Saturday, November 29, 2014

ಗಿರಿಗದ್ದೆಯಲ್ಲಿ ಸಮಾನತೆಯ ಪಾಠ

ಅಸಮಾನತೆ ಅನ್ನುವುದು ನಮ್ಮೊಳಗೆ, ಎಲ್ಲರೊಳಗೆ, ಎಲ್ಲದರೊಳಗೆ ಬೆರೆತು ನಮ್ಮನ್ನು ಮರೆಯಿಸುತ್ತಿರಬೇಕಾದರೆ ಕೆಲವು ಘಟನೆಗಳು, ಕೆಲವು ಜನರು, ಕೆಲವು ಪದ್ಧತಿಗಳು ಸಮಾನತೆಯನ್ನು ಜಾರಿಗೆ ತರುತ್ತಿವೆ. ಕುಕ್ಕೆ ಸುಬ್ರಮಣ್ಯ ಮಡೆಸ್ನಾನ ಎನ್ನುವ ಹೆಸರಿನಲ್ಲಿ ಬಹಳ ಸದ್ದು ಗದ್ದಲ ಎಬ್ಬಿಸುತ್ತಲಿರುತ್ತದೆ. ಮೊನ್ನೆ ಉಡುಪಿಯಲ್ಲಿ ಊಟದ ಪಂಕ್ತಿಯಿಂದ ಒಬ್ಬರನ್ನು ಮಧ್ಯದಲ್ಲೆ ಎಬ್ಬಿಸಿದರು ಎನ್ನುವ ಸುದ್ದಿ ಎಲ್ಲ ಕಡೆ ಸದ್ದು ಮಾಡಿತ್ತು. ಪಂಕ್ತಿ ಊಟ ಬೇಕೋ ಬೇಡವೋ ಅಥವಾ ಮಡೆಸ್ನಾನ ಬೇಕ ಬೇಡವೋ ಎನ್ನುವ ವಾದಕ್ಕೆ ಇಳಿಯದೆ, ಸುಬ್ರಮಣ್ಯದ ಗಿರಿಗದ್ದೆಯಲ್ಲಿ ಸಮಾನತೆಯ ಸಮಾರಾಧನೆಯ ಬಗ್ಗೆ ಬರೆಯೋಣ ಏಂದು ಅನಿಸಿತು.

ಗಿರಿಗದ್ದೆಯಲ್ಲಿ ಏನಿದೆ ಎಂದು ನಿಮಗೆ ಅನಿಸುತ್ತಿರಬಹುದು. ಅಲ್ಲಿ ಯವೂದೇ ಮಠವಾಗಲಿ, ದೇವಸ್ಥಾನವಾಗಲಿ ಮತ್ತೊಂದಾಗಲಿ ಇಲ್ಲವೇ ಇಲ್ಲ. ಆದರೆ ಗಿರಿಗದ್ದೆಯಲ್ಲಿ ಭಟ್ಟರ ಮನೆಯಿದೆ. ಕುಮಾರ ಪರ್ವತಕ್ಕೆ ಚಾರಣಕ್ಕೆ ಹೋಗುವ ಎಲ್ಲರಿಗೂ ಬೆಳಗ್ಗೆ ತಿಂಡಿ ಬೇಕಾದರೆ ತಿಂಡಿ, ಮಧ್ಯಾನದ ಊಟ ಬೇಕಾದರೆ ಊಟ ಮತ್ತು ರಾತ್ರಿ ಉಳಿದುಕೊಳ್ಳಬಯಸುವವರು ಅಲ್ಲಿಯೇ ತಂಗಿ ಊಟ ಮಾಡಿಕೊಂಡಿರಬಹುದು. ಇದರಲ್ಲೇನಿದೆ ಎಂದು ನಿಮಗೆ ಅನಿಸುತ್ತಿರಬೇಕು! ಭಟ್ಟರು ಊಟವನ್ನು ಪುಕ್ಕಟೆಯಾಗಿ ಹಾಕುವುದಿಲ್ಲ, ಆದರೆ ಎಲ್ಲರಿಗೂ ಊಟವಿರುತ್ತೆ. ಎಲ್ಲರಿಗೂ ಒಂದೇ ಊಟ. ತಟ್ಟೆಗಳನ್ನು ಮತ್ತು ಮಜ್ಜಿಗೆಗೆ ಕಪ್ಪುಗಳನ್ನು ಇಟ್ಟಿರುತ್ತಾರೆ, ಎಲ್ಲರೂ ಊಟ ಮಾಡಿ ತಟ್ಟೆಗಳನ್ನು ತೊಳೆದು ಮೊದಲಿದ್ದ ಜಾಗದಲ್ಲಿ ಇಡಬೇಕು. ಒಂದೇ ರೀತಿಯ ಊಟ, ನಿಮ್ಮ ಹತ್ತಿರ ಎಷ್ಟೇ ದುಡ್ಡಿದ್ದರೂ ಅನ್ನ, ಸಾರು ಮತ್ತು ಮಜ್ಜಿಗೆ ಬಿಟ್ಟರೆ ಬೇರೆನನ್ನು ಕೊಡಲ್ಲ. ಅವರ ಬಾಳೆ ತೋಟದ ಬಾಳೆಹಣ್ಣು ಇದ್ದರೆ ಕೊಡುತ್ತಾರೆ. ಮಲಗಲು ಅಷ್ಟೇ, ಯಾರು ಮೊದಲು ಬರುತ್ತಾರೆ ಅವರಿಗೇ ಮೊದಲ ಆದ್ಯತೆ. ಭಟ್ಟರ ಮನೆ ಮೊದಲು ಹೇಗಿತ್ತೊ ಇವತ್ತೂ ಹಾಗೆ ಇದೆ.
ಇದು ಗೂಗಲ್‍ನಿಂದ ತೆಗೆದಿದ್ದು. 

ಮೊನ್ನೆ ನಾವು ಭಟ್ಟರ ಮನೆಗೆ ಹೋದಾಗ ತೆಗೆಸಿಕೊಂಡ ಪಟ. ಇನ್ನೊಬ್ಬ ಭಟ್ಟರು, ಊಟದ ನಂತರ ಮಲಗಿಬಿಟ್ಟರು. 


ನಿಮಗೆ ಮತ್ತೂ ಅನಿಸುತ್ತಿರಬೇಕು ಇದರಲ್ಲೇನು ವಿಶೇಷ ಎಂದು. ನಾನು ಸಾಕಷ್ಟು ಕಡೆ ಚಾರಣಕ್ಕೆ ಹೋಗಿದ್ದೇನೆ. ಎಲ್ಲ ಕಡೆಯೂ ನಗರಗಳಲ್ಲಿ ಏನೇನು ಸಿಗುತ್ತದೆ ಅದನ್ನೇಲ್ಲ ತಂದು ದುಬಾರಿ ಬೆಲೆಗೆ ಮಾರುವ ಅಂಗಡಿಗಳು ಸಿಗುತ್ತವೆ. ದೂರದ ಹಿಮಾಲಯದ ಚಾರಣ ತಾಣಗಳಿಂದ ಇಡಿದು, ನಮ್ಮ ಸುತ್ತಲ ಬೆಟ್ಟಗಳಲ್ಲಿರುವ ಅಂಗಡಿಗಳು ಹೊರತಲ್ಲ. ಭಟ್ಟರ ಮನೆಯಲ್ಲಿ ಟಿ.ವಿಯಿದೆ, ಅವರ ಹತ್ತಿರ ಮೊಬೈಲ್ ಕೂಡ ಇದೆ. ನಗರಗಳ ಪರಿಚಯವಿದೆ. ಆದರೂ ಅವರ ಮನೆಯಲ್ಲಿ ಎಲ್ಲರೂ ಒಂದೇ.

ನಾಗರೀಕತೆಯಿಂದ ಜಾಗತೀಕರಣದವರೆಗೆ ಬೆಳೆದ ನಾವು ಅಸಮಾನತೆಯನ್ನು ಮಾತ್ರ ಹೆಚ್ಚಿಸುತ್ತಲೇ ಬಂದಿದ್ದೇವೆ. ಆದರೆ ಗಿರಿಗದ್ದೆ ಭಟ್ಟರಂತವರು ತಿಳಿದೋ ತಿಳಿಯದೆಯೋ ಸಮಾನತೆಯ ಗಿಡವನ್ನು ಪೋಷಿಸುತ್ತಿದ್ದಾರೆ. ಬಸವಣ್ಣ ಮತ್ತು ಗಾಂಧಿಜೀ ಇದನ್ನೆ ಅಲ್ಲವೇ ಮಾಡಿದ್ದು.    

Thursday, November 27, 2014

ಪೇರ್ ಪ್ರೊಗ್ರಾಮಿಂಗ್

ಮೊನ್ನೆ ನನ್ನ ಆಫೀಸಿನ ಮೇಲ್‍ಡಬ್ಬಿಗೆ ಒಂದು ಮೇಲ್ ಬಂದು ಬಿತ್ತು. ಅದು ನಮ್ಮ ವಿ.ಪಿ ಕಳಿಸಿದ ಮೇಲ್. ಮತ್ತೆ, ಅದೇ ಪ್ರಯೋಜನಕ್ಕೆ ಬಾರದ ಮೇಲ್ ಇರಬೇಕು ಎಂದು ಡಿಲಿಟೆಡ್ ಎಂದು ಇರುವ ಮತ್ತೊಂದು ಡಬ್ಬಿಗೆ ಆದನ್ನು ದಬ್ಬಿದ್ದೆ. ದಿನಾಲೂ ಸಾಲ ಬೇಕಾ ಎಂದು ಬರುವ ರೀತುವಿನ ಮೇಲ್, ಅಪರ್ಟ್‍ಮೇಂಟ್ ಬೇಕಾ ಎಂದು ಬರುವ ಮಹಿಮಾಳ ಮೇಲ್,  ಕ್ರೇಡಿಟ್ ಕಾರ್ಡ್ ಬೇಕಾ ಎಂದು ಬರುವ ಟೀನಾಳ ಮೇಲ್‍ನೇ ಓದದೆ ಡಿಲಿಟೆಡ್ ಡಬ್ಬಿಗೆ ದಬ್ಬುತ್ತಿರುವಾಗ, ಇನ್ನೂ ವಿ.ಪಿಯಿಂದ ಬರುತ್ತಿರುವ ಮೇಲ್‍ಗೆ ಆ ಗತಿ ಕಾಣಿಸಿದ್ದು ತಪ್ಪಿಲ್ಲ ಎಂದು ಹೇಳುತ್ತಿತ್ತು ಮನಸು ಆ ದಿನ. ನಮ್ಮ ಚಾಳಿ ತಿಳಿದೋ ಏನೋ ನಮ್ಮ ಅಫೀಸುಗಳಲ್ಲಿ ನಮ್ಮನ್ನು ಕಾಯಲೆಂದೇ ಮ್ಯಾನೇಜರ್‌ಗಳಿರುತ್ತಾರೆ. ಸಾಮಾನ್ಯವಾಗಿ ಇವರ ಮೂಲಕವೇ ನಮ್ಮ ಕೆಲಸ ಕಾರ್ಯಗಳು ನಡೆಯುವುದು. ಆ ದಿನ ಸೋಮವಾರ, ಮಧ್ಯಾನದ ಸಮಯಕ್ಕೆ ಒಂದು ಮೀಟಿಂಗ್ ರಿಕ್ವೇಸ್ಟ್ ನನ್ನ ಮೇಲ್ ಡಬ್ಬಿಗೆ ಬಂದು ಬಿತ್ತು.  ಆದರ ವಿಷಯ "Discussion about implementing pair programming in the team" ಎಂದು ಇತ್ತು. ಅದು ಪೇರ್ ಪ್ರೊಗ್ರಾಮಿಂಗ್ ಅನ್ನು ನಮ್ಮ ಟೀಮ್‍ನಲ್ಲಿ ಅಳವಡಿಸುವ ಕುರಿತಾದ ಮಾತುಕತೆಗೆ ಆಹ್ವಾನ.  ಕೆಳಗೆ ಅದರ ಬಗ್ಗೆ ಸಂಕ್ಷಿಪ್ತವಾಗಿ ಬರೆಯಲಾಗಿತ್ತು. ಒಂದೆರಡು ಅದರ ಕುರಿತಾದ ಲೇಖನಗಳನ್ನು ಮೀಟಿಂಗ್ ರಿಕ್ವೇಸ್ಟ್‌ಗೆ ಅಂಟಿಸಲಾಗಿತ್ತು.  ಇದರ ಬಗ್ಗೆಯೇ ನಮ್ಮ ವಿ.ಪಿಯಿಂದ ಮೇಲ್ ಬಂದಿದ್ದು, ಅವರು ನಮ್ಮ ಎಲ್ಲ ಟೀಮ್‍ಗಳಲ್ಲಿ ಪೇರ್ ಪ್ರೊಗ್ರಾಮಿಂಗ್ ಮಾಡಬೇಕೆಂದು ಫರ್ಮಾನು ಹೋರಡಿಸಿದ್ದರು.

ಪೇರ್ ಪ್ರೊಗ್ರಾಮಿಂಗ್ ಅಂದರೆ ಇಬ್ಬರು ಒಂದೇ ಕಂಪ್ಯೂಟರಿನ ಮುಂದೆ ಕೂತು ಒಂದೇ ಕೆಲಸ ಮಾಡುವುದು ಎಂದು. ಪ್ರೊಗ್ರಾಮ್ ಅಂದರೆ, ಬರೆದವನನ್ನು ಹೊರತುಪಡಿಸಿ ಬೇರೆ ಯಾರಿಗೂ ಸರಿಯಾಗಿ ಅರ್ಥವಾಗದೇ ಕಂಪ್ಯೂಟರ್‌ಗೆ ಮಾತ್ರ ಅರ್ಥವಾಗುವ ಕೆಲವು ಸಂಬಂಧಿ ವಾಕ್ಯಗಳು. ಈ ಕಂಪ್ಯೂಟರಿನ ವಾಕ್ಯಗಳನ್ನು ಒಬ್ಬರು ಬರೆದರೆ ಹೆಚ್ಚು ದೊಷಪೂರಿತವಾಗಿರುತ್ತವೆ ಎಂದು ನಂಬಿ ಇತ್ತೀಚಿನ ದಿನಗಳಲ್ಲಿ ಇಬ್ಬರು ಕೂತು ಬರೆಯುತ್ತಾರೆ. ಇದರ ಮೇಲೆ ಒಂದೆರಡು ತರಬೇತಿಗಳನ್ನು ನಡೆಸಲಾಯಿತು. ನಮ್ಮ ಟೀಮ್ ಒಳಗೆ ಮತ್ತೊಂದು ಬಾರಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಇವೆಲ್ಲವೂ ಇಲ್ಲಿ ನಡೆಯುತ್ತಿರಬೇಕಾದರೆ ಒಂದು ಶನಿವಾರ ಊರಿಗೆ ಹೋಗಿದ್ದೆ. ಊರೇನು ಬಹಳ ದೂರವಿಲ್ಲದ ಕಾರಣ ಬೆಂಗಳೂರಿನಲ್ಲಿ ಮಾಡಲು ಏನೂ ಕೆಲಸವಿಲ್ಲದಿದ್ದರೆ ಕೆಂಪು ಬಸ್ ಹಿಡಿದು ಹಳ್ಳಿ ಸೇರುವುದು ಮೊದಲಿನಿಂದಲೂ ಮಾಡಿಕೊಂಡು ಬಂದ ಸುಕಾರ್ಯ.

ಈ ಬಾರಿ ಹೋದಾಗ ಮುಂಗಾರಿನ ಮಳೆ ಚೆನ್ನಾಗಿಯೇ ಆಗಿತ್ತು. ಕೆಲವು ರೈತರು ಬಿತ್ತನೆ ಕಾರ್ಯವನ್ನು ಶುರು ಮಾಡಿದ್ದರು. ನಮ್ಮ ಮನೆಯಲ್ಲಿ ಹೊಲ ಹೆಚ್ಚಿಲ್ಲದ ಕಾರಣ ತೋಟಗಳಲ್ಲಿ ಸಮೃಧಿಯಾಗಿ ಬೆಳೆದಿದ್ದ ಕಾಂಗ್ರೆಸ್ ಗಿಡಗಳನ್ನು ನಾಶಮಾಡಲು ಒಂದೆರಡು ಬಾರಿ ಟ್ರಾಕ್ಟ್‌ರ್‌ನಲ್ಲಿ ಉಳುಮೆ ಮಾಡಿ ಮುಗಿಸಿಯಾಗಿತ್ತು. ಶನಿವಾರ ನಮ್ಮೆಲ್ಲ ತೋಟಗಳನ್ನು ಅಡ್ಡಾಡಿ ಸಂಜೆಯಾಗುತ್ತಿದ್ದಂತೆ ಪಕ್ಕದ ಊರಿನಲ್ಲಿರುವ ನಮ್ಮ ದೊಡ್ಡಪ್ಪನ ಊರಿಗೆ ಹೋದೆ. ನಮ್ಮ ದೊಡ್ಡಪ್ಪನಿಗೆ ಹೊಲ ಚೆನ್ನಾಗಿಯೇ ಇದೆ. ಮುಂಗಾರಿನಲ್ಲಿ ಸೂರ್ಯಕಾಂತಿ ಅಥವ ನೆಲಗಡಲೆ ಬೆಳೆದರೆ ಹಿಂಗಾರಿನಲ್ಲಿ ಹುರುಳಿ ಬೆಳೆಯುತ್ತಿದ್ದರು. ಈ ಬಾರಿ ಟ್ರಾಕ್ಟ್‌ರ್‌ನಲ್ಲಿ ಒಮ್ಮೆ ಹೊಲವನ್ನೆಲ್ಲ ಉಳುಮೆ ಮಾಡಿಸಿ, ಪಕ್ಕದೂರಿಗೆ ಹೋಗಿ ಕಳೆ ಆಯುವವರನ್ನು ಕರೆದು ತಂದು, ಅವರಿಗೆ ಸಂಬಳದ ಜೊತೆ ಒಂದು ನೈಂಟಿ ಹಾಕಿಸಿ ಹೊಲದ ಕಳೆಯನ್ನೆಲ್ಲ ಆಯಿಸಿಯಾಗಿತ್ತು. ಕೆಂಪು ನೆಲದ ಹೊಲ, ಎರಡು ಮಗ್ಗಲ ಬೇಸಾಯಕ್ಕೆ ಯಂಟೆಗಳೆಲ್ಲ ಚೂರಾಗಿ ಮಂಗಳೂರಿನ ಕಡಲ ಮರಳಿನಂತೆ, ಉಪ್ಪಿಟ್ಟಿನ ರವೆಯಂತೆ ಉದುರಾಗಿ ಹೋಗಿದೆ. ಬಿತ್ತಲು ಬೀಜ, ಗೊಬ್ಬರ ಮತ್ತು ಬಿತ್ತಲು ಬೇಕಾದ ಕೂರಿಗೆ ತಯಾರಾಗಿದೆ. ಪ್ರತಿ ಸಲ ಬಿತ್ತಲು ಬರುತ್ತಿದ್ದ ಈರಮ್ಮ ಈ ಬಾರಿ ಬರದ ಕಾರಣ ನಮ್ಮ ದೊಡ್ಡಮ್ಮನೇ ಬಿತ್ತುವುದು ಎಂದು ತೀರ್ಮಾನವಾಗಿದೆ. ಆದರೆ ಮುಖ್ಯವಾಗಿ ಕೂರಿಗೆ ಮುನ್ನಡೆಸಲು ಜೋಡಿ ಎತ್ತುಗಳು ಸಿಗುತ್ತಿಲ್ಲ. ನೂರು ಮನೆಯ ಹಳ್ಳಿ. ಊರನ್ನೆಲ್ಲ ಒಂದು ಸುತ್ತು ಬಂದರೂ ಒಂದು ಜೊತೆ ಎತ್ತು ಆ ದಿನಕ್ಕೆ ಇಲ್ಲ. ಊರಲ್ಲೆಲ್ಲ ಇರುವುದೇ ಮೂರೋ ನಾಲ್ಕೋ ಜೊತೆ ಎತ್ತುಗಳು. ಆ ಎತ್ತುಗಳಿಗೆ ಎಲ್ಲಿಲ್ಲದ ಪೈಪೂಟಿ. ಅವುಗಳ ಮಾಲೀಕರಿಗೆ ಎಲ್ಲಿಲ್ಲದ ಬೆಲೆ. ರಾತ್ರಿ ನೈಂಟಿ ಗ್ಯಾರೆಂಟಿ, ನೈಂಟಿ ಹಾಕದವರಿಗೆ  ಬೇರೆ ರೀತಿಯಲ್ಲಿ ವ್ಯವಸ್ಥೆ ಇದ್ದೆ ಇರುತ್ತೆ. 

ರಾತ್ರಿ ಊಟವಾದ ಮೇಲೆ ಬತ್ತಿದ ಬಾವಿಯ ದಡದಲ್ಲಿ ಕೂತು, ಮೇಲೆ ನಕ್ಷತ್ರಗಳನ್ನು ಏಣಿಸುತ್ತ, ಪಕ್ಕದಲ್ಲೇ ಪಾತ್ರೆ ತೊಳೆಯುತ್ತಿದ್ದ ದೊಡ್ದಮ್ಮನ ಸ್ಟೀಲ್ ಪಾತ್ರೆಗಳ ಸದ್ದನ್ನು ಕೇಳಿಸಿಕೊಳ್ಳುತ್ತ,  ಎಲೆ ಅಡಿಕೆ ಹಾಕಿಕೊಳ್ಳುತ್ತ, ನಮ್ಮ ದೊಡ್ಡಪ್ಪನನ್ನು ಕೇಳಿದೆ, ಮೊದಲು ಮನೇಲೆ ಎತ್ತು ಇದ್ದವಲ್ಲ, ಈಗ ಏನ್ ಮಾಡಿದೆ? ನಮ್ಮ ದೊಡ್ಡಪ್ಪ, ಅವನ್ನು ಸಾಕಲು ಆಗದೆ ಮಾರಿ ಬಹಳ ವರುಷಗಳೇ ಕಳೆದಿವೆ ಅಂದರು. ಯಾಕ್ ದೊಡ್ಡಪ್ಪ ನೀನು ಇಷ್ಟಪಟ್ಟು ಬೆಳಿಸಿದವು ಅಲ್ವ ಅಂದೆ. ದೊಡ್ದಮ್ಮ ಪಕ್ಕದ ಮನೆಯ ಗೌರಕ್ಕನ ಹತ್ರ ಧಾರವಾಯಿಯಲ್ಲಿ ಬರುವ ಯಾವುದೋ ವಿಲ್ಲನ್ ಪಾತ್ರವನ್ನು ಯಗ್ಗ ಮಗ್ಗ ಬೈತಿದ್ರು. ದೊಡ್ಡಪ್ಪ, ಬೇಸಿಗೆಲಿ ಮೇವಿರಲ್ಲ, ಏನ್ ಮಾಡದು. ಈಗ ಟ್ರಾಕ್ಟ್‌ರ್ ಇರೋದಕ್ಕೆ ಎತ್ತು ಅಷ್ಟು ಬೇಕಾಗಲ್ಲ, ಬರೀ ಬಿತ್ತಕೆ, ಕುಂಟೆ ಹೋಡಿಯೋಕೆ ಬೇಕು ಅಷ್ಟೇ. ಅದಕ್ಕೆ ಆ ಶಂಕ್ರನವು ಇದ್ವು ಮೊದಲು, ಈಗ ಆ ಬೋಳಿಮಗನು ಮಾರಿದನೆ ಅಂದ್ರು. ದೊಡ್ಡಮ್ಮನ ಮಾತು ಮುಗಿದು ಗೌರಕ್ಕನ ಮಾತು ಶುರುವಾಗಿತ್ತು.

ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ಊರಿಗೆ ಹೋದರೆ ನಮ್ಮ ದೊಡ್ಡಪ್ಪ ಅವರ ಮನೆಯಲ್ಲಿದ್ದ ಎತ್ತುಗಳ ಬಗ್ಗೆ ಬಹಳ ಹೇಳುತ್ತಿದ್ದರು. ಈಗ ಇರುವ ಎತ್ತುಗಳು, ಮುಂಚೆ ಇದ್ದ ಎತ್ತುಗಳು, ಊರಿಗೆ ಹೆಮ್ಮೆ ತಂದ ಎತ್ತುಗಳು, ಕಲ್ಲಸಾದರಳ್ಳಿ ಸಂತೆಯಲ್ಲಿ ಬಹಳ ದುಡ್ಡಿಗೆ ಹೋದ ಎತ್ತುಗಳ ಬಗ್ಗೆ ಗಂಟೆಗಟ್ಟಲೇ ಹೇಳುತ್ತಿದ್ದರು. ಸುತ್ತ ಮುತ್ತಲ ಹಳ್ಳಿಗಳಲ್ಲಿ ಯಾರು ಕಟ್ಟಲಾಗದಂತಹ ಎತ್ತುಗಳನ್ನು ನನ್ನ ಕೊಟ್ಟಿಗೆಲಿ ಕಟ್ಟಬೇಕು ಎಂದು ಆಸೆಪಡುತ್ತಿದ್ದರು. ಬೆಳಗ್ಗೆ ಎದ್ದು ಕೊಟ್ಟಿಗೆಯಿಂದ ಆಚೆ ಕಂಬಕ್ಕೆ ಎತ್ತುಗಳನ್ನು ಕಟ್ಟಿದ್ದರೆ ಕೈಲಿ ಬೇವಿನ ಕಡ್ಡಿ ಹಿಡಿದು ಮತ್ತೊಂದು ಕೈಲಿ ಎತ್ತುಗಳ ಬೆನ್ನು ಸವರುವುದು, ಅವುಗಳ ಮೇಲಿರುತ್ತಿದ್ದ ಉಣ್ಣೆಗಳನ್ನು ಕಿತ್ತು, ಕಾಲಿನಲ್ಲಿ ತುಳಿದು ಸತ್ತಿದೆಯ ಎಂದು ಪರೀಕ್ಷಿಸುವುದು ಅವರ ಬೆಳಗಿನ ದಿನಚರಿ. ನಾವು ಹತ್ತಿರದಲ್ಲಿ ಕಂಡರೆ ಹಾಯುವುದಿಲ್ಲ ಬಾ ಎಂದು ಕರೆದು ಎತ್ತುಗಳ ಕತ್ತು ಸವರಲು ಹೇಳುತ್ತಿದ್ದರು. ನಮ್ಮ ದೊಡ್ಡಪ್ಪನ ಮನೆಯಲ್ಲಿ ಅಷ್ಟೇಯಲ್ಲ, ಪ್ರತಿಯೊಬ್ಬ ರೈತರು ನಮ್ಮ ದೊಡ್ಡಪ್ಪ ಮಾಡುತ್ತಿದ್ದುದ್ದನ್ನೇ ಮಾಡುತ್ತಿದ್ದರು. ಮನೆಗೆ ಕನಿಷ್ಠ ಪಕ್ಷ ಒಂದು ಜೊತೆ ಎತ್ತುಗಳಾದರು ಇದ್ದವು. ಪ್ರತಿಯೊಬ್ಬರ ಮನೆಯ ಹೊಸ್ತಲಿನ ಎದುರಿಗೆ ನಡುಮನೆಯಲ್ಲಿ ಮನೆಯ ಯಜಮಾನರು ಬಿಳಿ ಪಂಚೆ ಉಟ್ಟು ಅವರ ಎರಡು ಎತ್ತುಗಳ ಜೊತೆಗಿನ ಪಟ ರಾರಾಜಿಸುತ್ತಿತ್ತು.

ನಮ್ಮ ಮನೆಯಲ್ಲೂ ಎರಡು ಜೊತೆ ಎತ್ತುಗಳಿದ್ದವು. ಒಂದೊಂದು ಜೊತೆಗೂ ಒಬ್ಬ ಆಳು. ಅವರಿಬ್ಬರಲ್ಲೂ ಪೈಪೊಟಿ. ವಯಸ್ಸಾದ ನಿಂಗಣ್ಣ ವಯಸ್ಸಾದ ಕೆಂದೆತ್ತಿನ ಜೋಡಿಯನ್ನು ನೋಡಿ ಕೊಳ್ಳುತ್ತಿದ್ದರು. ಇವು ಬಹಳ ಸೌಮ್ಯ ಸ್ವಭಾವದವು. ಯಾರಿಗೂ ಅವುಗಳ ಕೊಂಬನ್ನು ತೋರಿಸದಂತಹವು. ಹಬ್ಬಗಳ್ಳಲ್ಲಿ ಎತ್ತಿನ ಪೂಜೆ ಮಾಡಲು ಈ ಜೋಡಿಯನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಜೋಡಿಗೆ ಮಾತ್ರ ನಾವೇ ಪೂಜೆಯ ನಂತರ ಎಡೆ ತಿನಿಸುತ್ತಿದ್ದೆವು. ನಿಂಗಣ್ಣ ಬರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸೋಮ, ನಮ್ಮ ಮನೆಯ ಬಿಳಿ ತರುಣ ಎತ್ತುಗಳನ್ನ ನೋಡಿಕೊಳ್ಳುತ್ತಿದ್ದ. ಇವುಗಳ ಬಳಿ ಹೋಗಲೂ ಬಿಡುತ್ತಿರಲಿಲ್ಲ. ಅವು ಅಷ್ಟು ಭಯ ಹುಟ್ಟಿಸುತ್ತಿದ್ದವು. ಅಷ್ಟೇ ಸುಂದರವಾಗಿದ್ದವು. ಪ್ರತಿ ಸೋಮವಾರ ಅವುಗಳ ಮೈ ತೊಳೆದಾಗ ಅವುಗಳನ್ನು ನೋಡುವುದೆ ಒಂದು ಖುಷಿ. ಅವುಗಳ ಮೈಕಟ್ಟು ಸೋಮನ ಮೈಕಟ್ಟಿನಂತೆ ದಷ್ಟ ಪುಷ್ಟವಾಗಿತ್ತು. ಇವುಗಳ  ಪೂಜೆ ಮತ್ತು ಎಡೆ ಸೋಮನ ಜವಬ್ದಾರಿ. ನಮ್ಮನ್ನು ಅವುಗಳ ಬಳಿಯೂ ಬಿಟ್ಟುಕೊಡುತ್ತಿರಲಿಲ್ಲ. ಈ ಜೋಡಿ ಕೇವಲ ಅವನ ಮಾತನ್ನಷ್ಟೆ ಕೇಳುತ್ತವೆ ಎಂದು ಬಹಳ ಹೆಮ್ಮೆ ಪಡುತ್ತಿದ್ದ ಸೋಮ. ಊರಿನವರೆಲ್ಲರ ಮುಂದೆ ಅವನ ಎತ್ತುಗಳ ಬಗ್ಗೆ ಕೊಚ್ಚಿ ಕೊಳ್ಳುತ್ತಿದ್ದ.  ಈ ಎರಡು ಜೋಡಿಗೂ ಹುರುಳಿ ನುಚ್ಚು ಕೊಡುವುದು, ಬಣವೆಯಿಂದ ಮೇವು ತಂದು ಕೊಟ್ಟಿಗೆಯಲ್ಲಿ ಇಡುವುದು, ಮಧ್ಯ ರಾತ್ರಿ ಎದ್ದು ಮೇವಾಕುವುದು,   ಬೆಳಗ್ಗೆ ಮತ್ತು ಸಂಜೆ ಉಳುಮೆ ಮಾಡುವುದು, ಸೋಮವಾರ ಕೆರೆಯಲ್ಲಿ ಅವುಗಳ ಮೈ ತೊಳೆಯುವುದು,  ಬಸವನ ಹಬ್ಬದಲ್ಲಿ ಸಿಂಗಾರ ಮಾಡಿ ಊರ ಹೊರಗಿನ ದೇವಸ್ಥಾನದ ಬಳಿ ಪೂಜೆಗೆ ಕರೆದುಕೊಂಡು ಹೋಗುವುದು  ಮತ್ತು ಪೂಜೆಯ ನಂತರ ಊರ ಬೀದಿಗಳಲ್ಲಿ ಅವುಗಳ ಹಿಂದೆ ಓಡುವುದು. ಎಲ್ಲವೂ ನಿಂಗಣ್ಣ ಮತ್ತು ಸೋಮರ ಕೆಲಸ. ಇಬ್ಬರೂ ಅಷ್ಟೇ ಅಚ್ಚುಕಟ್ಟಾಗಿ, ಪ್ರೀತಿಯಿಂದ ಅವುಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ನಮ್ಮ ಮನೆಯಲ್ಲಿ ಒಂದು ಜೊತೆ ಎತ್ತುಗಳೂ ಇಲ್ಲ. ಟ್ರಾಕ್ಟ್‌ರ್ ತಂದಾಗ ಒಂದೇ ಜೊತೆ ಸಾಕು ಎಂದು ನಿಂಗಣ್ಣ ನೋಡಿಕೊಳ್ಳುತ್ತಿದ್ದ ಕೆಂದೆತ್ತಿನ ಜೋಡಿ ಮಾರಿದರು. ಸೋಮ ಮದುವೆಯಾಗಿ ಮನೆ ಬಿಟ್ಟ ನಂತರ ಕ್ರಮೇಣ ಬಿಳಿ ಎತ್ತಿನ ಜೋಡಿಯನ್ನು ಮಾರಿದರು. 

ಒಂದು ಕಾಲದಲ್ಲಿ ಜೋಡಿ ಎತ್ತುಗಳು ಆ ಮನೆಯ ಅಂತಸ್ತನ್ನು ಪ್ರತಿಬಿಂಬಿಸುತ್ತಿದ್ದವು. ನನ್ನ ಕೊಟ್ಟಿಗೆಯಲ್ಲಿ ಅಂತ ಎತ್ತುಗಳಿವೆ, ಇಂತ ಎತ್ತುಗಳಿವೆ ಎಂದು ಅವುಗಳ ವರ್ಣನೆಯಲ್ಲಿ ಜನ ಮುಳುಗಿರುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅವುಗಳ ಮೈ ತೊಳೆಯದೆ ಇವರು ಬಚ್ಚಲಿಗೆ ಇಳಿಯುತ್ತಿರಲಿಲ್ಲ. ಅವುಗಳಿಗೆ ಹಬ್ಬದೂಟವಾದ ಮೇಲೆ ಮನೆಯವರಿಗೆ. ಕೆಲವೊಮ್ಮೆ ಮನೆಯ ಪಡಸಾಲೆಗೆ ಎತ್ತುಗಳನ್ನು ಕರೆದುಕೊಂಡು ಬಂದು ಪೂಜೆ ಮಾಡಿದ್ದು ಉಂಟು. ಈಗ ಬೈಕುಗಳು, ಕಾರುಗಳು, ಜೀಪುಗಳು ಮತ್ತು ಟ್ರಾಕ್ಟರ್‌ಗಳು ಜೋಡಿ ಎತ್ತಿನ ಜಾಗದಲ್ಲಿವೆ. ಪೇರ್ ಪ್ರೊಗ್ರಾಮಿಂಗ್ ಮೊದಲು ಶುರುಮಾಡಿದ್ದು ನಮ್ಮ ಮನೆಗಳಲ್ಲಿದ್ದ ಎತ್ತುಗಳು. ನಾವು ಅವುಗಳನ್ನು ಅನುಸರಿಸುತ್ತಿದ್ದೇವೆ ಅಷ್ಟೇ ಎಂದು ಅನಿಸತೊಡಗಿದೆ. 

Sunday, September 14, 2014

ವನಸಿರಿ

ಅಲ್ಲಿ ನೋಡು ಇಲ್ಲಿ ನೋಡು
ಹಕ್ಕಿಯ ಸಾಲು
ಆ ಮಳೆಯು ಭುವಿಗಿಳಿದು
ಮರ ಗಿಡಗಳ ಪಾಲು

ಕುಣಿಯುತಿವೆ ವನರಾಶಿ
ನೋಡಲೆಷ್ಟು ಚೆಂದ
ಅದರೊಳಗಣ ಬದುಕು
ಇನ್ನಷ್ಟು ಅಂದ

ವನ್ಯಜೀವಿ, ವನರಾಶಿ
ನಮಗೆ ಸಿಕ್ಕ ವರ,
ಅದು ಉಳಿಯಬೇಕಾದರೆ
ಬೇಳೆಸಬೇಕು ಮರ.

Sunday, June 22, 2014

ನಡೆಯಲು ಬಿಡದವರು!

ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಾಗ ಸಿಕ್ಕ ಉಪ್ಪಿನಕಾಯಿ ಮಲ್ಲಣ್ಣ ಶರಣು ಅಪ್ಪೋರಿಗೆ ಅಂದ್ರು. ಅವರು ಎಲ್ಲರನ್ನು ಮಾತನಾಡಿಸುವುದೇ ಹಾಗೆ. ಬಸವ ತತ್ವದ ಅನುಯಾಯಿಗಳು ಮತ್ತು ಪ್ರಚಾರಕರು. ಬರೆಯಲು ಬರದಿದ್ದರೂ ಕೆಲವಾರು ವಚನಗಳನ್ನು ಪಟಪಟನೆ ಹೇಳಬಲ್ಲರು ಮತ್ತು ಎಂತ ದಡ್ಡನಿಗೂ ಅರ್ಥವಾಗುವಂತೆ ವಿವರಿಸಬಲ್ಲರು.  ಉಪ್ಪಿನಕಾಯಿ ವ್ಯಾಪಾರ ಅವರ ಕಾಯಕ. ಆದ್ದರಿಂದಲೇ ಅವರು ಸುತ್ತಮುತ್ತಲ ಹಳ್ಳಿಗಳಲ್ಲಿ ಉಪ್ಪಿನಕಾಯಿ ಮಲ್ಲಣ್ಣ ಅಥವಾ ಮಲ್ಲೇದೇವರು ಎಂದು ಪ್ರಸಿದ್ಧಿ. ಅವರು ಚಿಕ್ಕಮಗಳೂರಿಗೆ ಯಾವುದೊ ಕೆಲಸದ ಮೇಲೆ ಹೊರಟಿದ್ದರು. ಬಸ್ಸು ಇಳಿದ ತಕ್ಷಣ ಸಿಕ್ಕವರು ಹೂವಿನ ಶಂಕರಪ್ಪ, ಸುತ್ತಮುತ್ತಲ ಹಳ್ಳಿಗಳಿಗೆ ಹಬ್ಬ ಹರಿದಿನಗಳಲ್ಲಿ ಹೂವನ್ನು ಪೂರೈಸುವವರು ಶಂಕ್ರಪ್ಪನವರೆ. ಅವರ ಮಕ್ಕಳು ನನಗಿಂತ ವಯಸ್ಸಿನಲ್ಲಿ ಚಿಕ್ಕವರು, ಅವರ ಪಿ.ಯು.ಸಿ ಮುಗಿದಾಗ ಯಾವ ಕಾಲೇಜಿಗೆ ಸೇರಿಸುವುದೂ ಸೇರಿದಂತೆ ಶಂಕರಪ್ಪನವರ ಅನೇಕ ಪ್ರಶ್ನೆಗಳನ್ನು ಉತ್ತರಿಸಿದ್ದರಿಂದ ನಾನು ಅವರಿಗೆ ಚಿರಪರಿಚಿತ ಕೂಡ. ಸಣ್ಣ ಊರಿನಲ್ಲಿ ಎಲ್ಲರೂ ಎಲ್ಲರಿಗೂ ಪರಿಚಿತರೆ. ಸಾಮಾನ್ಯವಾಗಿ ಬಸ್ಸಿನಿಂದ ಕೆಳಗೆ ಇಳಿದ ತಕ್ಷಣ ಸಿಗುವುದು ಇವರೇ. ಇವರಿಲ್ಲದಿದ್ದರೆ ಇವರ ಶ್ರೀಮತಿಯವರು ಹೂವು ಕಟ್ಟುತ್ತಾ ಕೂತಿರುತ್ತಾರೆ. ಈ ಬಾರಿ ಸಿಕ್ಕ ಶಂಕ್ರಪ್ಪನವರು, ಬೆಂಗಳೂರಿನಿಂದ ಈವಾಗ ಬರ್ತಿದಿರ? ಫೋನ್ ಮಾಡಿದಿರಾ ಮನೆಗೆ? ಯಾರಾದ್ರೂ ಗಾಡಿ ತರ್ತಾರೆ ಕೂತಿರಿ ಅಂದ್ರು. ನಾನು ಇಲ್ಲ, ಸ್ವಲ್ಪ ದೂರ ಅಲ್ವೇ, ನಡೆದೆ ಹೋಗುತ್ತೀನಿ ಅಂದೇ. ಅವರು ಸರಿ ಅಂದು ಮತ್ತೆ ಅವರ ಕೆಲಸಕ್ಕೆ ಹಿಂದಿರುಗಿದರು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯವರು ಪುಕ್ಕಟೆಯಾಗಿ ಕೊಟ್ಟಿದ್ದ  ಬ್ಯಾಗನ್ನು ಹಿಂದೆ ಹಾಕಿಕೊಂಡು, ಬಿಸಿಲಲ್ಲಿ ಮುಖ ಬಾಡದಿರಲಿ ಎಂದು ಈಗ ಕೆಲಸ ಮಾಡುತ್ತಿರುವ ಕಂಪನಿಯವರು ಕೊಟ್ಟಿರುವ ಟೋಪಿಯನ್ನು ಹಾಕಿಕೊಂಡು ನಮ್ಮೂರಿನ ಕಡೆಗೆ ಹೆಜ್ಜೆ ಹಾಕಿದೆ. ಈಗ ಐ.ಟಿ ಕಂಪನಿಗಳಲ್ಲಿ ಕೊಡುವ ಬೋನಸ್ಸು ಕಡಿಮೆಯಾಗಿ, ಪುಕ್ಕಟೆಯಾಗಿ ಸಿಗುವ ಈ ತರಹದ ವಸ್ತುಗಳಲ್ಲೇ ನಾವು ಖುಷಿಯನ್ನು ಹುಡುಕಬೇಕಾಗಿದೆ. ಆದ್ದರಿಂದಲೇ, ಬೆಂಗಳೂರಿನಲ್ಲಿ ಇಬ್ಬರಲ್ಲಿ ಒಬ್ಬರ ಬೆನ್ನ ಹಿಂದೆ ಒಂದಲ್ಲ ಒಂದು ಕಂಪನಿಯ ಹೆಸರಿರುವ ಬ್ಯಾಗು ಎಲ್ಲರ ಕಣ್ಣಿಗೂ ಬೀಳುತ್ತದೆ. ಇದರಿಂದಲೂ ಒಂದು ಉಪಯೋಗ ಇದೆ. ಒಮ್ಮೆ ಹೈದರಾಬಾದಿನ ಒಂದು ಶಾಪಿಂಗ್ ಮಾಲ್ ನಲ್ಲಿ ನಾನು ಹಾಕಿಕೊಂಡ ತರಹದ ಬ್ಯಾಗನ್ನೇ ಮತ್ತೊಂದು ಸುಂದರ ಹುಡುಗಿ ಅವಳ ಬೆನ್ನಿಗೆ ಹಾಕಿಕೊಂಡಿದ್ದಳು. ಆಗ ತಾನೇ ನಾನು ಕೆಲಸಕ್ಕೆ ಸೇರಿದ್ದೆ, ಅವಳು ನಮ್ಮ ಕಂಪನಿಯಲ್ಲೇ ಕೆಲಸ ಮಾಡುತ್ತಿರಬಹುದು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಮ್ಮ ಮೇಷ್ಟ್ರುಗಳು ಕಾಲೇಜುಗಳಲ್ಲಿ ಹೇಳಿದ್ದು ತಲೆಯಲ್ಲಿ ಆ ಕ್ಷಣಕ್ಕೆ ಹಾದುಹೋಯಿತು. ಹಾಗಾಗಿ ಹೋಗಿ, ಮಾತಾಡಿಸಿದೆ. ಅವಳು ನಗುತ್ತಲೇ, ನಾನು ಎಲ್ಲೂ ಕೆಲಸ ಮಾಡುತ್ತಿಲ್ಲ, ಇದು ನನ್ನ ದೊಡ್ಡಪ್ಪನ ಮಗ ಕೊಟ್ಟ ಬ್ಯಾಗು ಅಂದಳು. ನನಗೆ ಸ್ವಲ್ಪ ಮುಜಗರವಾದರೂ ತೋರ್ಪಡಿಸದೆ ಹಿಂದಿರುಗಿ ಮಾತನಾಡಿಸಲು ಹುರಿದುಂಬಿಸಿದ ನನ್ನ ಕಂಪನಿಯ ಸಹೋದ್ಯೋಗಿಗಳಿಗೆ ವಿಷಯ ಮುಟ್ಟಿಸಿದೆ. ನನಗಿಂತಲೂ ಹೆಚ್ಚು ನಿರಾಶೆಗೊಂಡವರು ಅವರೇ.  

ಅಲ್ಲೇ, ಒಂದು ಸಣ್ಣ ಹೋಟೆಲ್ಲಿನಲ್ಲಿ ದಿನಪತ್ರಿಕೆ ಓದಿಕೊಂಡು ಕುಳಿತ್ತಿದ್ದ ನನ್ನ ದೊಡ್ಡಪ್ಪ, ಮನೆಗೆ ಫೋನ್ ಮಾಡೋ ಬೈಕ್ ತರ್ತಾರೆ ಅಂದ್ರು. ಅವರು ಬೇರೆ ಎಲ್ಲೋ ಹೋಗುವವರಿದ್ದರು ಎಂದು ಅನಿಸುತ್ತೆ. ನಮ್ಮ ಮನೆಯಲ್ಲಿ ನಮ್ಮ ಅಪ್ಪನೇ ದೊಡ್ಡವರು, ಆದರೆ ನಮ್ಮ ಅಜ್ಜನ ಅಪ್ಪನ(ಮುತ್ತಜ್ಜನ) ಅಜ್ಜನ(ಗಿರಿಯಜ್ಜನ) ಅಣ್ಣ ತಮ್ಮಂದಿರ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಗಿರಿಮಕ್ಕಳು ನಮಗೆ ಅಣ್ಣ ತಮ್ಮಂದಿರು ಎಂದು ಭಾವಿಸಲಾಗುತ್ತದೆ. ಮದುವೆಯಂತಹ ದೊಡ್ಡ ಕಾರ್ಯಗಳನ್ನು ಎಲ್ಲರೂ ಒಟ್ಟಾಗಿ ಮಾಡುತ್ತಾರೆ. ಈಗ ಸಿಕ್ಕ ದೊಡ್ದಪ್ಪ ನಮ್ಮ ಗಿರಿಯಜ್ಜನ ಅಪ್ಪನ ಅಣ್ಣನ  ವಂಶವೃಕ್ಷದಲ್ಲಿ ಬರುತ್ತಾರೆ. ಅವರಿಗೂ ನಾನು ನಡೆದು ಕೊಂಡೆ ಹೋಗುತ್ತೇನೆ ಎಂದು ಆಗ ತಾನೇ ಮಾಡಿದ್ದ ಸಿಮೆಂಟ್ ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದೆ. ನನಗೆ ಶಿಕ್ಷಣ ಸಾಲ ಕೊಟ್ಟಿದ್ದ ವಿಜಯ ಬ್ಯಾಂಕ್ ಮ್ಯಾನೇಜರ್ ಸಿಕ್ಕು ಯಾವುದಾದರು ಉಳಿತಾಯ ಮಾಡುವುದಿದ್ದರೆ ನಮ್ಮ ಬ್ಯಾಂಕಿನಲ್ಲೇ ಮಾಡಪ್ಪ ಅಂದ್ರು. ಸಾಲ ಕೊಡಬೇಕಾದರೆ ಇದ್ದ ಮುಖಕ್ಕೂ ಇಂದಿನ ಮುಖಕ್ಕೂ ಬಹಳ ವ್ಯತ್ಯಾಸ ಇತ್ತು. ನಮ್ಮ ಅಪ್ಪನ ಹತ್ತಿರ ಮಾತನಾಡಿ ನಿಮಗೆ ತಿಳಿಸುತ್ತೇನೆ ಎಂದು ಹೇಳಿ ಟೋಪಿಯನ್ನು ಸರಿ ಮಾಡಿಕೊಂಡು ನಮ್ಮೂರ ಕಡೆಗೆ ಹೊರಟೆ. 

ಮುಂದೆ ಬಂದಾಗ ಒಂದು ಸಣ್ಣ ಟೀ ಅಂಗಡಿಯಲ್ಲಿ ಟೀ ಹೀರುತ್ತಾ ಕುಳಿತ್ತಿದ್ದ ಸೀಮೆಯಣ್ಣೆ ಸೀನಣ್ಣ ಮತ್ತು  ಪಿಗ್ನಿ ವಸೂಲು ಮಾಡುವ ಶಾಂತಣ್ಣ ಬಾರಪ್ಪ ಟೀ ಕುಡಿ ಅಂದ್ರು. ಸೀನಣ್ಣ ಮಾತು ಶುರು ಮಾಡಿ, ಫೋನ್ ಮಾಡೋಣ ಯಾರಾದ್ರೂ ಬಂದು ಕರೆದುಕೊಂಡು ಹೋಗುತ್ತಾರೆ, ಬಿಸಿಲು ಏರ್ತಿದೆ ಅಂದ್ರು. ನಾನು ಹೇಗಿದ್ದೀರಾ? ತಿಂಡಿ ಆಯ್ತಾ ಅಂತ ವಿಚಾರಿಸಿದೆ. ನನಗೆ ನಡೆಯುವುದು ಅಂದ್ರೆ ಇಷ್ಟ ನಾನು ನಡೆದೇ ಹೋಗುತ್ತೇನೆ ಅಂದೆ. ಜೀವಮಾನದಲ್ಲೂ ನಮ್ಮ ಹಳ್ಳಿಯ ಒಬ್ಬ ಹುಡುಗ ನಡೆಯುವುದು ಇಷ್ಟ ಅಂತಾನೆ ಅಂತ ಅಂದುಕೊಂಡಿರಲಿಲ್ಲ ಎಂಬ ಭಾವನೆ ಅವರ ಮುಖದ ಮೇಲಿತ್ತು. ಹಳ್ಳಿಗಳಲ್ಲಿ ನಡೆಯುವುದು, ಓಡುವುದೆಲ್ಲ ಇಷ್ಟಪಡುವಂತಹವು ಅಲ್ಲವೇ ಅಲ್ಲ. ಮನೆಯಲ್ಲಿ ವಾಹನವಿಲ್ಲದವರು ನಡೆಯುತ್ತಾರೆ ಮತ್ತು ವಾಹನವಿದ್ದವರು ನಡೆಯುವುದಿಲ್ಲ ಅಷ್ಟೇ. ಶಾಂತಣ್ಣ, ಈ ಉರಿ ಬಿಸಿಲಲ್ಲಿ ನಡೆದುಕೊಂಡು ಹೋಗುವುದು ಬೇಡ. ಇರು ನಾನೇ ಫೋನ್ ಮಾಡ್ತೀನಿ ಅಂದು ಅವರ ಫೋನ್ ತೆಗೆದರು, ಬೇಡ ಬೇಡ ನನಗೆ ಅಭ್ಯಾಸ ಇದೆ. ದಿನ ಬೆಂಗಳೂರಿನಲ್ಲಿ ಮನೆಯ ಹತ್ತಿರದ ಪಾರ್ಕಿನಲ್ಲಿ ಒಂದು ಗಂಟೆ ನಡೆಯಲಿಕ್ಕೆ ಹೋಗ್ತೇನೆ ಅಂದೆ. ಹಳ್ಳಿಗಳಿಗೂ ಟಿವಿಗಳು ಹೋಗಿರುವುದರಿಂದ ಪಟ್ಟಣಗಳ ಜೀವನ ಶೈಲಿ ಸಂಪೂರ್ಣವಾಗಿ ಗೊತ್ತಿಲ್ಲದಿದ್ದರೂ, ಅದರ ಅರಿವು ಹಳ್ಳಿಯಲ್ಲಿ ಇರುವ ಎಲ್ಲರಿಗೂ ಇದೆ. ನಮ್ಮ ಅಪ್ಪ ಸುತ್ತಮುತ್ತಲ ಹಳ್ಳಿಗಳಲ್ಲಿ ಪರಿಚಿತರು. ಹಾಗಾಗಿ ಬಹಳಷ್ಟು ಜನ ನನಗೂ ಪರಿಚಿತರೆ. ನನ್ನ ಮೊದಲ ಎರಡು ತರಗತಿಗಳನ್ನು ಇದೆ ಊರಿನಲ್ಲಿ ಓದಿದ್ದೆ. ಹಾಗಾಗಿ ಚಿಕ್ಕವನಿದ್ದಾಗ ಇವರನ್ನೆಲ್ಲ ಏಕವಚನದಲ್ಲಿ ಮತಾನಡಿಸಿದ್ದು ಇದೆ. ಅದಕ್ಕೆ ನಮ್ಮ ಅಮ್ಮನಿಂದ ಚೆನ್ನಾಗಿ ಒದೆ ತಿಂದದ್ದು ಇನ್ನೂ ಮಾಸದಂತೆ ಮನಸಿನಲ್ಲಿ ಇದೆ. ಇವರನ್ನೂ ಸಾಗಾಕಿ, ಹೋಗೋಣ ಎಂದು ಮತ್ತೆ ನನ್ನ ದಾರಿ ಹಿಡಿದೆ.

ಮುಖ್ಯ ದಾರಿಯಿಂದ ಅಡ್ಡದಾರಿಯಲ್ಲಿ ನನ್ನ ಮೋಜಿನ ನಡೆ ಸಾಗಿತ್ತು. ಈಗ ಸಿಕ್ಕಿದ್ದು ಗೊಬ್ಬರದ ಸೋಮಣ್ಣ, ಗೊಬ್ಬರ ಮಾರುವುದರಿಂದ ಜನರೆಲ್ಲಾ ಅವರನ್ನು ಕರೆಯುವುದು ಗೊಬ್ಬರದ ಸೋಮಣ್ಣ ಎಂದೇ, ಇವರದೂ ಅದೇ ಮಾತು. ಯಾಕಪ್ಪ ಈ ಉರಿ ಬಿಸಿಲಲ್ಲಿ ನಡೆದುಕೊಂಡು ಹೋಗುತ್ತಿದ್ದಿಯ ಅಂತ? ಅಷ್ಟೊತ್ತಿಗೆ ನನ್ನ ಸಾವಧಾನ ಕರಗಿ ಹೋಗಿತ್ತು. ನಿಮಗೇನ್ರಿ ಕಷ್ಟ ಅನ್ನೋಣ ಅಂತ ಅನ್ಕೊಂಡೆ. ಆದ್ರೆ ಈ ರಾಜಕೀಯದಲ್ಲಿ ಇರುವ ಕುಟುಂಬದವರು ಆಗೆಲ್ಲ ಮಾತಾಡುವ ಅಧಿಕಾರ ಕಳೆದುಕೊಂಡಿರುತ್ತಾರೆ. ಮುಂದಿನ ಸಾರಿ ಮತ ಹಾಕದಿರಲು ಇದೊಂದೇ ಮಾತು ಸಾಕು ನಮಗೆ. ಎಷ್ಟೇ ಆದರೂ ಮಾತೆ ಅಲ್ಲವೇ ಮಾಣಿಕ್ಯ? ನಾನು ಹಿಂದಿನವರಿಗೆ ಹೇಳಿದಂತೆ ಇವರಿಗೂ ಉತ್ತರಿಸಿದೆ. ಅಷ್ಟರೊಳಗೆ ಮನೆಯಿಂದ ಆಚೆ ಬಂದ ಅವರ ಶ್ರೀಮತಿ ನೀರು ತಂದು ಕೊಟ್ಟರು. ನೀರು ನನ್ನ ಬಿಸ್ಲೇರಿ ನೀರಿಗಿಂತ ಸಿಹಿಯಾಗಿತ್ತು. ಹೊಸ ಬೋರ್ ಕೊರೆಸಿದ್ರ ಅಂದೇ? ಅವರು ಇಲ್ಲ ನಮ್ಮೂರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನೀರು ಶುದ್ಧೀಕರಣ ಘಟಕ ಬಂದಿದೆ. ಕೇವಲ ೨ ರುಪಾಯಿಗೆ ೨೦ ಲೀಟರ್ ನೀರು ಸಿಗುತ್ತೆ ಅಂದ್ರು. ಅಬ್ಬಾ ಪುಣ್ಯವಂತರು ಅಂತ ಮನಸಿನಲ್ಲಿ ಅಂದುಕೊಂಡು ನನ್ನ ದಾರಿ ನೋಡಿದೆ. ಮತ್ತೆ ದಾರಿಯಲ್ಲಿ ನ್ಯಾಯಬೆಲೆ ಅಂಗಡಿ ಜಯಣ್ಣ ಸಿಕ್ಕರು. ಹೋ, ಮತ್ತೆ ನಾನು ಯಾಕೆ ನಡೆದುಕೊಂಡು ಹೋಗ್ತಿದೀನಿ ಅಂತ ವಿವರಿಸಬೇಕಾಲ್ಲ ಅಂತ ವ್ಯಥೆ ಪಟ್ಟೆ. ನಮ್ಮೂರಿನ ಬನಶಂಕರಿಯ ದಯೆ, ಅವರು ಆ ಪ್ರಶ್ನೆ ಕೇಳದೆ ಈವಾಗ ಬಂದ್ಯಾ ಎಂದು ಕೇಳಿ ಅವರ ಪಾಡಿಗೆ ಅವರ ನ್ಯಾಯಬೆಲೆ ಅಂಗಡಿ ಕಡೆಗೆ ಹೊರಟರು. 

ಕೊನೆಗೂ ದಾರಿಯಲ್ಲಿ ಸಿಕ್ಕವರೆನೆಲ್ಲ ಮಾತನಾಡಿಸಿ ದೇವನೂರ ಮೂಲೆಗೆ ಬಂದೆ. ಇಲ್ಲಿಂದ ನಮ್ಮೂರಿಗೆ ಎರಡು ದಾರಿಗಳಿವೆ. ಒಂದು ಇತ್ತೀಚಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಆಗಿರುವ ಡಾಂಬಾರು ರಸ್ತೆ ಅಥವಾ ಕೆರೆಯ ದಾರಿ ಹಿಡಿಯುವುದು. ಮಳೆಯಿಲ್ಲದೆ ಕೆರೆ ಖಾಲಿ ಬಿದ್ದು ಬಹಳ ವರ್ಷಗಳೇ ಕಳೆದಿವೆ. ನಾವು ಚಿಕ್ಕವರಿದ್ದಾಗ ಶಾಲೆಗೆ ಹೋಗುತ್ತಿದ್ದಾಗ ಕಚ್ಚಾ ರಸ್ತೆಯಲ್ಲೋ ಅಥವಾ ಯಂಕಮ್ಮನ ಆಲದ ಮರದಿಂದ ತೆಂಗಿನ ತೋಟಗಳ ಸಾಲಿನಲ್ಲಿ ಹೋಗಿ ಊರು ಸೇರುತ್ತಿದ್ದೆವು. ಈ ಬಾರಿ ನಾನು ಕೆರೆಯೋಳಗಿಂದ ಹೋಗೋಣ ಎಂದು ಬಸ್ಸು ಇಳಿಯುವ ಮೊದಲೇ ತಿರ್ಮಾನಿಸಿದ್ದೆ. ಇನ್ನೇನು ಕೆರೆ ದಾರಿ ಹಿಡಿಯುವುದರೊಳಗೆ ಒಂದು ಬೈಕ್ ನಲ್ಲಿ ಬಂದ ನಮ್ಮೂರಿನ ಅಶೋಕಣ್ಣ ಮತ್ತು ಮಲ್ಲಿಕಣ್ಣ ಬಾ ನೀನು ಬೈಕ್ ಅಲ್ಲಿ ಹೋಗೋಣ ಅಂದ್ರು. ನಮೂರಲ್ಲಿ ಮೂರು ಮತ್ತು ನಾಲ್ಕು ಜನ ಒಂದೇ ಬೈಕಿನಲ್ಲಿ ಸವಾರಿ ಮಾಡುವುದು ಬಹಳ ಅಪರೂಪವೇನಲ್ಲ. ಅವರಿಗೂ ನಾನು ನಡೆದು ಕೊಂಡೆ ಬರುತ್ತೇನೆ ಎಂದು ಹೇಳಿ ಕೆರೆ ದಾರಿ ಹಿಡಿದೆ. ಬತ್ತಿದ ಹಳ್ಳ ದಾಟಿದ ಮೇಲೆ ನಿಧಾನವಾಗಿ ನಡೆಯುತ್ತಿದ್ದ ಚನ್ನೇಗೌಡ್ರು ಕಂಡರು. ಒಹ್, ಹೋದ ಬಾರಿ ಬಂದಾಗಲೂ ಇವರೇ ನನಗೆ ಕಂಪನಿ ಕೊಟ್ಟಿದ್ದು ಎಂದು ಅಂದುಕೊಂಡು ಅವರ ಸಮಕ್ಕೆ ನಾನೂ ನಡೆದೆ. ಅವರು ನಾನು ಬಂದಿದ್ದನ್ನು ಗಮನಿಸಿ, ಈಗ ಬರ್ತಿದ್ಯಾ? ಬೈಕ್ ತರುತ್ತಿದ್ದರು ಯಾರಾದ್ರೂ ಮನೆಗೆ ಫೋನ್ ಮಾಡಿದ್ರೆ ಅಂದ್ರು. ಇಲ್ಲ ನಾನು ನಿಮ್ಮ ಜೊತೆ ನಡೆದುಕೊಂಡೇ ಬರ್ತೀನಿ ಅಂದೆ. ಅವರು ಕಳೆದ ಸರಿ ಕೂಡ ನಾವು ಈ ಕೆರೆಯಲ್ಲೇ ಸಿಕ್ಕಿದ್ವಿ ಅಲ್ವಾ ಅಂದು ಇಬ್ಬರು ಅದು ಇದು ಮಾತಾಡಿಕೊಂಡು ಊರಿನ ಕಡೆಗೆ ಹೊರೆಟೆವು. ದಾರಿಯಲ್ಲಿ ಅವರ ತಲೆಮಾರಿನ ದೇವನೂರಿನ ಜನ ಅವರ ತೋಟಗಳಿಗೆ ಬಂದು ಮನೆಗೆ ವಾಪಸು ಹೋಗುತ್ತಿದ್ದವರಿಗೆ ನನ್ನ ಪರಿಚಯ ಮಾಡಿಸಿದರು. ಈಗಿನ ಹುಡಗರು ಯಾರು ನಡೆಯೋಲ್ಲಪ್ಪ ಎಲ್ಲ ಹಾರುತ್ತಾರೆ ಅಂತ ಅವರ ಶೈಲಿಯಲ್ಲಿ ನಮ್ಮ ಜೀವನ ಶೈಲಿಯ ಬಗ್ಗೆ ಅವರ ಅನಿಸಿಕೆ ಹೊರ ಹಾಕಿದರು. ನಾನು ಒಂದು ಸಣ್ಣ ನಗು ಕೊಟ್ಟೆ.

ಮನೆಗೆ ಬಂದ ಮೇಲೆ ನಮ್ಮೂರಿನ ಜೀವನ ಪದ್ಧತಿಗಳು ಬದಲಾಗಿದ್ದು ಹೇಗೆ ಎಂದು ಯೋಚಿಸಲು ಶುರು ಮಾಡಿದೆ. ಜನ ಮೊದಲೆಲ್ಲಾ ನಡೆದೇ ಹೋಗುತ್ತಿದ್ದರು. ಈಗ ದ್ವಿಚಕ್ರ ವಾಹನಗಳು ಎಲ್ಲರ ಮನೆಯಲ್ಲೂ ಇವೆ. ಅವುಗಳ ಅಗತ್ಯತೆ ಕೂಡ ಮುಖ್ಯವಾಗಿದೆ. ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ ಮನೆಯಲ್ಲಿ ಇದ್ದ ಒಬ್ಬೊಬ್ಬರಿಗೆ ಒಂದೊಂದು ಕೆಲಸವಿರುತ್ತಿತ್ತು. ಈಗ ಹಳ್ಳಿಗಳಲ್ಲೂ ವಿಭಕ್ತ ಕುಟುಂಬಗಳೇ ಹೆಚ್ಚು. ಹಾಗಾಗಿ ತೋಟ ನೋಡಿಕೊಳ್ಳುವುದು, ಹಸುಗಳನ್ನು ನೋಡಿಕೊಳ್ಳುವುದು ಮತ್ತು ಮನೆಯಾಚಿನ ವ್ಯವಹಾರದ ಕೆಲಸ ಹೀಗೆ ಎಲ್ಲವನ್ನೂ ಒಬ್ಬರೇ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಆದರೆ ಎಲ್ಲ ಕಡೆ ಆಗುವಂತೆ ನಮ್ಮ ಹಳ್ಳಿಗಳಲ್ಲೂ ಈಗ ದ್ವಿಚಕ್ರದ ಮೇಲಿಂದ ಇಳಿಯದವರೇ ಜಾಸ್ತಿಯಾಗಿದ್ದಾರೆ. ಬೆಂಗಳೂರಿನಲ್ಲಿ ತರಕಾರಿ ತರಲು ದ್ವಿಚಕ್ರ ಬಳಸುವವರನ್ನು ನೋಡಿ ನನ್ನ ಸ್ನೇಹಿತರು ಬೈಯುವುದನ್ನು ನೋಡಿದ್ದೇನೆ. ನಮ್ಮ ಹಳ್ಳಿಗಳಲ್ಲಿ ಹೊಲಗಳು ಕಡಿಮೆಯಾಗಿ ತೆಂಗಿನ ತೋಟಗಳು ಎಲ್ಲೆಡೆ ಕಾಣಸಿಗುತ್ತವೆ. ಜೋಡಿ ಎತ್ತುಗಳು ಕಾಣಸಿಗುವುದೇ ಅಪರೂಪ. ಮೊದಲಿನಷ್ಟು ಕಷ್ಟಪಡುವವರು ನಾವು ಅಲ್ಲವೇ ಅಲ್ಲ. ಇವೆಲ್ಲದರ ಪರಿಣಾಮ ಹಳ್ಳಿಗಳಲ್ಲೂ ಜೋತು ಬಿದ್ದ ಹೊಟ್ಟೆಗಳು ಕಾಣಸಿಗುತ್ತವೆ, ಸಕ್ಕರೆ ಕಾಯಿಲೆ ಹಳ್ಳಿಯಲ್ಲೂ ಸಾಮಾನ್ಯವಾಗಿದೆ. ನಮ್ಮ ಅಜ್ಜ ಅರಸೀಕೆರೆಯ ನಮ್ಮ ಚಿಕ್ಕಪ್ಪನ ಮನೆಗೆ ಬರುವಾಗ ೨೪ ಕಿಲೋಮೀಟರು ನಡೆದೇ ಬರುತ್ತಿದ್ದನ್ನು ಯಾವಾಗಲು ನೆನಪಿಸಿಕೊಳ್ಳುತ್ತಿರುತ್ತೇನೆ.

Friday, May 2, 2014

ಗೌರಿ ಕಳೆದು ಹೋಗಿದ್ದಳು

ನಾನು ಚಿಕ್ಕವನಿದ್ದಾಗ ಮಳೆಗಾಲ ಇಷ್ಟು ಕೆಟ್ಟದಾಗಿರಲಿಲ್ಲ. ಚೆನ್ನಾಗಿಯೇ ಮಳೆ ಬರುತ್ತಿತ್ತು. ನಮ್ಮೂರ ಕೆರೆ ಮಳೆಗಾಲದಲ್ಲಿ  ಯಾವಾಗಲೂ ತುಂಬಿರುತ್ತಿತ್ತು. ನಮ್ಮೂರ ಕಾರ್ತಿಕವಾದ ಮೇಲೆಯೇ ಮಳೆ ಬಿಡುವು ಕೊಡುತ್ತಿದ್ದುದು. ಊರ ಕಾರ್ತಿಕ, ಜಾತ್ರೆಯ ನಂತರ ನಮ್ಮ ಹಳ್ಳಿಯಲ್ಲಿ ಅದ್ದೂರಿಯಾಗಿ ಆಚರಿಸುವ ಹಬ್ಬ. ಸಾಮನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಮೊದಲನೇ ಅಥವಾ ಎರಡನೇ ಮಂಗಳವಾರ ಇರುತ್ತೆ. ನಾನು ಕಾರ್ತಿಕಕ್ಕೆ ಊರಿಗೆ ಹೋಗಿದ್ದೆ. ಅಜ್ಜಿಗುಂಡಿ ದಾಟಿ ನಾವು ಹೋಗಬೇಕು, ನೀರಿನ ಮಟ್ಟ ಕಡಿಮೆಯಾಗಿತ್ತು. ಆದರೆ ಅಜ್ಜಿಗುಂಡಿ ತುಂಬಿ ನೀರು ಹರಿಯುತ್ತಿತ್ತು. ಅಜ್ಜಿಗುಂಡಿ ಎಂದು ಯಾಕೆ ಹೆಸರು ಬಂತೋ ಗೊತ್ತಿಲ್ಲ, ಅದೊಂದು ಸಣ್ಣ ಕೊಳ್ಳ. ಆಗ ಸೇತುವೆ ಇರಲಿಲ್ಲ. ಈ ಕಡೆ ಅರಕೆರೆ ಕೆರೆ ತುಂಬಿ, ವಡೆರಳ್ಳಿ, ಬೇವಿನಹಳ್ಳಿಯ ಸಣ್ಣ ಕೆರೆಗಳನ್ನೂ ತುಂಬಿಸಿ ಹಳ್ಳ ನಮ್ಮೂರ ಕೆರೆಗೆ ಬಂದು ಸೇರುತ್ತಿತ್ತು. ದೇವನೂರಿನ ಕಡೆಯಿಂದ ಕಬ್ಬಳ್ಳಿ ಹಳ್ಳ ಬೇರೆ. ಮೂರೂ ದಿಕ್ಕುಗಳಲ್ಲೂ ನೀರು ಬಂದಿದ್ದರಿಂದ ಕೆರೆ ತುಂಬಿ, ಕೆರೆ ಕೊಡಿಯಿಂದ ನೀರು ಹರಿಯುತ್ತಿತ್ತು. ನೀರು ಜಾಸ್ತಿ ಖಾಲಿ ಆದಂತೆ ನಮ್ಮೂರಿನ ಕೆರೆಯಲ್ಲಿ ಹಸಿರು ಕಾಣಿಸುತ್ತದೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಗುವಾಗುವ ತನಕ, ಕೆಲವು ಬಾರಿ ಮುಂದಿನ ಮಳೆಗಾಲದ ತನಕವೂ ಈ ಹಸಿರೇ ನಮ್ಮೂರಿನ ಎಮ್ಮೆ ದನಗಳಿಗೆ ಆಹಾರ. ಆಗ ಜನರ ಆಹಾರ ಹೇಗೆ ಸಾತ್ವಿಕವಾಗಿತ್ತೂ ದನಕರುಗಳ ಆಹಾರವೂ ಕೂಡ ಸಾತ್ವಿಕವೇ ಆಗಿತ್ತು. ಮನೆಯಲ್ಲಿ ಹುಲ್ಲು ಹಾಕಿದ್ದು ನೋಡಿದ್ದೇ ಕಡಿಮೆ. ಬಣವೆಯ ಹುಲ್ಲೆಲ್ಲ ಗೆಯ್ಯುತ್ತಿದ್ದ ಎತ್ತುಗಳಿಗೆ ಮಾತ್ರ. ದನಕರುಗಳು ಮತ್ತು ಹೆಮ್ಮೆಗಳು ಹಗಲೆಲ್ಲ ಕೆರೆಯಲ್ಲೂ, ರಸ್ತೆ ಬದಿಯಲ್ಲೋ, ಬೇಲಿ ಸಂಧಿಗಳಲ್ಲೋ  ಚೆನ್ನಾಗಿ ತಿಂದು ಬರುತ್ತಿದ್ದವು. ಆಗ ತೋಟಗಳು ಇದ್ದಿದ್ದು ಕಡಿಮೆ, ಹೊಲಗಳೇ ಹೆಚ್ಚು. ಹೊಲಗಳ ತುಂಬಾ ಪೈರು ಇರುತ್ತಿದ್ದ ಕಾರಣದಿಂದಾಗಿ ಕೆರೆಯೇ ನಮ್ಮೂರಿನ ದನ ಮತ್ತು ಎಮ್ಮೆಗಳ ಆಹಾರಕ್ಕೆ ಮೂಲವಾಗಿತ್ತು.

ಮಳೆಗಾಲ ಮುಗಿದು ಮನೆಯ ಹಿಂದಲ ಕಣದಲ್ಲಿ ರಾಗಿ ಹುಲ್ಲು ತುಳಿಸುತ್ತಿರುವಾಗ ಓಡಿ ಬಂದ ನಮ್ಮ ದೊಡ್ಡಮ್ಮ, ಗೌರಿ ಅಜ್ಜಿ ಗುಂಡಿ ದಾಟಿ ನಿರ್ಗುಂಡಿ ಕಡೆಗೆ ಓಡಿ ಹೋದಳಂತೆ ಎಂದಳು. ಅವಳ ಮುಖದ ತುಂಬಾ ಗಾಬರಿ ಮತ್ತು ದುಃಖ ಒಟ್ಟೊಟ್ಟಿಗೆ ಒತ್ತರಿಸುತ್ತಿದ್ದವು. ಗೌರಿ ಹೀಗೆ ಓಡಿ ಹೋದದ್ದು ಇದೆ ಮೊದಲಲ್ಲವಾದುದರಿಂದ ನಮ್ಮ ದೊಡ್ಡಪ್ಪ ಮತ್ತು ಇತರರಿಗೆ ಯಾವುದೇ ಭಾವನೆಗಳು ಕೆರಳಲಿಲ್ಲ. ಅವರು ಅವರ ಕೆಲಸದಲ್ಲಿ ಮಗ್ನರಾದರು. ಇವಳು ಮತ್ತೊಮ್ಮೆ, ಈ ಹುಲ್ಲು ಎಲ್ಲೂ ಹೋಗಲ್ಲ, ಗಾಡಿಯಾರಿಗೆ ಬಿಸಾಕಿ ಹೋಗಿ ಗೌರಿ ಕರ್ಕೊಂಡು ಬನ್ನಿ ಎಂದು ದುಂಬಾಲು ಬಿದ್ದಳು. ಅಲ್ಲೇ ಗಾಡಿ ಮೇಲೆ ಕೂತು ನಮ್ಮ ದೊಡ್ಡಪ್ಪನ ತಲೆಗೆ ಉತ್ತರಿಸಲಾಗದಂತಹ ಪ್ರಶ್ನೆಗಳನ್ನು ಎಸೆಯುತ್ತಾ ನಾನು ಕುಳಿತಿದ್ದೆ. ರಾಗಿ ಕಾಳುಗಳು ಯಾಕೆ  ಅಷ್ಟು ಸಣ್ಣವು, ತೆಂಗಿನ ಕಾಯಿ ಯಾಕೆ ದಪ್ಪ, ತೆಂಗಿನ ಮರ ಬೆಳೆಯುತ್ತಾ ಬೆಳೆಯುತ್ತಾ ಆಕಾಶದೊಳಗೆ ಹೋದರೆ ನಾವೇನು ಮಾಡುವುದು, ಹೀಗೆ ಹಲವಾರು ಉಪಿನಕಾಯಿಗೂ ಬರದ ಪ್ರಶ್ನೆಗಳು. ಅವರ ಉತ್ತರ ಕೆಲವೊಮ್ಮೆ ಸುಮ್ಮನಿರುವುದು ಅಥವಾ ಈ ನನ್ಮಗ ಯಾವ ನಕ್ಷತ್ರದಲ್ಲಿ ಹುಟ್ಟಿದ್ನೋ ಎಂದು ಗೊಣಗುತ್ತಿದ್ದರು. ನನ್ನ ಪ್ರಶ್ನೆಗಳ ಜೊತೆ ನನ್ನ ದೊಡ್ದಮ್ಮನದು ಬೇರೆ. ಅವರಿಗೆ ರೋಸಿ ಹೋಗಿತ್ತು. ಬೆಳಗ್ಗೆ ಬರುತ್ತೆ ಬಿಡೆ ಅದು ಅಂದ್ರು ನಮ್ಮ ದೊಡ್ಡಪ್ಪ. ನಮ್ಮ ದೊಡ್ಡಮ್ಮ ಗೌರಿ ಎಂದು ಬಡಿದು ಕೊಳ್ಳುತ್ತಿದ್ದುದು ಕೊಟ್ಟಿಗೆಯಲ್ಲಿ ೩ನೇ ಸ್ಥಾನದಲ್ಲಿ ಗೊಡೆಕೆರೆದುಕೊಂಡು ನಿಲ್ಲುವ ಗೌರಿಯ ಬಗ್ಗೆ. ನನಗೆ ನಮ್ಮ ದೊಡ್ಡಮ್ಮ ಹಸುಗಳಿಗೆ ಮತ್ತು ಹೆಮ್ಮೆಗಳಿಗೆ ಹೆಸರಿಡುತ್ತಾಳೆ ಎಂದು ಗೊತ್ತಿದ್ದರೂ ನನಗೆ ಆ ಕ್ಷಣಕ್ಕೆ ಮರೆತು ಹೋಗಿತ್ತು. ನಮ್ಮ ದೊಡ್ಡಮ್ಮ ಅಳುವುದೊಂದು ಬಾಕಿ ಅಷ್ಟೇ. ಅವಳಿಗೂ ಗೊತ್ತಿತ್ತು ಮತ್ತೆ ಗೌರಿ ಓಡಿ ಬರುತ್ತಾಳೆ ಎನ್ನುವುದು. ರಾತ್ರಿಯಲ್ಲ ಅವಳು ನಿದ್ದೆ ಮಾಡಲಿಲ್ಲ, ಆಚೆ ಮಲಗಿದ್ದ ರುಪಾಲಿಗೆ ಗೌರಿ ಏನಾದ್ರು ದನಿನ ಕೊಟ್ಟಿಗೆ ಹತ್ತಿರ ಬಂದಿದಳ ನೋಡ್ಕೊಂಡು ಬಾ ಅಂತ ಹೇಳಿ ಕಳಿಸಿದಳು.ಅವನು ಇನ್ನೂ ಬಂದಿಲ್ಲ ಬೆಳಗ್ಗೆ ಬರ್ತಾಳೆ ಬುಡವ್ವ ಅಂತ ಹೇಳಿ, ಮತ್ತೆ ಎಬ್ರಿಸ್ಬೇಡಕ್ಕ, ಬೆಳಗ್ಗೆ ಹಳೆ ತೋಟಕ್ಕೆ ತಂತಿ ಬಿಡಾಕೆ ಹೋಗ್ಬೇಕು ಅಂತ ಹೇಳಿ ಮಲ್ಕೊಂಡ. ಅವಳಿಗೆಲ್ಲಿ ನಿದ್ದೆ ಬರುತ್ತೆ. ಮತ್ತೆ ಎದ್ದು ನಮ್ಮ ದೊಡ್ಡಪ್ಪನನ್ನ ಎಬ್ರಿಸಿಕೊಂಡು ಮತ್ತೆ ಹೋಗಿ ನೋಡಿಕೊಂಡು ಬಂದಳು. ಆದರೆ ಗೌರಿ ಬಂದಿರಲಿಲ್ಲ. ಅವಳು ಬಂದಿದ್ದರೆ ಮನೆಯವರಿಗೆಲ್ಲ ಎಚ್ಚರ ಆಗುವಂತೆ ಚೀರಿರುತ್ತಿದ್ದಳು. ದೊಡ್ಡಮ್ಮ ಬೆಳಗಿನ ಜಾವದ ತನಕ ಹಾಗೆ ತುಕಡಿಸಿಕೊಂಡು ಕಳೆದಳು. ಎಂದಿನಂತೆ ಬೆಳಗ್ಗೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಳು. ದುಃಖ ತಡೆಯಲಾಗಲಿಲ್ಲ ಕಣ್ಣಿನ ಹನಿ ಹಾಲು ಕರೆಯುವ ತಮ್ಬಿಗೆಗೂ ಒಂದೆರಡು ಹೋದವು. ಗೌರಿ ಇಲ್ಲದಕ್ಕೆ ಆವತ್ತು ಹಾಲಿನ ಪ್ರಮಾಣ ಕಡಿಮೆಯೇ ಇತ್ತು. ಮನೆಗೆ ಬರುತ್ತಾಳೆ, ಗೌರಿ ಪಕ್ಕದ ಹುಲ್ಲಿನ ಹಿತ್ತಲ ಕಂಬಕ್ಕೆ ಮೈ ಉಜ್ಜುತ್ತ ನಿಂತಿದ್ದಾಳೆ. ದೊಡ್ಡಪ್ಪನ ಹತ್ತಿರ ಮಾತನಾಡುತ್ತಿದ್ದ ಲಕ್ಕಣ್ಣ ತಿರುಗಿ, ಅವ್ವ ನಿನ್ನೆ ರಾತ್ರಿ ನಮ್ಮೂರ ದಾರೀಲಿ ಕಂಡೆ ಗೌರಿನ, ನನಗೆ ಮೊದಲು ಗೊತ್ತಾಗ್ಲಿಲ್ಲ. ಆಮ್ಯಾಕೆ ಲಕ್ಷ್ಮಿ ಅಂದೇ ಅವಳು ಬರಲಿಲ್ಲ, ಗೌರಿ ಅಂದೇ ಬಂದಳು. ಕತ್ತಲಾಗಿದ್ರಿಂದ ನಮ್ಮ ಮನೆ ಮುಂದೇನೆ ಕಟ್ಟಿ ಬೆಳಗ್ಗೆ ಹೊಡಕೊಂಡು  ಬಂದೆ ಕಣವ್ವ ಅಂದ. ದೊಡ್ಡಮ್ಮ ಖುಷಿ ಅಟ್ಟದ ಮೇಲೆ ಹೋಗಿತ್ತು. ಊರಿಗೆ ಹೋಗವಾಗ ಕಡಕಟ್ಟಿನ ಅಟ್ಟದಾಗೆ ಎರಡು ಹಲಸಿನ ಹಣ್ಣಿದವೆ ಒಂದ ತಗೊಂಡು ಹೋಗೋ ಲಕ್ಕಣ್ಣ ಎಂದು ಅವನ ಶ್ರಮಕ್ಕೂ ಬೆಲೆ ಕೊಟ್ಟಳು. ಅಲ್ಲೇ ನಿಂತಿದ್ದ ನನಗೆ ಮಾತ್ರ ಒಂದು ಹಲಸಿನ ಹಣ್ಣು ಹೋಗುತ್ತಾಲ್ಲ ಎನ್ನುವ ಬೇಜಾರು ಕಾಡುತ್ತಿತ್ತು.

 ಬಹಳಷ್ಟು ಜನರ ಮನೆಯಲ್ಲಿ ಹತ್ತಕ್ಕಿಂತ ಹೆಚ್ಚು ಎಮ್ಮೆಗಳೋ ಅಥವಾ ದೇಸಿ ಹಸುಗಳೋ ಇರುತ್ತಿದ್ದವು. ನಮ್ಮ ಕೊಟ್ಟಿಗೆ ತುಂಬಾ ಹಸುಗಳು ಮತ್ತು ಒಂದೆರಡು ಎಮ್ಮೆಗಳಿದ್ದವು. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಅಂತಹದೇನು ವಿಶೇಷವಿರಲಿಲ್ಲ. ಆದರೆ ನನ್ನ ದೊಡ್ಡಮ್ಮನ ಮನೆಯ ಕೊಟ್ಟಿಗೆಯಲ್ಲೇ ವಿಶೇಷ. ನನ್ನ ಶಾಲೆಯಲ್ಲೂ ನಡೆಯದಂತ ಪ್ರಯೋಗಗಳು ಅವಳ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದವು. ಹಸು ಎಮ್ಮೆಗಳಿಗೆಲ್ಲ ನಾಮಕರಣ ಮಾಡುವುದು ಅವಳ ಪ್ರಯೋಗಗಳಲ್ಲಿ ಒಂದು. ಹೆಣ್ಣು ಕರುಗಾಳದರೆ ಲಕ್ಷ್ಮಿ, ಗೌರಿ, ರಾಜಿ, ಮಲ್ಲಿ ಹೀಗೆ ಅವಳ ಬತ್ತಳಿಕೆಯಲ್ಲಿದ್ದ ಹೆಸರುಗಳು ಹೊರಬೀಳುತ್ತಿದ್ದವು. ಗಂಡು ಕರುಗಳಿಗೆ ರಾಮ, ಲಕ್ಷ್ಮಣ, ಕರಿಯ, ಬಿಳಿಯ, ಕೆಂದಿ, ಜಾಲಿ ಹೀಗೆ ಅನೇಕ ಹೆಸರುಗಳಿದ್ದವು. ಅವಳು ಎಲ್ಲ ಹಸುಗಳನ್ನು ಅಥವಾ ಎಮ್ಮೆಗಳನ್ನು ಕರೆಯುತ್ತಿದ್ದುದೆ ಅವುಗಳ ಹೆಸರಿನಿಂದ. ಬೇರೆಯವರು ಹಾಗೆ ಕರೆಯ ಬೇಕೆಂದೂ ಅಪೇಕ್ಷಿಸುತ್ತಿದ್ದಳು. ನಮ್ಮ ದೊಡ್ಡಮ್ಮ ಅವುಗಳು ನಮ್ಮಂತೆ ಮಾತಾಡುತ್ತವೆ. ಅವುಗಳು ನಮ್ಮಂತೆ ಅವುಗಳಟ್ಟಿಗೆ ಮಾತಾಡಿಕೊಂಡಿರುತ್ತವೆ ನಮಗೆ ಮಾತ್ರ ಅವರ ಭಾಷೆ ತಿಳುಯುವುದಿಲ್ಲ ಅನ್ನುತ್ತಿದ್ದಳು. ಅವುಗಳಿಗೂ ಭಾವನೆಗಳಿವೆ. ನೋಡು ನೀರೊಳಗೆ ಬಿಟ್ಟಾಗ ಅವು ನಮ್ಮ ಹಾಗೆ ಶಾಂತಿಯಿಂದ ಇರುತ್ತವೆ, ಬಿಸಿಲು ಜಾಸ್ತಿಯಾದಂತೆ ಅವುಗಳಿಗೂ ಕಿರಿಕಿರಿಯಾಗುತ್ತದೆ ಎಂದು ಅವಳ ತರ್ಕವನ್ನು ಮುಂದಿಡುತ್ತಿದ್ದಳು. ಕರುಗಳು ನೀರಿನಲ್ಲಿ ಈಜುತ್ತಿದ್ದರೆ, ತನ್ನ ಸ್ವಂತ ಮಕ್ಕಳು ಈಜು ಕಲಿತಾಗ ಖುಷಿ ಪಡುವ ತಾಯಿಯಂತೆ ಸಂಭ್ರಮಿಸುತ್ತಿದ್ದಳು. ಅವಳ ಜೊತೆ ಎಂದೂ ವಾದಮಾಡಿದವನಲ್ಲ, ಅವಳ ತರ್ಕವು ಸಾಮಾನ್ಯವಾಗಿ ಸುತ್ತಲೂ ನೋಡಿ ಕಂಡುಕೊಂಡಿದ್ದೆ ಆಗಿರುತ್ತಿತ್ತು. ಬಹಳಷ್ಟು ಹೆಂಗಸರು ಮತ್ತು ಊರ ಹಿರಿಯರಿಗೂ ಅವಳ ಮೇಲೆ ಇದೆ ಅಭಿಪ್ರಾಯವಿತ್ತು. ನಾನು ಕರುಗಳ ಜೊತೆ ಆಡಿಕೊಂಡು ಇರುತ್ತಿದ್ದೆ. ಸ್ವಲ್ಪ ದೊಡ್ಡ ಕರುಗಳ ಮೇಲೆ ಸವಾರಿ ಮಾಡಲು ಹೋಗಿ ಹಲ್ಲು ಮುರಿದುಕೊಳ್ಳುವುದಷ್ಟೇ ನಾನು ಮಾಡುತ್ತಿದ್ದ ಮಾಹಾನ್ ಕೆಲಸ. ಅವಳು ಎಮ್ಮೆಗಳಿಗಾಗಲಿ ಅಥವಾ ಹಸುಗಳಿಗಾಗಲಿ ಹೊಡೆದಿದ್ದು ನಾನು ನೋಡಿರಲಿಲ್ಲ. ಬೇಸಿಗೆಯಲ್ಲಿ ಬಹುಪಾಲು ಮಜ್ಜಿಗೆ  ಹಸು ಎಮ್ಮೆಗಳಿಗೆ ಮೀಸಲು. ಆ ದಿನಗಳಲ್ಲಿ ಡೈರಿಗಳು ತಲೆ ಎತ್ತಿರಲಿಲ್ಲ, ಕರೆದ ಹಾಲೆಲ್ಲ ಮನೆ ಬಳಕೆಗೆ ಅಥವಾ ಅಲ್ಪ ಸ್ವಲ್ಪ ದಾನಕ್ಕೆ.  ಮನೆಯಲ್ಲಿ ಮಕ್ಕಳಿಗೆ ಎಷ್ಟು ಪ್ರೀತಿ ತೋರಿಸುತ್ತಿದ್ದಳೊ ಅಷ್ಟೇ ಪ್ರೀತಿ ಅವುಗಳ ಮೇಲೂ ತೋರಿಸುತ್ತಿದ್ದಳು. ಕೆಲವೊಮ್ಮೆ ಇನ್ನೂ ಹೆಚ್ಚು. ಅವುಗಳಿಗೆ ಜ್ವರ ಬಂದರೆ ಅವುಗಳಿಗೂ ಅಮ್ಮನ ಪೂಜಿಸುತ್ತಿದ್ದಳು. ಕಾಯಿಲೆ ವಾಸಿಗಾಗಿ ಹರಕೆ ಹೊರುತ್ತಿದ್ದಳು.

ಇವಳ ನೆನಪು ಬಂದಿದ್ದು ನಮ್ಮೂರಿನಲ್ಲಿ ಇಂದು ನಡೆಯುತ್ತಿರು ಕ್ಷೀರ ಕ್ರಾಂತಿಯನ್ನು ನೋಡಿ. ಡೈರಿ ಉದ್ಯಮ ಸಾಕಷ್ಟು ಬೆಳೆದಿದೆ. ನಮ್ಮೂರು ಒಂದರಲ್ಲೇ ತಿಂಗಳಿಗೆ ಸುಮಾರು ೬ ರಿಂದ ೭ ಲಕ್ಷದಷ್ಟು ವಹಿವಾಟು ನಡೆಯುತ್ತಂತೆ. ಜನರ ಜೀವನ ಸಾಕಷ್ಟು ಸುಧಾರಿಸಿದೆ. ಪ್ರತಿ ಮನೆಗಳಲ್ಲೂ ಒಂದೆರಡು ಸಿಂಧಿ ಅಥವಾ ಹೈಬ್ರಿಡ್ ಹಸುಗಳು ಇವೆ. ಎಮ್ಮೆಗಳು ನೋಡಲು ಸಿಗುವುದೇ ಅಪರೂಪ. ಇನ್ನೂ ದೇಸಿ ಹಾಸುಗಳು ಇಲ್ಲವೇ ಇಲ್ಲ ಎಂದು ಹೇಳಬೇಕು. ಇದು ತಪ್ಪು ಎಂದು ನಾನು ಭಾವಿಸದಿದ್ದರೂ ನಾಟಿ ಹಸು ಮತ್ತು ಎಮ್ಮೆಯ ಹಾಲು, ಮೊಸರು, ಬೆಣ್ಣೆ ರುಚಿ ನೋಡಿದವನಿಗೆ ಈ ಸಿಂಧಿ ಹಸುಗಳ ಉತ್ಪನ್ನಗಳು ರುಚಿ ಕೊಡುವುದಿಲ್ಲ ಎಂದಷ್ಟೇ ನನ್ನ ಅಸಮಧಾನವನ್ನು ಹೊರ ಹಾಕಬಹುದು! ಜನರು ಮಾತನಾಡುವುದು, ಇವನು ೫೦ ಸಾವಿರದ ಹಸು ಸಾಕಿದಾನೆ, ಅವನು ೧೦ ಮೂಟೆ ಭೂಸ ಖರ್ಚು ಮಾಡುತ್ತಾನೆ, ಇವರ ಹಸು ೨೦ ಲೀಟರ್ ಹಾಲು ಕೊಡುತ್ತೆ, ಮತ್ತೊಂದು ೨೫ ಲೀಟರ್ ಹಾಲು ಕೊಡತ್ತೆ ಎಂದು. ಇದಷ್ಟೇ ನಮ್ಮ ಜನರ  ಹಸುಗಳ ಜೊತೆಗಿನ  ಸಂಬಂಧ. ನಮ್ಮ ದೊಡ್ಡಮ್ಮ ೧೦ ವರ್ಷಗಳ ಹಿಂದೆಯೇ ತೀರಿಕೊಂಡಳು. ಕರುಗಳ ಮೊದಲನೇ ದಿನದ ಚಿನ್ನಾಟ ನೋಡಿ ಅವಳು ಖುಷಿ ಪಟ್ಟ ಹಾಗೆ, ಹಸುಗಳ ಬಾಲ ಕೆರೆಯುವಾಗ ಅವುಗಳಿಗೆ ಚೆಕ್ಕಳಿ ಗುಳಿಗೆ ಕೊಟ್ಟು ಕುಣಿದ ಹಾಗೆ, ಅವುಗಳ ಒರಲಾಟ ಕಿವಿಗೆ ಬಿದ್ದ ಕೂಡಲೇ ಓದಿದ ಹಾಗೆ ಬದುಕುತ್ತಿರುವವರು ಬಹಳ ವಿರಳ. ಸಿಗುವುದೇ ಇಲ್ಲ ಎಂದು ಹೇಳಬಹುದು. ಹಬ್ಬಕ್ಕೆ ಮಾಡಿದ ಒಬ್ಬಟ್ಟನ್ನು ಹಸುಗಳಿಗೂ ತಿನಿಸಿದ ನಂತರವೇ ಮನುಷ್ಯರಿಗೆ.