Friday, October 5, 2018

ಅರ್ಥ

ಇಂಗ್ಲೀಶ್ ಕಥೆ ಪುಸ್ತಕಗಳನ್ನು ಮೊದ ಮೊದಲು ಓದಲು ಶುರು ಮಾಡಿದಾಗ, ಪ್ರತಿ ಪುಟದಲ್ಲೂ ಹತ್ತರಿಂದ ಇಪ್ಪತ್ತು ಪದಗಳ ಅರ್ಥವೇ ತಿಳಿಯುತ್ತಿರಲಿಲ್ಲ. ಕೆಲವೊಮ್ಮೆ ವಾಕ್ಯಗಳ ಅರ್ಥವೂ ತಿಳಿಯುತ್ತಿರಲಿಲ್ಲ. ಆ ಹತ್ತಿಪ್ಪತ್ತು ಪದಗಳನ್ನು ಅಂಡರ್ ಲೈನ್ ಮಾಡಿ ಪ್ರತಿ ಪುಟ ಓದಿದ ಮೇಲೆ ಆ ಎಲ್ಲ ಪದಗಳ ಅರ್ಥವನ್ನು ಪಕ್ಕದಲ್ಲಿರುತ್ತಿದ್ದ ಡಿಕ್ಶನರಿಯಿಂದ ಅರ್ಥ ಮಾಡಿಕೊಂಡು ಮತ್ತೆ ಮುಂದಕ್ಕೆ ಹೋಗಬೇಕಾಗಿತ್ತು. ನಡಿಗೆ ಆಮೆಯ ವೇಗಕ್ಕಿಂತಲೂ ಕಡಿಮೆ. ಹೋಲಿಕೆ ಮಾಡದಿರುವುದೇ ಲೇಸು.
ಹಾಗೆಯೇ, ನನಗೆ ಪದ್ಯಗಳು(ಕನ್ನಡದ) ಅರ್ಥವಾಗುತ್ತಿರಲಿಲ್ಲ. ಈಗ ಅರ್ಥವಾಗುತ್ತವೆ ಎಂದಲ್ಲ. ಕೆಲವು ಬಹಳ ಸಿಂಪಲ್ಲಾದವು ಎಂದೆನಿಸಿದರೂ, ಮತ್ತೆ ಕೆಲವು ಬ್ರಹ್ಮಾಂಡದ ಎಲ್ಲಾ ಕಷ್ಟ ಪದಗಳನ್ನು ಕವಿ ಬಳಸಿದ್ದಾನೆ ಎಂದೆನಿಸುತ್ತಿತ್ತು. ಕೆಲವನ್ನು ಕಷ್ಟ ಪಟ್ಟು, ಕೆಲವರನ್ನು ಕೇಳಿ, ಮತ್ತೆ ಕೆಲವನ್ನು ರೆಫ಼ೆರ್ ಮಾಡಿ ಅರ್ಥಯಿಸಿಕೊಳ್ಳುತ್ತಿದ್ದೆ.
ಈಗೀಗ ನನಗೆ ಅರ್ಥವಾಯಿತೇ ಎಂದು ನಾನು ನನ್ನನ್ನು ಕೇಳಿಕೊಳ್ಳುವುದನ್ನೇ ನಿಲ್ಲಿಸಿದ್ದೇನೆ. ಕೆಲವೊಮ್ಮೆ ನಾಟಕಗಳನ್ನು ನೋಡಿದಾಗ ಒಂದಷ್ಟು ಅರ್ಥವಾಗುತ್ತವೆ, ಮತ್ತೊಂದಷ್ಟು ಏನೂ ತಿಳಿಯುವುದಿಲ್ಲ. ಕವಿತೆಗಳನ್ನು ಓದಿದಾಗ ಅರ್ಥಗಳನ್ನ ಹುಡುಕುವ ಗೋಜಿಗೆ ಹೋಗುವುದಿಲ್ಲ. ಕೆಲವು ಕವಿತೆಗಳನ್ನ ಬೇರೆ ಸ್ನೇಹಿತರ ಬಳಿ ಚರ್ಚಿಸಿದರೆ ಅವರ ಅರ್ಥಕ್ಕೂ ನನ್ನ ಅರ್ಥಕ್ಕೂ ಸಾಕಷ್ಟು ವ್ಯತ್ಯಾಸ ಕಾಣುತ್ತದೆ.
ಕಥೆ, ಕಾದಂಬರಿ, ಪದ್ಯಗಳನ್ನು ಓದುವಾಗ, ನಾಟಕ ಸಿನಿಮಾಗಳನ್ನು ನೋಡುವಾಗ ಮತ್ತು ಆಫಿಸಿನಿಲ್ಲಿ ಬೇರೆಯವರು ಬರೆದ ಕೋಡ್ ನೋಡುವಾಗ ಎಲ್ಲವೂ ಅರ್ಥವಾಗಬೇಕೆಂಬ ಅಚಲ ಆಸೆಯನ್ನು ಬಿಟ್ಟುಬಿಟ್ಟಿದ್ದೇನೆ. ಅದನ್ನು ಬದುಕಿನಲ್ಲೂ ಕಂಡುಕೊಳ್ಳಬೇಕಿದೆ.

No comments: