನುವುದನ್ನ ಬಿಟ್ಟು. ನಾವೆಲ್ಲಾ ವೋಟು ಹಾಕೋಣ, ಮತ್ತು ಮತ್ತೆ ಕೆಲವರಲ್ಲಿ ಜಾಗೃತಿ ಮೂಡಿಸಿ  ಅವರು ಸರಿಯಾದ ಅಭ್ಯರ್ಥಿಗಳಿಗೆ ವೋಟು ಹಾಕುವಂತೆ ಪ್ರೋತ್ಸಾಹಿಸೋಣ. 

ನನ್ನದೊಂದು ಕೋರಿಕೆ: ನನ್ನ ಸ್ನೇಹಿತರು, ಜೊತೆಯಲ್ಲಿ India Against Corruptionನಲ್ಲಿ ಕೆಲಸ ಮಾಡಿದ ಯೋಗೇಶ್ ದೇವರಾಜ್ (https://www.facebook.com/YogeshDevarajForMLA) ಬ್ಹೊಮ್ಮನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರುವರು. ಯೋಗೇಶ್, ಬೆಂಗಳೂರಿನ RVCEಯಲ್ಲಿ ಓದಿ ಸರಿಸುಮಾರು ೨೦ ವರ್ಷ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡಿ(ಅದರಲ್ಲಿ ೧೩ ವರ್ಷ ಅಮೇರಿಕದಲ್ಲಿ) ಈಗ ನಮ್ಮೆಲ್ಲರ ಒತ್ತಾಯಕ್ಕೆ, ಚುನಾವಣಾ ಕಣದಲ್ಲಿ ಇದ್ದಾರೆ. ದಯವಿಟ್ಟು ನೀವು ಅವರ ಬಗ್ಗೆ ಇಲ್ಲಿ "http://www.yogeshdevaraj.in/" ಮತ್ತಷ್ಟು ತಿಳಿದುಕೊಳ್ಳಿ. ನಿಮಗೆ ಈ ವ್ಯಕ್ತಿ ಉತ್ತಮ ಎಂದು ಅನಿಸಿದರೆ ಮಾತ್ರ ದಯವಿಟ್ಟು ಸ್ವಲ್ಪ ಸಹಾಯ ಮಾಡಿ. ಅವರ ಬಗ್ಗೆ ಜನಾಭಿಪ್ರಾಯ ಬೆಳೆಸಿ(https://www.facebook.com/YogeshDevarajForMLA), ಆದರೆ  ಸ್ವಲ್ಪ ಹಣ ಸಹಾಯ ಮಾಡಿ, ನಮ್ಮ ಜೊತೆ ಬಂದು ಮನೆ ಮನೆ ಸುತ್ತಿ ಜನರಲ್ಲಿ ಜಾಗ್ರತಿ ಮೂಡಿಸಿ.
ನಮ್ಮ ಕಚೇರಿಯಲ್ಲಿ ಕಂಡ ಪೋಸ್ಟರ್! Be A Hero
ಯೋಗೇಶ್ರವರ ಕಿರು ಪರಿಚಯ