Sunday, March 30, 2014

ಬೆಳೆದಿದ್ದು ಮಂಡಿಗೆ ಉಳಿದಿದ್ದು ನಮಗೆ

ದೀಪಾವಳಿಗೆಂದು ಊರಿಗೆ ಹೋಗಿದ್ದೆ. ಮಳೆಗಾಲ ಇನ್ನೂ ಮುಗಿದಿರಲಿಲ್ಲ. ನಮ್ಮೂರಿನಲ್ಲಿ ಗಗನದೆತ್ತರಕ್ಕೆ ಬೆಳೆದ ತೆಂಗಿನ ಮರಗಳಿಗೆ ದೊಡ್ಡ ಬಿದಿರಿನ ಗಣ ಹಾಕಿ ತೆಂಗಿನ ಕಾಯಿ ಕೆಡವಲು ಬರುತ್ತಿದ್ದುದು ಜಯಣ್ಣನಿಗೆ ಮತ್ತು ಕುಮಾರಣ್ಣನಿಗೆ ಮಾತ್ರ. ಊರಲ್ಲಿ ಒಬ್ಬರಿಗಿಂತ ಹೆಚ್ಚು ಜಯಣ್ಣರಿದ್ದ ಕಾರಣ ಈ ಜಯಣ್ಣನನ್ನು ಕಾಸಪಜ್ಜಿರ ಜಯಣ್ಣ ಅಂತಲೂ ಕುಮಾರಣ್ಣನನ್ನು ಗಂಧಾರಕ್ಕರ ಕುಮಾರಣ್ಣನೆಂದು ಕರಿಯುತ್ತಿದ್ರು. ಈಗಲೂ ಹಾಗೆಯೇ ಕರೆಯುತ್ತಾರೆ. ಈ ದರಿದ್ರ ರಾಜಕೀಯದಿಂದ ಊರು ಹೋಳಾಗಿ ಇಬ್ಬರೂ ಒಂದೊಂದು ಗುಂಪಿನ ಜೊತೆ ಗುರುತಿಸಿಕೊಂಡು ಕಾಯಿ ಕೆಡವುತ್ತಿದ್ದರು. ನಮ್ಮ ತೋಟಗಳಲ್ಲಿ ಕಾಯಿ ಕೀಳುವ ಕೆಲಸ ಜಯಣ್ಣನದು. ವರ್ಷಕ್ಕೆ ಇಂತಿಷ್ಟು ಸಂಭಾವನೆ ಎಂದು ನಿಗದಿಯಾಗಿರುತ್ತಿತ್ತು. ಅವರಿಗೆ ಬೇಕಾದಾಗ ನಮ್ಮಪ್ಪನ ಬಳಿಬಂದು ಹಣ ಪಡೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಜಾತ್ರೆ ಸಮಯಕ್ಕೋ, ದೀಪವಾಳಿಯಲ್ಲೋ ಅಥವಾ ಊರ ಕಾರ್ತಿಕದಲ್ಲಿ ದುಡ್ಡು ಪಡೆದುಕೊಳ್ಳುವುದು ರೂಢಿಯಾಗಿತ್ತು. ಈ ದೀಪಾವಳಿಯಲ್ಲಿ ಮಾತ್ರ ಜಯಣ್ಣ ಮನೆಗೂ ಬಂದಿಲ್ಲ, ಕಾಯಿ ಕೀಳಲೂ ಬಂದಿಲ್ಲ. ನಮ್ಮ ಒಂದೆರಡು ತೋಟ ನಮ್ಮ ಮುತ್ತಜ್ಜರು ಮಾಡಿದವು.  ಬಹಳಷ್ಟು ಮರಗಳು ೫೦ ಅಡಿಯ ಆಸುಪಾಸಿನಲ್ಲೇ ಇವೆ. ೫೦ ಅಡಿಗಿಂತಲೂ ಎತ್ತರದ ತೆಂಗಿನ ಮರಗಳೂ ಇವೆ. ತಿಂಗಳ ಮೇಲೆ ಒಂದು ವಾರವಾದರೂ ಜಯಣ್ಣ ಕಾಯಿ ಕೀಳಲು ಬರದಿದ್ದು ನಮ್ಮಜ್ಜಿಯನ್ನು ಕೆರಳಿಸಿತ್ತು. ತೋಟದಲ್ಲಿ ಕಾಯಿಗಳು ರಾತ್ರಿಯಲ್ಲಿ ದೊಪ್ಪೆಂದು ಬಿದ್ದು, ಬೆಳಗ್ಗೆ ಮನೆಯವರು ಹೋಗುವುದು ತಡವಾದರೆ ಕಂಡವರ ಪಾಲಗುತ್ತವೆ ಎಂಬ ಆತಂಕ ನಮ್ಮಜ್ಜಿದು. ಸಾಮಾನ್ಯವಾಗಿ ಕಂಡವರು ಎಂದರೆ ನಮ್ಮ ಚಿಕ್ಕ ತಾತನ ಮನೆಯವರೇ ಆಗಿರುತ್ತಿದ್ದರು. ಸಾಮಾನ್ಯವಾಗಿ ನಮ್ಮ ತೋಟದಲ್ಲಿ ಕಾಯಿ ಬಾಚುತ್ತಿದ್ದವರು ಇವರೇ ಎಂದು ನಮ್ಮ ಅಜ್ಜಿಯಲ್ಲಿ ಆ ಮನೆಯವರ ಮೇಲೆ ಅಚಲ ವಿಶ್ವಾಸವಿತ್ತು. ಅವಳ ಒರೆಗಿತ್ತಿ, ಅಂದರೆ ಆ ಮನೆಯ ಅಜ್ಜಿಯದೆ ಕುಮ್ಮಕ್ಕು ಇದರ ಹಿಂದಿದೆ ಎಂದು ಅವಳು ನಂಬಿದ್ದಳು. ನಮ್ಮ ಅಜ್ಜಿಯ ಕೋಪ ಮತ್ತು ಗೊಣಗಾಟ ಹೆಚ್ಚಿಸಲು ಇದಕ್ಕಿಂತ ಹೆಚ್ಚಿನ ವಿಷಯ ಬೇಕಾಗೆ ಇಲ್ಲ. ಜಯಣ್ಣನಿಗೆ ಊರಲ್ಲಿ ಜಮೀನು ಕಡಿಮೆ ಇತ್ತು. ಅವರಿವರ ತೋಟಗಳಲ್ಲಿ ತೆಂಗಿನ ಕಾಯಿ ಕಿತ್ತು ಜೀವನ ಸಾಗಿಸುತ್ತಿದ್ದ. ನಮ್ಮ ಅಪ್ಪನಷ್ಟು ವಯಸ್ಸು. ಅವನಿಗೆ ನನ್ನ ವಯಸ್ಸಿನ ಮಗ ಕೂಡ ಇದ್ದ. ಒಂದು ದಿನ ನಿರ್ಧರಿಸಿ ಈ ಹಳ್ಳಿಲಿ ಇದ್ರೆ ನಂದು ಇದೆ ಹಣೆಬರಹ ಎಂದು ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಕೆಂಪು ಬಸ್ ಹತ್ತಿದ. ಈಗ ಸಮಸ್ಯೆ ನೋಡಿ. ಕಾಯಿ ಕೀಳುವವರು ಯಾರು ಇಲ್ಲದಂತಾಗಿದೆ. ಇದು ನಮ್ಮಜ್ಜಿಯ ಕೋಪವನ್ನು ಮತ್ತಷ್ಟು ಹೆಚ್ಚಿಸಿತ್ತು. ಸಣ್ಣ ತೆಂಗಿನ ಸೋಸಿಗಳಲ್ಲಿ ಹೇಗೋ ನಮ್ಮ ಚಿಕ್ಕಪ್ಪಂದಿರು ಒಂದು ಸಣ್ಣ ತಲಪಿನ ಗಣದಲ್ಲಿ ಕಾಯಿಗಳನ್ನು ಉದುರಿಸಿದ್ದರು. ಆದರೆ ಆಕಾಶಕ್ಕೆ ಮುತ್ತಿಕ್ಕಲು ಆಸೆ ಬುರುಕರಂತೆ ಬೆಳೆದ ಮರಗಳಿಗೆ ಗಣ ಕಟ್ಟುವಷ್ಟು ಚತುರತೆ ಮತ್ತು ತಾಕತ್ತು ನಮ್ಮ ಚಿಕ್ಕಪ್ಪಂದಿರರಿಗೆ ಇರಲಿಲ್ಲ. ಈಗಲೂ ನಮ್ಮ ಮನೆಯಲ್ಲಿ ಯಾರಿಗೂ ಅಷ್ಟು ದೊಡ್ಡ ಗಣವನ್ನು ಆತು ಹಿಡಿಯಲು ಆಗುವುದಿಲ್ಲ. ನಾನು ಅದರ ಸ್ಪರ್ಶವನ್ನೂ ಮಾಡಿಲ್ಲ.

