Sunday, June 22, 2014

ನಡೆಯಲು ಬಿಡದವರು!

ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಾಗ ಸಿಕ್ಕ ಉಪ್ಪಿನಕಾಯಿ ಮಲ್ಲಣ್ಣ ಶರಣು ಅಪ್ಪೋರಿಗೆ ಅಂದ್ರು. ಅವರು ಎಲ್ಲರನ್ನು ಮಾತನಾಡಿಸುವುದೇ ಹಾಗೆ. ಬಸವ ತತ್ವದ ಅನುಯಾಯಿಗಳು ಮತ್ತು ಪ್ರಚಾರಕರು. ಬರೆಯಲು ಬರದಿದ್ದರೂ ಕೆಲವಾರು ವಚನಗಳನ್ನು ಪಟಪಟನೆ ಹೇಳಬಲ್ಲರು ಮತ್ತು ಎಂತ ದಡ್ಡನಿಗೂ ಅರ್ಥವಾಗುವಂತೆ ವಿವರಿಸಬಲ್ಲರು.  ಉಪ್ಪಿನಕಾಯಿ ವ್ಯಾಪಾರ ಅವರ ಕಾಯಕ. ಆದ್ದರಿಂದಲೇ ಅವರು ಸುತ್ತಮುತ್ತಲ ಹಳ್ಳಿಗಳಲ್ಲಿ ಉಪ್ಪಿನಕಾಯಿ ಮಲ್ಲಣ್ಣ ಅಥವಾ ಮಲ್ಲೇದೇವರು ಎಂದು ಪ್ರಸಿದ್ಧಿ. ಅವರು ಚಿಕ್ಕಮಗಳೂರಿಗೆ ಯಾವುದೊ ಕೆಲಸದ ಮೇಲೆ ಹೊರಟಿದ್ದರು. ಬಸ್ಸು ಇಳಿದ ತಕ್ಷಣ ಸಿಕ್ಕವರು ಹೂವಿನ ಶಂಕರಪ್ಪ, ಸುತ್ತಮುತ್ತಲ ಹಳ್ಳಿಗಳಿಗೆ ಹಬ್ಬ ಹರಿದಿನಗಳಲ್ಲಿ ಹೂವನ್ನು ಪೂರೈಸುವವರು ಶಂಕ್ರಪ್ಪನವರೆ. ಅವರ ಮಕ್ಕಳು ನನಗಿಂತ ವಯಸ್ಸಿನಲ್ಲಿ ಚಿಕ್ಕವರು, ಅವರ ಪಿ.ಯು.ಸಿ ಮುಗಿದಾಗ ಯಾವ ಕಾಲೇಜಿಗೆ ಸೇರಿಸುವುದೂ ಸೇರಿದಂತೆ ಶಂಕರಪ್ಪನವರ ಅನೇಕ ಪ್ರಶ್ನೆಗಳನ್ನು ಉತ್ತರಿಸಿದ್ದರಿಂದ ನಾನು ಅವರಿಗೆ ಚಿರಪರಿಚಿತ ಕೂಡ. ಸಣ್ಣ ಊರಿನಲ್ಲಿ ಎಲ್ಲರೂ ಎಲ್ಲರಿಗೂ ಪರಿಚಿತರೆ. ಸಾಮಾನ್ಯವಾಗಿ ಬಸ್ಸಿನಿಂದ ಕೆಳಗೆ ಇಳಿದ ತಕ್ಷಣ ಸಿಗುವುದು ಇವರೇ. ಇವರಿಲ್ಲದಿದ್ದರೆ ಇವರ ಶ್ರೀಮತಿಯವರು ಹೂವು ಕಟ್ಟುತ್ತಾ ಕೂತಿರುತ್ತಾರೆ. ಈ ಬಾರಿ ಸಿಕ್ಕ ಶಂಕ್ರಪ್ಪನವರು, ಬೆಂಗಳೂರಿನಿಂದ ಈವಾಗ ಬರ್ತಿದಿರ? ಫೋನ್ ಮಾಡಿದಿರಾ ಮನೆಗೆ? ಯಾರಾದ್ರೂ ಗಾಡಿ ತರ್ತಾರೆ ಕೂತಿರಿ ಅಂದ್ರು. ನಾನು ಇಲ್ಲ, ಸ್ವಲ್ಪ ದೂರ ಅಲ್ವೇ, ನಡೆದೆ ಹೋಗುತ್ತೀನಿ ಅಂದೇ. ಅವರು ಸರಿ ಅಂದು ಮತ್ತೆ ಅವರ ಕೆಲಸಕ್ಕೆ ಹಿಂದಿರುಗಿದರು. ನಾನು ಮೊದಲು ಕೆಲಸ ಮಾಡುತ್ತಿದ್ದ ಕಂಪನಿಯವರು ಪುಕ್ಕಟೆಯಾಗಿ ಕೊಟ್ಟಿದ್ದ  ಬ್ಯಾಗನ್ನು ಹಿಂದೆ ಹಾಕಿಕೊಂಡು, ಬಿಸಿಲಲ್ಲಿ ಮುಖ ಬಾಡದಿರಲಿ ಎಂದು ಈಗ ಕೆಲಸ ಮಾಡುತ್ತಿರುವ ಕಂಪನಿಯವರು ಕೊಟ್ಟಿರುವ ಟೋಪಿಯನ್ನು ಹಾಕಿಕೊಂಡು ನಮ್ಮೂರಿನ ಕಡೆಗೆ ಹೆಜ್ಜೆ ಹಾಕಿದೆ. ಈಗ ಐ.ಟಿ ಕಂಪನಿಗಳಲ್ಲಿ ಕೊಡುವ ಬೋನಸ್ಸು ಕಡಿಮೆಯಾಗಿ, ಪುಕ್ಕಟೆಯಾಗಿ ಸಿಗುವ ಈ ತರಹದ ವಸ್ತುಗಳಲ್ಲೇ ನಾವು ಖುಷಿಯನ್ನು ಹುಡುಕಬೇಕಾಗಿದೆ. ಆದ್ದರಿಂದಲೇ, ಬೆಂಗಳೂರಿನಲ್ಲಿ ಇಬ್ಬರಲ್ಲಿ ಒಬ್ಬರ ಬೆನ್ನ ಹಿಂದೆ ಒಂದಲ್ಲ ಒಂದು ಕಂಪನಿಯ ಹೆಸರಿರುವ ಬ್ಯಾಗು ಎಲ್ಲರ ಕಣ್ಣಿಗೂ ಬೀಳುತ್ತದೆ. ಇದರಿಂದಲೂ ಒಂದು ಉಪಯೋಗ ಇದೆ. ಒಮ್ಮೆ ಹೈದರಾಬಾದಿನ ಒಂದು ಶಾಪಿಂಗ್ ಮಾಲ್ ನಲ್ಲಿ ನಾನು ಹಾಕಿಕೊಂಡ ತರಹದ ಬ್ಯಾಗನ್ನೇ ಮತ್ತೊಂದು ಸುಂದರ ಹುಡುಗಿ ಅವಳ ಬೆನ್ನಿಗೆ ಹಾಕಿಕೊಂಡಿದ್ದಳು. ಆಗ ತಾನೇ ನಾನು ಕೆಲಸಕ್ಕೆ ಸೇರಿದ್ದೆ, ಅವಳು ನಮ್ಮ ಕಂಪನಿಯಲ್ಲೇ ಕೆಲಸ ಮಾಡುತ್ತಿರಬಹುದು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಮ್ಮ ಮೇಷ್ಟ್ರುಗಳು ಕಾಲೇಜುಗಳಲ್ಲಿ ಹೇಳಿದ್ದು ತಲೆಯಲ್ಲಿ ಆ ಕ್ಷಣಕ್ಕೆ ಹಾದುಹೋಯಿತು. ಹಾಗಾಗಿ ಹೋಗಿ, ಮಾತಾಡಿಸಿದೆ. ಅವಳು ನಗುತ್ತಲೇ, ನಾನು ಎಲ್ಲೂ ಕೆಲಸ ಮಾಡುತ್ತಿಲ್ಲ, ಇದು ನನ್ನ ದೊಡ್ಡಪ್ಪನ ಮಗ ಕೊಟ್ಟ ಬ್ಯಾಗು ಅಂದಳು. ನನಗೆ ಸ್ವಲ್ಪ ಮುಜಗರವಾದರೂ ತೋರ್ಪಡಿಸದೆ ಹಿಂದಿರುಗಿ ಮಾತನಾಡಿಸಲು ಹುರಿದುಂಬಿಸಿದ ನನ್ನ ಕಂಪನಿಯ ಸಹೋದ್ಯೋಗಿಗಳಿಗೆ ವಿಷಯ ಮುಟ್ಟಿಸಿದೆ. ನನಗಿಂತಲೂ ಹೆಚ್ಚು ನಿರಾಶೆಗೊಂಡವರು ಅವರೇ.  

ಅಲ್ಲೇ, ಒಂದು ಸಣ್ಣ ಹೋಟೆಲ್ಲಿನಲ್ಲಿ ದಿನಪತ್ರಿಕೆ ಓದಿಕೊಂಡು ಕುಳಿತ್ತಿದ್ದ ನನ್ನ ದೊಡ್ಡಪ್ಪ, ಮನೆಗೆ ಫೋನ್ ಮಾಡೋ ಬೈಕ್ ತರ್ತಾರೆ ಅಂದ್ರು. ಅವರು ಬೇರೆ ಎಲ್ಲೋ ಹೋಗುವವರಿದ್ದರು ಎಂದು ಅನಿಸುತ್ತೆ. ನಮ್ಮ ಮನೆಯಲ್ಲಿ ನಮ್ಮ ಅಪ್ಪನೇ ದೊಡ್ಡವರು, ಆದರೆ ನಮ್ಮ ಅಜ್ಜನ ಅಪ್ಪನ(ಮುತ್ತಜ್ಜನ) ಅಜ್ಜನ(ಗಿರಿಯಜ್ಜನ) ಅಣ್ಣ ತಮ್ಮಂದಿರ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಗಿರಿಮಕ್ಕಳು ನಮಗೆ ಅಣ್ಣ ತಮ್ಮಂದಿರು ಎಂದು ಭಾವಿಸಲಾಗುತ್ತದೆ. ಮದುವೆಯಂತಹ ದೊಡ್ಡ ಕಾರ್ಯಗಳನ್ನು ಎಲ್ಲರೂ ಒಟ್ಟಾಗಿ ಮಾಡುತ್ತಾರೆ. ಈಗ ಸಿಕ್ಕ ದೊಡ್ದಪ್ಪ ನಮ್ಮ ಗಿರಿಯಜ್ಜನ ಅಪ್ಪನ ಅಣ್ಣನ  ವಂಶವೃಕ್ಷದಲ್ಲಿ ಬರುತ್ತಾರೆ. ಅವರಿಗೂ ನಾನು ನಡೆದು ಕೊಂಡೆ ಹೋಗುತ್ತೇನೆ ಎಂದು ಆಗ ತಾನೇ ಮಾಡಿದ್ದ ಸಿಮೆಂಟ್ ರಸ್ತೆಯಲ್ಲಿ ಹೆಜ್ಜೆ ಹಾಕತೊಡಗಿದೆ. ನನಗೆ ಶಿಕ್ಷಣ ಸಾಲ ಕೊಟ್ಟಿದ್ದ ವಿಜಯ ಬ್ಯಾಂಕ್ ಮ್ಯಾನೇಜರ್ ಸಿಕ್ಕು ಯಾವುದಾದರು ಉಳಿತಾಯ ಮಾಡುವುದಿದ್ದರೆ ನಮ್ಮ ಬ್ಯಾಂಕಿನಲ್ಲೇ ಮಾಡಪ್ಪ ಅಂದ್ರು. ಸಾಲ ಕೊಡಬೇಕಾದರೆ ಇದ್ದ ಮುಖಕ್ಕೂ ಇಂದಿನ ಮುಖಕ್ಕೂ ಬಹಳ ವ್ಯತ್ಯಾಸ ಇತ್ತು. ನಮ್ಮ ಅಪ್ಪನ ಹತ್ತಿರ ಮಾತನಾಡಿ ನಿಮಗೆ ತಿಳಿಸುತ್ತೇನೆ ಎಂದು ಹೇಳಿ ಟೋಪಿಯನ್ನು ಸರಿ ಮಾಡಿಕೊಂಡು ನಮ್ಮೂರ ಕಡೆಗೆ ಹೊರಟೆ. 

ಮುಂದೆ ಬಂದಾಗ ಒಂದು ಸಣ್ಣ ಟೀ ಅಂಗಡಿಯಲ್ಲಿ ಟೀ ಹೀರುತ್ತಾ ಕುಳಿತ್ತಿದ್ದ ಸೀಮೆಯಣ್ಣೆ ಸೀನಣ್ಣ ಮತ್ತು  ಪಿಗ್ನಿ ವಸೂಲು ಮಾಡುವ ಶಾಂತಣ್ಣ ಬಾರಪ್ಪ ಟೀ ಕುಡಿ ಅಂದ್ರು. ಸೀನಣ್ಣ ಮಾತು ಶುರು ಮಾಡಿ, ಫೋನ್ ಮಾಡೋಣ ಯಾರಾದ್ರೂ ಬಂದು ಕರೆದುಕೊಂಡು ಹೋಗುತ್ತಾರೆ, ಬಿಸಿಲು ಏರ್ತಿದೆ ಅಂದ್ರು. ನಾನು ಹೇಗಿದ್ದೀರಾ? ತಿಂಡಿ ಆಯ್ತಾ ಅಂತ ವಿಚಾರಿಸಿದೆ. ನನಗೆ ನಡೆಯುವುದು ಅಂದ್ರೆ ಇಷ್ಟ ನಾನು ನಡೆದೇ ಹೋಗುತ್ತೇನೆ ಅಂದೆ. ಜೀವಮಾನದಲ್ಲೂ ನಮ್ಮ ಹಳ್ಳಿಯ ಒಬ್ಬ ಹುಡುಗ ನಡೆಯುವುದು ಇಷ್ಟ ಅಂತಾನೆ ಅಂತ ಅಂದುಕೊಂಡಿರಲಿಲ್ಲ ಎಂಬ ಭಾವನೆ ಅವರ ಮುಖದ ಮೇಲಿತ್ತು. ಹಳ್ಳಿಗಳಲ್ಲಿ ನಡೆಯುವುದು, ಓಡುವುದೆಲ್ಲ ಇಷ್ಟಪಡುವಂತಹವು ಅಲ್ಲವೇ ಅಲ್ಲ. ಮನೆಯಲ್ಲಿ ವಾಹನವಿಲ್ಲದವರು ನಡೆಯುತ್ತಾರೆ ಮತ್ತು ವಾಹನವಿದ್ದವರು ನಡೆಯುವುದಿಲ್ಲ ಅಷ್ಟೇ. ಶಾಂತಣ್ಣ, ಈ ಉರಿ ಬಿಸಿಲಲ್ಲಿ ನಡೆದುಕೊಂಡು ಹೋಗುವುದು ಬೇಡ. ಇರು ನಾನೇ ಫೋನ್ ಮಾಡ್ತೀನಿ ಅಂದು ಅವರ ಫೋನ್ ತೆಗೆದರು, ಬೇಡ ಬೇಡ ನನಗೆ ಅಭ್ಯಾಸ ಇದೆ. ದಿನ ಬೆಂಗಳೂರಿನಲ್ಲಿ ಮನೆಯ ಹತ್ತಿರದ ಪಾರ್ಕಿನಲ್ಲಿ ಒಂದು ಗಂಟೆ ನಡೆಯಲಿಕ್ಕೆ ಹೋಗ್ತೇನೆ ಅಂದೆ. ಹಳ್ಳಿಗಳಿಗೂ ಟಿವಿಗಳು ಹೋಗಿರುವುದರಿಂದ ಪಟ್ಟಣಗಳ ಜೀವನ ಶೈಲಿ ಸಂಪೂರ್ಣವಾಗಿ ಗೊತ್ತಿಲ್ಲದಿದ್ದರೂ, ಅದರ ಅರಿವು ಹಳ್ಳಿಯಲ್ಲಿ ಇರುವ ಎಲ್ಲರಿಗೂ ಇದೆ. ನಮ್ಮ ಅಪ್ಪ ಸುತ್ತಮುತ್ತಲ ಹಳ್ಳಿಗಳಲ್ಲಿ ಪರಿಚಿತರು. ಹಾಗಾಗಿ ಬಹಳಷ್ಟು ಜನ ನನಗೂ ಪರಿಚಿತರೆ. ನನ್ನ ಮೊದಲ ಎರಡು ತರಗತಿಗಳನ್ನು ಇದೆ ಊರಿನಲ್ಲಿ ಓದಿದ್ದೆ. ಹಾಗಾಗಿ ಚಿಕ್ಕವನಿದ್ದಾಗ ಇವರನ್ನೆಲ್ಲ ಏಕವಚನದಲ್ಲಿ ಮತಾನಡಿಸಿದ್ದು ಇದೆ. ಅದಕ್ಕೆ ನಮ್ಮ ಅಮ್ಮನಿಂದ ಚೆನ್ನಾಗಿ ಒದೆ ತಿಂದದ್ದು ಇನ್ನೂ ಮಾಸದಂತೆ ಮನಸಿನಲ್ಲಿ ಇದೆ. ಇವರನ್ನೂ ಸಾಗಾಕಿ, ಹೋಗೋಣ ಎಂದು ಮತ್ತೆ ನನ್ನ ದಾರಿ ಹಿಡಿದೆ.

ಮುಖ್ಯ ದಾರಿಯಿಂದ ಅಡ್ಡದಾರಿಯಲ್ಲಿ ನನ್ನ ಮೋಜಿನ ನಡೆ ಸಾಗಿತ್ತು. ಈಗ ಸಿಕ್ಕಿದ್ದು ಗೊಬ್ಬರದ ಸೋಮಣ್ಣ, ಗೊಬ್ಬರ ಮಾರುವುದರಿಂದ ಜನರೆಲ್ಲಾ ಅವರನ್ನು ಕರೆಯುವುದು ಗೊಬ್ಬರದ ಸೋಮಣ್ಣ ಎಂದೇ, ಇವರದೂ ಅದೇ ಮಾತು. ಯಾಕಪ್ಪ ಈ ಉರಿ ಬಿಸಿಲಲ್ಲಿ ನಡೆದುಕೊಂಡು ಹೋಗುತ್ತಿದ್ದಿಯ ಅಂತ? ಅಷ್ಟೊತ್ತಿಗೆ ನನ್ನ ಸಾವಧಾನ ಕರಗಿ ಹೋಗಿತ್ತು. ನಿಮಗೇನ್ರಿ ಕಷ್ಟ ಅನ್ನೋಣ ಅಂತ ಅನ್ಕೊಂಡೆ. ಆದ್ರೆ ಈ ರಾಜಕೀಯದಲ್ಲಿ ಇರುವ ಕುಟುಂಬದವರು ಆಗೆಲ್ಲ ಮಾತಾಡುವ ಅಧಿಕಾರ ಕಳೆದುಕೊಂಡಿರುತ್ತಾರೆ. ಮುಂದಿನ ಸಾರಿ ಮತ ಹಾಕದಿರಲು ಇದೊಂದೇ ಮಾತು ಸಾಕು ನಮಗೆ. ಎಷ್ಟೇ ಆದರೂ ಮಾತೆ ಅಲ್ಲವೇ ಮಾಣಿಕ್ಯ? ನಾನು ಹಿಂದಿನವರಿಗೆ ಹೇಳಿದಂತೆ ಇವರಿಗೂ ಉತ್ತರಿಸಿದೆ. ಅಷ್ಟರೊಳಗೆ ಮನೆಯಿಂದ ಆಚೆ ಬಂದ ಅವರ ಶ್ರೀಮತಿ ನೀರು ತಂದು ಕೊಟ್ಟರು. ನೀರು ನನ್ನ ಬಿಸ್ಲೇರಿ ನೀರಿಗಿಂತ ಸಿಹಿಯಾಗಿತ್ತು. ಹೊಸ ಬೋರ್ ಕೊರೆಸಿದ್ರ ಅಂದೇ? ಅವರು ಇಲ್ಲ ನಮ್ಮೂರಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನೀರು ಶುದ್ಧೀಕರಣ ಘಟಕ ಬಂದಿದೆ. ಕೇವಲ ೨ ರುಪಾಯಿಗೆ ೨೦ ಲೀಟರ್ ನೀರು ಸಿಗುತ್ತೆ ಅಂದ್ರು. ಅಬ್ಬಾ ಪುಣ್ಯವಂತರು ಅಂತ ಮನಸಿನಲ್ಲಿ ಅಂದುಕೊಂಡು ನನ್ನ ದಾರಿ ನೋಡಿದೆ. ಮತ್ತೆ ದಾರಿಯಲ್ಲಿ ನ್ಯಾಯಬೆಲೆ ಅಂಗಡಿ ಜಯಣ್ಣ ಸಿಕ್ಕರು. ಹೋ, ಮತ್ತೆ ನಾನು ಯಾಕೆ ನಡೆದುಕೊಂಡು ಹೋಗ್ತಿದೀನಿ ಅಂತ ವಿವರಿಸಬೇಕಾಲ್ಲ ಅಂತ ವ್ಯಥೆ ಪಟ್ಟೆ. ನಮ್ಮೂರಿನ ಬನಶಂಕರಿಯ ದಯೆ, ಅವರು ಆ ಪ್ರಶ್ನೆ ಕೇಳದೆ ಈವಾಗ ಬಂದ್ಯಾ ಎಂದು ಕೇಳಿ ಅವರ ಪಾಡಿಗೆ ಅವರ ನ್ಯಾಯಬೆಲೆ ಅಂಗಡಿ ಕಡೆಗೆ ಹೊರಟರು. 

ಕೊನೆಗೂ ದಾರಿಯಲ್ಲಿ ಸಿಕ್ಕವರೆನೆಲ್ಲ ಮಾತನಾಡಿಸಿ ದೇವನೂರ ಮೂಲೆಗೆ ಬಂದೆ. ಇಲ್ಲಿಂದ ನಮ್ಮೂರಿಗೆ ಎರಡು ದಾರಿಗಳಿವೆ. ಒಂದು ಇತ್ತೀಚಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಆಗಿರುವ ಡಾಂಬಾರು ರಸ್ತೆ ಅಥವಾ ಕೆರೆಯ ದಾರಿ ಹಿಡಿಯುವುದು. ಮಳೆಯಿಲ್ಲದೆ ಕೆರೆ ಖಾಲಿ ಬಿದ್ದು ಬಹಳ ವರ್ಷಗಳೇ ಕಳೆದಿವೆ. ನಾವು ಚಿಕ್ಕವರಿದ್ದಾಗ ಶಾಲೆಗೆ ಹೋಗುತ್ತಿದ್ದಾಗ ಕಚ್ಚಾ ರಸ್ತೆಯಲ್ಲೋ ಅಥವಾ ಯಂಕಮ್ಮನ ಆಲದ ಮರದಿಂದ ತೆಂಗಿನ ತೋಟಗಳ ಸಾಲಿನಲ್ಲಿ ಹೋಗಿ ಊರು ಸೇರುತ್ತಿದ್ದೆವು. ಈ ಬಾರಿ ನಾನು ಕೆರೆಯೋಳಗಿಂದ ಹೋಗೋಣ ಎಂದು ಬಸ್ಸು ಇಳಿಯುವ ಮೊದಲೇ ತಿರ್ಮಾನಿಸಿದ್ದೆ. ಇನ್ನೇನು ಕೆರೆ ದಾರಿ ಹಿಡಿಯುವುದರೊಳಗೆ ಒಂದು ಬೈಕ್ ನಲ್ಲಿ ಬಂದ ನಮ್ಮೂರಿನ ಅಶೋಕಣ್ಣ ಮತ್ತು ಮಲ್ಲಿಕಣ್ಣ ಬಾ ನೀನು ಬೈಕ್ ಅಲ್ಲಿ ಹೋಗೋಣ ಅಂದ್ರು. ನಮೂರಲ್ಲಿ ಮೂರು ಮತ್ತು ನಾಲ್ಕು ಜನ ಒಂದೇ ಬೈಕಿನಲ್ಲಿ ಸವಾರಿ ಮಾಡುವುದು ಬಹಳ ಅಪರೂಪವೇನಲ್ಲ. ಅವರಿಗೂ ನಾನು ನಡೆದು ಕೊಂಡೆ ಬರುತ್ತೇನೆ ಎಂದು ಹೇಳಿ ಕೆರೆ ದಾರಿ ಹಿಡಿದೆ. ಬತ್ತಿದ ಹಳ್ಳ ದಾಟಿದ ಮೇಲೆ ನಿಧಾನವಾಗಿ ನಡೆಯುತ್ತಿದ್ದ ಚನ್ನೇಗೌಡ್ರು ಕಂಡರು. ಒಹ್, ಹೋದ ಬಾರಿ ಬಂದಾಗಲೂ ಇವರೇ ನನಗೆ ಕಂಪನಿ ಕೊಟ್ಟಿದ್ದು ಎಂದು ಅಂದುಕೊಂಡು ಅವರ ಸಮಕ್ಕೆ ನಾನೂ ನಡೆದೆ. ಅವರು ನಾನು ಬಂದಿದ್ದನ್ನು ಗಮನಿಸಿ, ಈಗ ಬರ್ತಿದ್ಯಾ? ಬೈಕ್ ತರುತ್ತಿದ್ದರು ಯಾರಾದ್ರೂ ಮನೆಗೆ ಫೋನ್ ಮಾಡಿದ್ರೆ ಅಂದ್ರು. ಇಲ್ಲ ನಾನು ನಿಮ್ಮ ಜೊತೆ ನಡೆದುಕೊಂಡೇ ಬರ್ತೀನಿ ಅಂದೆ. ಅವರು ಕಳೆದ ಸರಿ ಕೂಡ ನಾವು ಈ ಕೆರೆಯಲ್ಲೇ ಸಿಕ್ಕಿದ್ವಿ ಅಲ್ವಾ ಅಂದು ಇಬ್ಬರು ಅದು ಇದು ಮಾತಾಡಿಕೊಂಡು ಊರಿನ ಕಡೆಗೆ ಹೊರೆಟೆವು. ದಾರಿಯಲ್ಲಿ ಅವರ ತಲೆಮಾರಿನ ದೇವನೂರಿನ ಜನ ಅವರ ತೋಟಗಳಿಗೆ ಬಂದು ಮನೆಗೆ ವಾಪಸು ಹೋಗುತ್ತಿದ್ದವರಿಗೆ ನನ್ನ ಪರಿಚಯ ಮಾಡಿಸಿದರು. ಈಗಿನ ಹುಡಗರು ಯಾರು ನಡೆಯೋಲ್ಲಪ್ಪ ಎಲ್ಲ ಹಾರುತ್ತಾರೆ ಅಂತ ಅವರ ಶೈಲಿಯಲ್ಲಿ ನಮ್ಮ ಜೀವನ ಶೈಲಿಯ ಬಗ್ಗೆ ಅವರ ಅನಿಸಿಕೆ ಹೊರ ಹಾಕಿದರು. ನಾನು ಒಂದು ಸಣ್ಣ ನಗು ಕೊಟ್ಟೆ.

ಮನೆಗೆ ಬಂದ ಮೇಲೆ ನಮ್ಮೂರಿನ ಜೀವನ ಪದ್ಧತಿಗಳು ಬದಲಾಗಿದ್ದು ಹೇಗೆ ಎಂದು ಯೋಚಿಸಲು ಶುರು ಮಾಡಿದೆ. ಜನ ಮೊದಲೆಲ್ಲಾ ನಡೆದೇ ಹೋಗುತ್ತಿದ್ದರು. ಈಗ ದ್ವಿಚಕ್ರ ವಾಹನಗಳು ಎಲ್ಲರ ಮನೆಯಲ್ಲೂ ಇವೆ. ಅವುಗಳ ಅಗತ್ಯತೆ ಕೂಡ ಮುಖ್ಯವಾಗಿದೆ. ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ ಮನೆಯಲ್ಲಿ ಇದ್ದ ಒಬ್ಬೊಬ್ಬರಿಗೆ ಒಂದೊಂದು ಕೆಲಸವಿರುತ್ತಿತ್ತು. ಈಗ ಹಳ್ಳಿಗಳಲ್ಲೂ ವಿಭಕ್ತ ಕುಟುಂಬಗಳೇ ಹೆಚ್ಚು. ಹಾಗಾಗಿ ತೋಟ ನೋಡಿಕೊಳ್ಳುವುದು, ಹಸುಗಳನ್ನು ನೋಡಿಕೊಳ್ಳುವುದು ಮತ್ತು ಮನೆಯಾಚಿನ ವ್ಯವಹಾರದ ಕೆಲಸ ಹೀಗೆ ಎಲ್ಲವನ್ನೂ ಒಬ್ಬರೇ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಆದರೆ ಎಲ್ಲ ಕಡೆ ಆಗುವಂತೆ ನಮ್ಮ ಹಳ್ಳಿಗಳಲ್ಲೂ ಈಗ ದ್ವಿಚಕ್ರದ ಮೇಲಿಂದ ಇಳಿಯದವರೇ ಜಾಸ್ತಿಯಾಗಿದ್ದಾರೆ. ಬೆಂಗಳೂರಿನಲ್ಲಿ ತರಕಾರಿ ತರಲು ದ್ವಿಚಕ್ರ ಬಳಸುವವರನ್ನು ನೋಡಿ ನನ್ನ ಸ್ನೇಹಿತರು ಬೈಯುವುದನ್ನು ನೋಡಿದ್ದೇನೆ. ನಮ್ಮ ಹಳ್ಳಿಗಳಲ್ಲಿ ಹೊಲಗಳು ಕಡಿಮೆಯಾಗಿ ತೆಂಗಿನ ತೋಟಗಳು ಎಲ್ಲೆಡೆ ಕಾಣಸಿಗುತ್ತವೆ. ಜೋಡಿ ಎತ್ತುಗಳು ಕಾಣಸಿಗುವುದೇ ಅಪರೂಪ. ಮೊದಲಿನಷ್ಟು ಕಷ್ಟಪಡುವವರು ನಾವು ಅಲ್ಲವೇ ಅಲ್ಲ. ಇವೆಲ್ಲದರ ಪರಿಣಾಮ ಹಳ್ಳಿಗಳಲ್ಲೂ ಜೋತು ಬಿದ್ದ ಹೊಟ್ಟೆಗಳು ಕಾಣಸಿಗುತ್ತವೆ, ಸಕ್ಕರೆ ಕಾಯಿಲೆ ಹಳ್ಳಿಯಲ್ಲೂ ಸಾಮಾನ್ಯವಾಗಿದೆ. ನಮ್ಮ ಅಜ್ಜ ಅರಸೀಕೆರೆಯ ನಮ್ಮ ಚಿಕ್ಕಪ್ಪನ ಮನೆಗೆ ಬರುವಾಗ ೨೪ ಕಿಲೋಮೀಟರು ನಡೆದೇ ಬರುತ್ತಿದ್ದನ್ನು ಯಾವಾಗಲು ನೆನಪಿಸಿಕೊಳ್ಳುತ್ತಿರುತ್ತೇನೆ.