Saturday, October 19, 2013

ವಿಲಾಸನ ಜೊತೆ ಒಂದು ಸುಂದರ ಮಧ್ಯಾನ

ನಿನ್ನೆ ಊಟಕ್ಕೆ ಹೋದಾಗ ಬರಿ ಪುಸ್ತಕಗಳ ಮಾತು. ನಾನು ಮತ್ತು ಸ್ನೇಹಿತ ಚಂದನ್ ಪೂರ್ಣಚಂದ್ರ ತೇಜಸ್ವಿ, ಜೋಗಿ, ಕಂಬಾರರ ಪುಸ್ತಕಗಳ ಬಗ್ಗೆ ಹರಟೆಯಲ್ಲೇ ತಲ್ಲಿನರಗಿದ್ದೆವು. ಇದರ ಮಧ್ಯೆ ಸಿಕ್ಕ ಮತ್ತೊಬ್ಬ ಸ್ನೇಹಿತ ಹರ್ಷ, ಇವತ್ತು ಮೂರು ಗಂಟೆಗೆ ಇದಿಯಲ್ಲ ಪೇಂಟಿಂಗ್, ಬರ್ತಿದ್ಯ ಅಂದ್ರು. ನಮ್ಮ ಹುಡ್ಗ, ಉಜ್ಜಿರೆಯವ್ನು, ಪಕ್ಕ ಲೋಕಲ್ ಬಾ ಮಗ ಅಂದ್ರು. ಅಶ್ವತ್ ಹಾಡ್ಬೇಕಾದ್ರೆ ಯಾರೋ ಒಬ್ಬರು ಮಲ್ಲೇಶ್ವರಂ ಮೈದಾನದಲ್ಲಿ ಚಿತ್ರ ಬರೆಯುವುದನ್ನ ನೋಡಿದ್ದೆ. ಬಹುಷ್ಯ ಅದೇ ರೀತಿ ಇರಬೇಕೇನೋ ಅಂತ ಅಂದುಕೊಂಡು ನಮ್ಮ ಪುಸ್ತಕದ ಡಿಸ್ಕಶನ್ ಮುಗಿಸಿ ನನ್ನ ಜಾಗಕ್ಕೆ ಹೋಗಿ ಮತ್ತೆ ಕೆಲಸ ಶುರು ಮಾಡಿದೆ. ಬೇಗ ಬೇಗ ಕೆಲಸ ಮಾಡಿ, ಇನ್ನು ಹತ್ತು ನಿಮಿಷ ಇರುವಾಗಲೇ ಹೋಗಿ, ಇನ್ನೊಬ್ಬ ಸ್ನೇಹಿತ ರೋಹಿತ್ ಜೊತೆ ಮುಂದೆ ಮಧ್ಯದ ಸೀಟ್ ಹಿಡಿದು ಕೂತೆ. ಕಾರ್ಯಕ್ರಮ ಇದ್ದಿದ್ದು ಆಟಿಸಂ(Autism) ಇರುವ ಮಕ್ಕಳಿಗೆ ಸಂಗೀತದ ಶಾಲೆ ತೆಗೆಯಲು ನಿಧಿ ಸಂಗ್ರಹಿಸಲು. ಇಂಡಿಯಾ ಇನ್ಕ್ಲೂಷನ್ ಸಮ್ಮಿಟ್ನಲ್ಲಿ ವಿಲಾಸನು ಬಿಡಿಸಿದ ಚಿತ್ರಗಳನ್ನು ಹರಾಜು ಹಾಕಲಾಗುತ್ತದೆ. ಕಾರ್ಯಕ್ರಮಕ್ಕೆ ಮೊದಲು ಅಷ್ಟೇನೂ ಜನ  ಇರಲಿಲ್ಲ, ಒಬ್ಬೊಬ್ಬರೇ ಬರಲು ಶುರು ಮಾಡಿದರು. ನಂತರ ಕೂತಿದ್ದವರಿಗಿಂತ ನಿಂತಿದ್ದವ್ರೆ ಜಾಸ್ತಿ ಆದರು. ವಿಲಾಸ್ ಹೆಚ್ಚು ಸದ್ದು ಗದ್ದಲವಿಲ್ಲದೆ ಬಂದು ನೋಡು ನೋಡುತಿದ್ದಂತೆ ಅಬ್ದುಲ್ ಕಲಾಂರ ಚಿತ್ರ ಬರೆದೇ ಬಿಟ್ಟ. ನಾವೆಲ್ಲಾ ಮೂಕವಿಸ್ಮಿತರಾಗಿ ಕೂತಿದ್ದೆವು ಅಷ್ಟೇ. ಸರಿ ಸುಮಾರು ೫ ಅಡಿ ಮತ್ತು ನಾಲ್ಕು ಅಡಿ ಅಗಲದ ಕ್ಯಾನ್ವಾಸ್ ಅಲಗೆಯ ಮೇಲೆ ಕಲಾಂರ ಅದ್ಭುತ ಚಿತ್ರವನ್ನು ಗೀಚಿ, ನಮ್ಮನ್ನು ನಿಬ್ಬೆರಗಿನಿಂದ ಅಲ್ಲಿಯೇ ನೋಡುವಂತೆ ಮಾಡಿಬಿಟ್ಟ.


ನನಗೆ ಸ್ವಲ್ಪ ಬೇಜಾರಾದ ಸಂಗತಿಯಂದರೆ ನನಗೆ ಇವನ(ಪ್ರೀತಿಯಿಂದ ಅಷ್ಟೇ ಏಕವಚನ) ಬಗ್ಗೆ ಮೊದಲು ಗೊತ್ತೇ ಇರಲಿಲ್ಲ. ನಾನು ಒಂದಾನೊಂದು ಕಾಲದಲ್ಲಿ ಉಜ್ಜಿರೆ ಕಾಲೇಜಿಗೆ ಅರ್ಜಿ ಹಾಕಿ ಸೀಟು ಸಿಗದೇ ಮೈಸೂರಿನಲ್ಲಿ ಪಿ.ಯು.ಸಿ ಓದಲು ಹೋಗಿದ್ದೆ. ನಮ್ಮೂರಿಗೆ ಉಜ್ಜಿರೆ ಬಹಳ ದೂರವೇನಲ್ಲ, ಇಂತಹ ಅದ್ಭುತ ಪ್ರತಿಭೆಗಳನ್ನು ಹತ್ತಿರದಲ್ಲಿದ್ದರೂ ನಾವೇ ನೋಡಿರಲಿಕ್ಕಿಲ್ಲ ಮತ್ತು ತಿಳಿದುಕೊಂಡಿರುವುದಿಲ್ಲ ಎನ್ನುವುದೇ ಖೇದಕರ. ನಾವೇ  ಅಂದರೆ ನಮಗೆ ತಲುಪಿಸಬೇಕಾದ ಮಾಧ್ಯಮಗಳು ಬೇರೇನನ್ನೋ ತೋರಿಸಿ ಕಾಲಹರಣ ಮಾಡುತ್ತಿರುವುದು ವಿಷಾದನಿಯ. ಹೋಗಲಿ ಬಿಡಿ, ಅವನ ಬಗ್ಗೆ ಸ್ವಲ್ಪ ಇಲ್ಲಿ ಬರೆಯೋಣ ಎಂದು ಅನಿಸಿತು. ಇದರಿಂದಲಾದರು ಮತ್ತೆ ನಾಲ್ಕಾರು ಜನಕ್ಕೆ ನಮ್ಮ ಹುಡುಗನ ಬಗ್ಗೆ ತಿಳಿಯಲಿ ಅನ್ನುವುದೇ ಈ ಬ್ಲಾಗ್ ಪೋಸ್ಟಿನ ಉದ್ದೇಶ. ವಿಲಾಸ್ ನಾಯಕ್ ಧರ್ಮಸ್ಥಳದ ಹತ್ತಿರವಿರುವ ಉಜ್ಜಿರೆಯವನು. ೫ ವರ್ಷ ಐ.ಬಿ.ಎಂನಲ್ಲಿ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡಿ, ೨ ವರ್ಷಗಳಿಂದ ಚಿತ್ರಕಲೆಯನ್ನೇ ಕೆಲಸವನ್ನಾಗಿಸಿಕೊಂಡು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾನೆ ಮತ್ತು ಬಿಡಿಸುತ್ತಿದ್ದಾನೆ. ಮತ್ತೊಂದು ಖುಷಿಯ ವಿಚಾರವೆಂದರೆ ಇವನು ಈಗಾಗಲೇ ಬಹಳಷ್ಟು ಸಮಾಜಮುಖಿ ಕೆಲಸಗಳಿಗೆ ೧೦ ಲಕ್ಷಕ್ಕೂ ಅಧಿಕ ಮೊತ್ತದ ನಿಧಿ ಸಂಗ್ರಹ  ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಅವನ ಬಗ್ಗೆ ಹೆಚ್ಚು ತಿಲಿದುಕೊಳಬೇಕಾದರೆ ವಿಲಾಸ್ ನಾಯಕ್ ಎಂದು ಗೂಗಲ್ ಮಾಡಿ ಬೇಕಾದಷ್ಟು ವಿಷಯಗಳು ಸಿಗುತ್ತವೆ.

ವಿಲಾಸ್ ಕೈಯಲ್ಲಿ ಮೂಡಿಬಂದ ಸಚಿನ್!
ಅವನ ಬಗ್ಗೆ ಹೇಳುವುದನ್ನು ಹೇಳಿ ಆಗಿದೆ. ಈಗ ಮತ್ತಷ್ಟು ನಿನ್ನೆಯ ಬಗ್ಗೆ ಹೇಳುತ್ತೇನೆ. ಸರಿ ಸುಮಾರು ೫ ನಿಮಿಷಗಳು ಅಷ್ಟೇ. ಅಬ್ದುಲ್ ಕಲಾಂರ ಚಿತ್ರ ರೆಡಿ. ಮತ್ತೆ ಸ್ವಲ್ಪ ಸಮಯದ ನಂತರ ಇನ್ನೊಂದು ಅಲಗೆಯ ಮೇಲೆ ಬರೆಯಲು ಶುರು ಮಾಡಿದ. ಮತ್ತೆ ಐದು ನಿಮಿಷದಲ್ಲಿ ಒಂದು ಮುಗ್ದ ಅಂಗವಿಕಲ ಬಾಲಕನ ಚಿತ್ರ ನಮ್ಮ ಮುಂದೆ. ನಾವು ಮತ್ತಷ್ಟು ವಿಸ್ಮಿತರಾದೆವು. ಕೊನೆಯಲ್ಲಿ ಅರ್ಜುನನ ತರ ಪಾಶುಪತಾಸ್ತ್ರವನ್ನು ಇನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟು ಕೊಂಡಿದ್ದ. ಕೊನೆಗೆ ಬರೆದಿದ್ದು ಸಚಿನ ತೆಂಡೂಲ್ಕರ್ ಚಿತ್ರ. ಅದೂ ಉಲ್ಟಾ..! ನಾವು ಏನನ್ನು ಬರೆಯುತ್ತಿದ್ದಾನೆ ಎಂದು ಯೋಚಿಸುವುದರೊಳಗೆ ಸಚಿನ್ ನಮ್ಮ ಮುಂದೆ ಬಂದಾಗಿತ್ತು. ಅದನ್ನು ಹರಾಜು ಕೂಗಿದಾಗ ಅದರ ಬೆಲೆ ೧ ಲಕ್ಷ ಮತ್ತು ಹತ್ತು ಸಾವಿರ. ನೀವೇ ಯೋಚಿಸಿ ಅದರ ಸರಿಯಾದ ಬೆಲೆಯನ್ನು. ಉಲ್ಟಾ ಬಿಡಿಸಿ ತಿರುಗಿಸಿದ್ದೆ ತಡ ಚಪ್ಪಾಳೆಗಳ ಸುರಿಮಳೆ. ಅದೂ ನಮ್ಮ ಸೋಂಬೇರಿ ಜನ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದಾರೆ ಎಂದರೆ ವಿಲಾಸ್ ನಮ್ಮನ್ನು ಅದೆಷ್ಟು ಮೋಡಿ ಮಾಡಿದ್ದ ಎಂದು ನೀವೇ ಊಹಿಸಿ. ಅವನಿನ್ನೂ ನಮ್ಮಂತೆ ಯುವಕ, ಮತ್ತಷ್ಟು ಬೆಳೆಯಲಿ ಎಂಬುವುದೇ ನನ್ನ ಹಾರೈಕೆ. ನಾನಿನ್ನೂ ನಮ್ಮ ಅಣ್ಣಾವ್ರ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಚಂದನ್ ಕೂಡ!
ವಿಲಾಸ್ ನಾಯಕ್ ಬರೆದ ಮೂರು ಚಿತ್ರಗಳು.

ಈ ಚಿತ್ರವನ್ನು ಫೇಸ್ಬುಕ್ ನಿಂದ ಪಡೆದದ್ದು, ತೆಗೆದವರಿಗೆ ನನ್ನ ಧನ್ಯವಾದಗಳು.


1 comment:

ಜಲನಯನ said...

ರಾಜಪ್ಪ...ಸುಂದರ ಪರಿಚಯ ಮತ್ತು ಅಷ್ಟೇ ಚಂದದ ಲೇಖನ. ನನ್ನ ಬ್ಲಾಗ್ ಗೂ ಒಮ್ಮೆ ಭೇಟಿ ನೀಡಿ.