ಮಳೆ ಇನ್ನೂ ಪೂರ್ತಿಯಾಗಿ ಬಿಟ್ಟಿರಲಿಲ್ಲ. ದನಕರುಗಳು ಓಡಾಡಿ ರಸ್ತೆಗಳು ಕೆಸರಿನ ಹೊಂಡಗಳಾಗಿದ್ದವು. ನಮ್ಮಜ್ಜಿಯ ಕೂಗಿಗೆ ಬೆಳಗ್ಗೆ ಬೇಗನೆ ಎದ್ದು ಎಂದಿನಂತೆ ಶಾಲು ಮತ್ತು ಟೋಪಿ ಧರಿಸಿ ತೋಟಕ್ಕೆ ಹೋದೆ. ದೀಪಾವಳಿಗೆ ತೋರಣ ಕಟ್ಟಲು ಮಾವಿನೆಲೆಗಳನ್ನು ತರಲು ನಮ್ಮ ಅಮ್ಮ ಆಜ್ಞೆ ಮಾಡಿದ್ದಳು. ನಮ್ಮ ಮಾವಿನ ಮರ ದೊಡ್ಡದಾಗಿದ್ದರಿಂದ ಮತ್ತು ನಮ್ಮ ಮಾವಿನ ಮರದಲ್ಲಿ ಎಲೆ ಕೀಳಲು ಮನಸ್ಸು ಬರದಿದ್ದರಿಂದ ಪಕ್ಕದಲ್ಲೇ ನಮ್ಮ ಚಿಕ್ಕ ತಾತನ ತೋಟದಲ್ಲಿದ್ದ ಸಣ್ಣ ಮಾವಿನ ಮರಕ್ಕೆ ಅತ್ತಿ ಮನೆಗೆ, ದನಿನ ಮನೆಗೆ ಮತ್ತು ಹಿಟ್ಟಿನ ಮಿಲ್ಲಿಗೆ ಆಗುವಷ್ಟು ಉದುರಿಸಿ, ಬಾಚಿಕೊಂಡು, ತೆಂಗಿನ ಗರಿಗಳಿಂದ ಕಟ್ಟಿ ಅಲ್ಲೇ ಹತ್ತಿರದಲ್ಲಿ ಇದ್ದ ನಮ್ಮ ಹಲಸಿನ ಮರದ ಕೆಳಗೆ ಇಟ್ಟು, ತೋಟ ಸುತ್ತಲು ಹೋದೆ. ತಿಂಗಳ ಮೇಲಾದರೂ ಕಾಯಿಗಳನ್ನು ಕೆಡವದೆ ಇದ್ದ ಕಾರಣಕ್ಕೆ ಹತ್ತಿಪ್ಪತ್ತು ಕಾಯಿಗಳು ಬಿದ್ದಿದ್ದವು. ಎಲ್ಲವನ್ನು ಮನೆಗೆ ಎತ್ತಿಕೊಂಡು ಹೋಗುವುದು ಕಷ್ಟದ ಕೆಲಸ. ಬರಿ ಕೈಯಲ್ಲಿ ಹೋದರೆ ನಮ್ಮ ಅಜ್ಜಿ ಅಲ್ಲಾಡಿಸಿಕೊಂಡು ಬಂದ್ಯಾ ಅಂತ ವಟಗುಟ್ಟುತ್ತಾಳೆ ಎಂದು ನಾಲ್ಕು ಕಾಯಿಗಳಿಗೆ ಜಿಡ್ಡಿ ಹಾಕಿ, ಎರಡೂ ಹೆಗಲ ಮೇಲೆ ಒಂದೊಂದು ಜಿಡ್ಡಿ ಹಾಕಿಕೊಂಡು, ಬಲಗೈಯಲ್ಲಿ ಮಾವಿನೆಲೆ ಎಡಗೈಯಲ್ಲಿ ಅರ್ಧರ್ಧ ಕೆಜಿ ಮಣ್ಣು ಮೆತ್ತಿದ್ದ ಚಪ್ಪಲಿ ಹಿಡಿದು ಹಿಂದಲ ಬಾಗಿಲ ಕಡೆ ಹೋದೆ. ನಮ್ಮ ಅಜ್ಜಿ ಆಗಲೇ ಶುರು ಮಾಡಿದ್ದಳು. ಏನೋ ನಡೆದಿದೆ ಎನ್ನುವ ಗುಮಾನಿ ಬಂತು. ಹಬ್ಬಗಳಲ್ಲಿ ಇಂತವು ಇಲ್ಲದೆ ಹಬ್ಬಗಳೇ ಮುಗಿಯುತ್ತಿರಲಿಲ್ಲ. ಬಲಿಪಶುವನ್ನು ಬಿಟ್ಟು ಉಳಿದವರಿಗೆಲ್ಲ ತಮಾಷೆ. ಸಾಮಾನ್ಯವಾಗಿ ಯಾವಾಗಲು ಬಲಿಪಶುಗಳು ಸೊಸೆಯಂದಿರೆ. ನಮ್ಮ ಅಜ್ಜಿ ಬಹಳ ಬುದ್ದಿವಂತೆ. ಸದ್ದು ಹೊಸಲು ದಾಟದಂತೆ ವಟಗುಟ್ಟುತ್ತಿದ್ದಳು. ನನ್ನ ಆ ಭಂಗಿಯನ್ನು ನೋಡಿ ನನ್ನ ತಂಗಿ ಓಡಿ ಬಂದು ಭುಜದ ಮೇಲಿದ್ದ ತೆಂಗಿನ ಕಾಯಿಗಳನ್ನು ಇಳಿಸಿ, ಮಾವಿನೆಲೆಗಳನ್ನು ತೆಗೆದುಕೊಂಡು ಅಲ್ಲೇ  ಇದ್ದ ತೊಟ್ಟಿಯಲ್ಲಿ ಮುಳುಗಿಸಿ ಒಳಗೆ ಹೋದಳು. ನಮ್ಮಜ್ಜಿ ಶುರುವಿಟ್ಟಳು ನಮ್ಮ ಕಾಲದಲ್ಲಿ ಹಾಗೆ ಹೀಗೆ ಎಂದು. ಅವಳ ಪುರಾಣವನ್ನು ಮನೆಯಲ್ಲೇ ಕೇಳುತ್ತಿದ್ದವನು ನಾನೊಬ್ಬನೆ. ಬೇರೆಯವರೆಲ್ಲ ಹಳ್ಳಿಯಲ್ಲೇ ಇರುತ್ತಿದ್ದರಿಂದ ನಮ್ಮಜ್ಜಿಯ ವಟವಟ ಅವರಿಗೆ ಪಕ್ಕದ ದೇವಸ್ಥಾನದಲ್ಲಿ ಕೂಗುತ್ತಿದ್ದ ಪಾರಿವಾಳಗಳ ಗುಟುರಿನಂತೆಯೇ ಆಗಿ ಹೋಗಿತ್ತು. ನಾನು ಮೊದಲ ಮೊಮ್ಮಗ, ವಂಶವಾಹಿನಿಯನ್ನು ಬೆಳೆಸುವವನು  ಮತ್ತು ಅದೆಲ್ಲಕ್ಕಿಂತ ಮುಖ್ಯವಾಗಿ ಅವಳ ಮಾತು ಕೆಳುತ್ತಿದ್ದವಾನಗಿದ್ದರಿಂದ ಅವಳ ದುಃಖ ದುಮ್ಮಾನಗಳನ್ನ ಬಿಚ್ಚಿಡುತ್ತಿದ್ದಳು.

ಅಂದಿನ ಅವಳ ದುಃಖಕ್ಕೆ, ಬೇಡ ಬೇಡ ದುಃಖ ತಪ್ಪಾದ ಪದವಾಗುತ್ತೆ, ಅವಳ ಗೊಣಗಾಟಕ್ಕೆ, ನಮ್ಮ ಚಿಕ್ಕಮ್ಮ ಅಡಿಗೆಗೆಂದು ಸುಲಿದಿದ್ದ ನನ್ನ ತಲೆ ಗಾತ್ರದ ತೆಂಗಿನ ಕಾಯಿಯೇ ಕಾರಣ. ನಮ್ಮಮ್ಮನಿಗೆ ನಮ್ಮಜ್ಜಿಯ ಬುದ್ದಿ ಗೊತ್ತಿದ್ದರಿಂದ ಕಾಯಿ ಸುಲಿದ ತಕ್ಷಣ ಬಳಸಿ, ಬಳಸಿದ ತಕ್ಷಣ ನೀರು ಕಾಯುವ ಹಂಡೆ ಒಲೆಯ ಪಾಲು ಮಾಡುತ್ತಿದ್ದಳು. ಅಂದು ಹಬ್ಬವಾದ್ದರಿಂದ, ಚಿಕ್ಕಮ್ಮ ಒಂದೆರಡು ಕಾಯಿಗಳನ್ನು ಸುಲಿದು ಅಲ್ಲೇ ಕಾಯಿ ಸುಲಿಯುವ ಆರೆಯ ಕೆಳಗೆ ಬಿಟ್ಟು ಒಳಗೆ ಬೇರೇನೋ ಕೆಲಸದಲ್ಲಿ ಮಗ್ನಳಾಗಿದ್ದಳು. ನನ್ನ ಕಂಡೊಡನೆ ಅವಳ ವಟವಟಕ್ಕೆ ಸ್ವಲ್ಪ ಸ್ಪಷ್ಟತೆ ಬಂತು. ನಮ್ಮ ಅಜ್ಜಿಯ ಪ್ರಕಾರ ಕೊಬ್ಬರಿಗೆಂದು ಅಟ್ಟಕ್ಕೆ ಹಾಕಿ ಉಳಿದ ಕಾಯಿಗಳನ್ನು ಅಡಿಗೆಗೆ ಬಳಸಬೇಕು. ಅಂದರೆ ಚೆನ್ನಾಗಿರುವ ಕಾಯಿಗಳೆಲ್ಲ ಅಟ್ಟಕ್ಕೆ ಹೋಗಬೇಕು ಅಲ್ಲಿ ಕೊಬ್ಬರಿಯಾಗಬೇಕು ನಂತರ ಅಲ್ಲಿಂದ ಕೊಬ್ಬರಿ ಮಂಡಿಗೆ ಹೋಗಬೇಕು. ಗೊತ್ತಾಗದೆ ಕಿತ್ತ ಮತ್ತು ಚೆನ್ನಾಗಿ ಬಲಿಯದ ದಿಗುಡ ಅಥವಾ ಹಳೆಯ ತೋಟಗಳಲ್ಲಿ ಬೀಳುತ್ತಿದ್ದ ಮುಷ್ಠಿ ಗಾತ್ರದ ತೆಂಗಿನ ಕಾಯಿಗಳು ಮಾತ್ರ ಮನೆಯ ಬಳಕೆಗೆ. ಇದು ಬಹಳ ವರ್ಷಗಳಿಂದ ಬಂದ ಪದ್ಧತಿ. ನಾವು ಬೆಳೆದ ಉತ್ತಮ ಬೆಳೆಯಲ್ಲಾ ಮಾರಟಕ್ಕೆ ಹೋದರೆ ಅಷ್ಟೇನೂ ಉತ್ತಮವಲ್ಲದ ಪದಾರ್ಥಗಳು ಮಾತ್ರ ನಮ್ಮ ಬಳಕೆಗೆ ಮೀಸಲಿರುತ್ತಿದ್ದವು. ನಮ್ಮ ಮನೆಯಲ್ಲಿ ಅಷ್ಟೇ ಅಲ್ಲ ಊರಲ್ಲಿ ಬಹಳಷ್ಟು ಮನೆಗಳಲ್ಲಿ ಇದೆ ಪದ್ಧತಿ. ಹಳ್ಳಿಯಲ್ಲಿ ನಮ್ಮಜ್ಜಿ ಮಾತ್ರವಲ್ಲ ಬಹಳಷ್ಟು ಬಾರಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಇದೆ ರೀತಿಯ ಬದುಕು ಬದುಕುತ್ತಾರೆ ಮತ್ತು ಬದುಕುತ್ತಿದ್ದಾರೆ.

ನಮ್ಮ ತೋಟಗಳಲ್ಲಿ ಚೆನ್ನಾಗಿ ನೀರಿದ್ದ ಅನಾದಿ ಕಾಲದಲ್ಲಿ ಒಮ್ಮೆ ಬಾಳೆ ಬೆಳದಿದ್ದರು. ನಾವು ಆ ತಳಿಯನ್ನು ಪುಟ್ಟ ಬಾಳೆ ಎಂದು ಕರೆಯುತ್ತಿದ್ದೆವು. ಬೆಂಗಳೂರಿನಲ್ಲಿ ಏಲಕ್ಕಿ  ಬಾಳೆ ಎಂದು ಸಂಬೋಧಿಸುವುದನ್ನು ನೋಡಿದ್ದೇನೆ. ಒಳ್ಳೆಯ ಬೆಳೆಯಾಗಿತ್ತು. ಯಾವ ಗೊನೆಗಳೂ ೧೦ ಕೆಜಿಗಿಂತ ಕಡಿಮೆ ಇರಲಿಲ್ಲ. ಹದಿನೈದು ದಿನಕೊಮ್ಮೆ ಕೊಯ್ಲು. ಚೆನ್ನಾಗಿ ಬಲಿತ, ದುಂಡಗೆ ಕಣ್ಣಿಗೆ ಕುಕ್ಕುವಂತಹ ಗೊನೆಗಳೆಲ್ಲ ತೋಟದಿಂದ ಸೀದಾ ಮಂಡಿಗೆ ಹೋದವು. ಹಕ್ಕಿ ಕುಕ್ಕಿದ, ಅರ್ಧ ಸೀಳಿಕೊಂಡಿದ್ದ, ಎಲ್ಲೂ ಮೂಲೆಯಲ್ಲಿದ್ದು ಸರಿಯಾಗಿ ನೀರು ಸಿಗದೆ ಪೀಚಿಕೊಂಡ ಬಾಳೆಗೊನೆಗಳು ನಮ್ಮ ಹಳೆ ಮನೆಯಲ್ಲಿ ನೆಲದೊಳಗಿದ್ದ ಪಣತ ಸೇರುತ್ತಿದ್ದವು. ಅವೇ ಬಹಳಷ್ಟು ಸಿಹಿ ಮತ್ತು ನಮಗೆ ಬೇಕಾಗುವಷ್ಟು ಇರುತ್ತಿದ್ದರಿಂದ ನಾವೆಲ್ಲ ಕಯೈ ಕುಇ ಎನ್ನದೆ ತಿನ್ನುತ್ತಿದ್ದೆವು. ಒಮ್ಮೆ ನಮಗಿರುವ ಎರಡು ಮಾವಿನ ಮರಗಳನ್ನು ಚಿಕ್ಕದೇವನೂರಿನ ಸಾಬಣ್ಣನಿಗೆ ಗುತ್ತಿಗೆ ಕೊಟ್ಟಿದ್ದರು. ಆ ವರ್ಷ ಒಳ್ಳೆಯ ಪಸಲು ಬಂದಿತ್ತು. ಎರಡು ಮರಗಳಿಂದ ಸೇರಿ ಐದಾರು ಸಾವಿರ ಕಾಯಿಗಿಂತ ಕಡಿಮೆ ಬಿಟ್ಟಿರಲಿಲ್ಲ. ಆಗಾಗ ಮರಕ್ಕೆ ಔಷಧಿ ಒಡೆಯುವುದು ಕಷ್ಟದ ಕೆಲಸ ಎಂದು ನಮ್ಮಪ್ಪ ಸಾಬಣ್ಣನಿಗೆ ಗುತ್ತಿಗೆ ಕೊಟ್ಟು, ೫೦೦ ಮಾವಿನ ಕಾಯಿಗಳನ್ನು ನಮಗೆ ಕೊಡು ಎಂದಿದ್ದರು. ಅವು ತೋಟದ ಮೇಲಿನ ತುದಿಯಲ್ಲಿದ್ದ ಮರಗಳು, ಆ ಎಳೆಯ ಬಿಸಿಲಿಗೆ ಸುಂದರ ಹುಡುಗಿಯ ಕೆನ್ನೆಯಂತೆ ಕೆಂಪಾಗಿದ್ದವು. ಇದು ಸಾಬಣ್ಣನ ಕಣ್ಣುಗಳನ್ನು ಕುಕ್ಕದೆ ಇರುತ್ತದೆಯೇ. ನಾನು ಪ್ರತಿ ಬೇಸಿಗೆ ರಜೆಯಲ್ಲೂ ಹಳ್ಳಿಗೆ ಹೋಗುತ್ತಿದ್ದೆ. ಹಲಸು, ಮಾವು, ಸೀಬೆ, ಗೋಡಿಂಬೆ, ಬಾರೆ ಹಣ್ಣು, ನಲ್ಲಿ ಕಾಯಿ ಮತ್ತು ಬೆಲ್ಲದ ಮರಗಳು ನಮ್ಮ ಹೊಟ್ಟೆ ತುಂಬಿಸುತ್ತಿದ್ದವು. ಸಾಬಣ್ಣ ಈ ಸಾರಿ ಏಪ್ರಿಲ್ ಕೊನೆಯಲ್ಲೇ ಮನೆಯಲ್ಲಿ ಯಾರಿಗೂ ಹೇಳದೆ ಮಾವಿನ ಕಾಯಿಗಳನ್ನು ಇಳುಯಿಸಿ ನಮಗೆ ಬರಬೇಕಾದ ೫೦೦ ಮಾವಿನ ಕಾಯಿಗಳನ್ನು ನಮ್ಮ ಜಗುಲಿಯ ಮೇಲಿಟ್ಟು, ನಮ್ಮಮ್ಮನ ಕೈಲಿ ಒಂದಿಷ್ಟು ದುಡ್ಡು ಕೊಟ್ಟು, ಉಳಿದಿದ್ದನ್ನು ಆಮೇಲೆ ಕೊಡುತ್ತೇನೆಂದು ಹೇಳಿ ಅಣ್ಣನಿಗೆ ಎಂದು ಅಮ್ಮನಿಗೆ ಹೇಳಿ ಅವನು ಕಾಲ್ಕಿತ್ತನು. ಅವಿನ್ನೂ ಸರಿಯಾಗಿ ಬಲಿತಿರಲಿಲ್ಲ, ಸಾಬಣ್ಣನೇನೋ ಪೌಡ್ರು ಗಿವ್ಡ್ರು ಹಾಕಿ ಹಣ್ಣು ಮಾಡಿಕೊಂಡು ಸಾಗಿಸಿದ. ನಮ್ಮ ಕಡಕಟ್ಟಿನ ಅಟ್ಟದಲ್ಲಿದ್ದ ಹಣ್ಣುಗಳು ಮಾಗಲೇ ಇಲ್ಲ. ನಾನು ದಿನ ನಮ್ಮಜ್ಜಿಯ ಕೈ ಚೀಲಕ್ಕೆ ಕೈ ಹಾಕಿ ಎಳೆದುಕೊಂಡು ಹೋಗಿ ಬೀಗ ತೆಗೆದು ಇಬ್ಬರೂ ರಾಗಿ ಹುಲ್ಲನ್ನು ಸರಿಸಿ ಇನ್ನೂ ಹಳದಿ ಬಣ್ಣಕ್ಕೆ ತಿರುಗದ ಮತ್ತು ವಾಸನೆ ಬರದದ್ದನ್ನು ಕಂಡು ಮುಖ ಇಳಿ ಬಿಟ್ಟುಕೊಂಡು ಅಟ್ಟದಿಂದ ಇಳಿಯುತ್ತಿದ್ದೆವು. ಹೀಗೆ ದಿನಗಳು ಸಾಗಿ ಒಂದೆರಡು ಹುಳಿಹಣ್ಣುಗಳನ್ನೇ ತಿಂದೆ. ರುಚಿಸಲಿಲ್ಲ. ಹಣ್ಣಾಗದೇ ಕೊಳೆತ ಮಾವಿನ ಕಾಯಿಗಳೇ ಹೆಚ್ಚು. ಪ್ರತಿದಿನ ಎಣಿಸಿ ಬರೆದಿಟ್ಟೆ. ಈ ವರ್ಷ ಚೆನ್ನಾಗಿ ಪಸಲು ಬಂದಿದ್ದರಿಂದ ಚೆನ್ನಾಗಿ ಮಾವಿನ ಹಣ್ಣುಗಳನ್ನು ತಿನ್ನೋಣ ಎಂಬ ಆಸೆಯಿಂದ ಹೋದ ನನಗೆ ಈ ಪ್ರಸಂಗ ಕೆಟ್ಟ ಸಿಟ್ಟು ಬರಿಸಿತ್ತು. ಅದು ನಮ್ಮಜ್ಜಿಗೆ ಚೆನ್ನಾಗೆ ಗೊತ್ತಿತ್ತು. ಮನೆಯವರಿಗೆಲ್ಲ ಗೊತ್ತಾಗದೆ ಇರಲಿಲ್ಲ. ಆವತ್ತು ಮನೆಗೆ ಬಂದ ನಮ್ಮಪ್ಪನನ್ನು ಯಾಕೆ ಸಾಬಣ್ಣನಿಗೆ ಗುತ್ತಿಗೆ ಕೊಡುವುದು. ಅವನು ಕೊಡುವ ಚಿಲ್ಲರೆ ಕಾಸಿಗೋಸ್ಕರ ನಮಗೆಲ್ಲ ನಾವು ಬೆಳೆದ ಮಾವಿನ ಹಣ್ಣುಗಳಿಲ್ಲ ಎಂದು ಕೂಗಾಡಿದೆ. ನಮಪ್ಪ ಏನೂ ಆಗೇ ಇಲ್ಲದಂತೆ, ಆ ಬೋಳಿಮಗ ಇಷ್ಟ್ ಬೇಗ ಕಾಯಿ ಇಳುವ್ತಾನೆ ಅಂತ ಯಾವನಿಗೆ ಗೊತ್ತಿತ್ತು ಬರಲಿ ನಾಳೆ ವಿಚಾರಿಸ್ತೀನಿ ಅಂದ್ರು. ನಮ್ಮಪ್ಪನ ಭಾಷೆಯೇ ಹಾಗೆ ಸ್ವಲ್ಪ. ಬೆಳಗ್ಗೆ ಬಂದ ಸಾಬಣ್ಣನಿಗೆ ನಮ್ಮಪ್ಪ ಎಲ್ಲ ಹೇಳಿದ್ದರು, ನನಗೂ ಸ್ವಲ್ಪ ಪರಿಚವಿದ್ದರಿಂದ ಅವನ ಕಣ್ಣಿಗೆ ಸಿಗಬೇಡ ಎಂದೂ ಸಾಬಣ್ಣನ ಬಳಿ ಹೇಳಿದ್ದರು ನಮ್ಮಪ್ಪ. ಅವನ ದುರದೃಷ್ಟ, ನನ್ನ ಕಣ್ಣಿಗೆ ಬಿದ್ದ. ನಾನು ಚೆನ್ನಾಗಿಯೇ ದಬಾಯಿಸಿ, ದುರಾಸೆ, ಹಾಗೆ ಹೀಗೆ ಎಂದು ಬಾಯಿಗೆ ಬಂದಾಗೆ ಯಾವುದೇ ಕೆಟ್ಟ ಪದಗಳಿಲ್ಲದೆ ಬೈದೆ. ಪಾಪ ಅವನು ಏನೂ ತೋಚದೆ ನಿಮ್ಮೂರಿನಲ್ಲಿ ನಿನಗೆ ಇಷ್ಟವಾದ ಮರದಲ್ಲಿನ ೧೦೦ ಹಣ್ಣುಗಳನ್ನು ಕೊಡ್ತೀನಿ ಎಂದು ಸಮಾಧಾನ ಮಾಡಿ ಹೋದ. ಊರಿನಲ್ಲಿನ ಬಹಳಷ್ಟು ಮರಗಳ ಗುತ್ತಿಗೆ ನೋಡಿಕೊಳ್ಳುತ್ತಿದ್ದವನು ಈ ಸಾಬಣ್ಣನೆ. ನಮ್ಮಪ್ಪ ಮುಂದೆ ಕಡಕಟ್ಟಿನಲ್ಲಿ ಪೇಪರ್ ಓದುತ್ತಾ ಈ ತಮಾಷೆ ನೋಡಿ ನಗುತ್ತಾ ಕುಳಿತ್ತಿದ್ದರು. ನಮ್ಮಜ್ಜಿ ಏನೂ ಮಾತಾಡದೆ ಮೊಮ್ಮಗ ಏನಾದ್ರು ತಪ್ಪು ಬೈದುಬಿಟ್ರೆ ಅಂತ ನನ್ನ ಹಿಂದೆಯೇ ನಿಂತಿದ್ದಳು. ನಂತರ ಊರಲ್ಲಿ ಅವಳಿಗೆ ಸಿಕ್ಕ ಸಿಕ್ಕವರಿಗೆಲ್ಲ ಈ ಸುದ್ದಿ ಹೇಳಿದ್ದಳು. ಇದರ ಪರಿಣಾಮವಾಗಿ ಊರೊಳಗೆ ಚೆನ್ನಾಗಿ ಪಸಲು ಬಂದಿದ್ದ ಕೆಲವು ಮಂದಿ ಆಯ್ಕೆ ಮಾಡಿದ ಒಂದೊಂದು ಬುಟ್ಟಿ ಮಾವಿನ ಹಣ್ಣುಗಳನ್ನು ಮನೆಗೆ ತಂದಿಡುತ್ತಿದ್ದರು. ಅಪ್ಪ ಆ ವರ್ಷದಿಂದ ಕೇವಲ ಒಂದೇ ಒಂದು ಮರವನ್ನು ಸಾಬಣ್ಣನಿಗೆ ಗುತ್ತಿಗೆ ಕೊಟ್ಟು ಮತ್ತೊಂದನ್ನು ಮನೆಗೆ ಇರಿಸಿಕೊಳ್ಳಲಾರಂಬಿಸಿದರು.

ಮೊನ್ನೆ "ಸರ್ಕಾರದಲ್ಲಿ ತಂತ್ರಜ್ಞಾನ" ಎನ್ನುವ ವಿಷಯದ ಮೇಲೆ ಸರ್ಕಾರದ ಕಾರ್ಯದರ್ಶಿಗಳ ಭಾಷಣವಿತ್ತು. ನಾನೂ ಹೋಗಿದ್ದೆ. ಅವರು ಅವರ ಭಾಷಣ ಮಾಡುತ್ತಾ, ನಮ್ಮ ಬೆಂಗಳೂರಿನಲ್ಲಿ ತಯಾರಾಗುವ ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳುತ್ತಿಲ್ಲ. ಆದರೆ ದೂರದ ದೇಶದ ಸರ್ಕಾರಗಳು ನಮ್ಮೂರಿನ ಹುಡುಗರು ತಯಾರಿಸಿದ ತಂತ್ರಜ್ಞಾನವನ್ನು ಬಳಸಿ ಅವರ ಸ್ಥಿಗತಿಗಳನ್ನು ಹೆಚ್ಚಿಸಿಕೊಂಡಿದ್ದಾರೆ. ನಾವಿನ್ನೂ ನಾವು ತಯಾರಿಸಿದ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದಾಗ ನಮ್ಮಜ್ಜಿ ಎಲ್ಲ ಕಡೆ ಇದ್ದಾಳೆ, ನಮ್ಮ ದೇಶದಲ್ಲಿ ಅವಳು ಸಾರ್ವತ್ರಿಕ  ಎಂದನಿಸಿತು.

No comments: