Saturday, November 29, 2014

ಗಿರಿಗದ್ದೆಯಲ್ಲಿ ಸಮಾನತೆಯ ಪಾಠ

ಅಸಮಾನತೆ ಅನ್ನುವುದು ನಮ್ಮೊಳಗೆ, ಎಲ್ಲರೊಳಗೆ, ಎಲ್ಲದರೊಳಗೆ ಬೆರೆತು ನಮ್ಮನ್ನು ಮರೆಯಿಸುತ್ತಿರಬೇಕಾದರೆ ಕೆಲವು ಘಟನೆಗಳು, ಕೆಲವು ಜನರು, ಕೆಲವು ಪದ್ಧತಿಗಳು ಸಮಾನತೆಯನ್ನು ಜಾರಿಗೆ ತರುತ್ತಿವೆ. ಕುಕ್ಕೆ ಸುಬ್ರಮಣ್ಯ ಮಡೆಸ್ನಾನ ಎನ್ನುವ ಹೆಸರಿನಲ್ಲಿ ಬಹಳ ಸದ್ದು ಗದ್ದಲ ಎಬ್ಬಿಸುತ್ತಲಿರುತ್ತದೆ. ಮೊನ್ನೆ ಉಡುಪಿಯಲ್ಲಿ ಊಟದ ಪಂಕ್ತಿಯಿಂದ ಒಬ್ಬರನ್ನು ಮಧ್ಯದಲ್ಲೆ ಎಬ್ಬಿಸಿದರು ಎನ್ನುವ ಸುದ್ದಿ ಎಲ್ಲ ಕಡೆ ಸದ್ದು ಮಾಡಿತ್ತು. ಪಂಕ್ತಿ ಊಟ ಬೇಕೋ ಬೇಡವೋ ಅಥವಾ ಮಡೆಸ್ನಾನ ಬೇಕ ಬೇಡವೋ ಎನ್ನುವ ವಾದಕ್ಕೆ ಇಳಿಯದೆ, ಸುಬ್ರಮಣ್ಯದ ಗಿರಿಗದ್ದೆಯಲ್ಲಿ ಸಮಾನತೆಯ ಸಮಾರಾಧನೆಯ ಬಗ್ಗೆ ಬರೆಯೋಣ ಏಂದು ಅನಿಸಿತು.

ಗಿರಿಗದ್ದೆಯಲ್ಲಿ ಏನಿದೆ ಎಂದು ನಿಮಗೆ ಅನಿಸುತ್ತಿರಬಹುದು. ಅಲ್ಲಿ ಯವೂದೇ ಮಠವಾಗಲಿ, ದೇವಸ್ಥಾನವಾಗಲಿ ಮತ್ತೊಂದಾಗಲಿ ಇಲ್ಲವೇ ಇಲ್ಲ. ಆದರೆ ಗಿರಿಗದ್ದೆಯಲ್ಲಿ ಭಟ್ಟರ ಮನೆಯಿದೆ. ಕುಮಾರ ಪರ್ವತಕ್ಕೆ ಚಾರಣಕ್ಕೆ ಹೋಗುವ ಎಲ್ಲರಿಗೂ ಬೆಳಗ್ಗೆ ತಿಂಡಿ ಬೇಕಾದರೆ ತಿಂಡಿ, ಮಧ್ಯಾನದ ಊಟ ಬೇಕಾದರೆ ಊಟ ಮತ್ತು ರಾತ್ರಿ ಉಳಿದುಕೊಳ್ಳಬಯಸುವವರು ಅಲ್ಲಿಯೇ ತಂಗಿ ಊಟ ಮಾಡಿಕೊಂಡಿರಬಹುದು. ಇದರಲ್ಲೇನಿದೆ ಎಂದು ನಿಮಗೆ ಅನಿಸುತ್ತಿರಬೇಕು! ಭಟ್ಟರು ಊಟವನ್ನು ಪುಕ್ಕಟೆಯಾಗಿ ಹಾಕುವುದಿಲ್ಲ, ಆದರೆ ಎಲ್ಲರಿಗೂ ಊಟವಿರುತ್ತೆ. ಎಲ್ಲರಿಗೂ ಒಂದೇ ಊಟ. ತಟ್ಟೆಗಳನ್ನು ಮತ್ತು ಮಜ್ಜಿಗೆಗೆ ಕಪ್ಪುಗಳನ್ನು ಇಟ್ಟಿರುತ್ತಾರೆ, ಎಲ್ಲರೂ ಊಟ ಮಾಡಿ ತಟ್ಟೆಗಳನ್ನು ತೊಳೆದು ಮೊದಲಿದ್ದ ಜಾಗದಲ್ಲಿ ಇಡಬೇಕು. ಒಂದೇ ರೀತಿಯ ಊಟ, ನಿಮ್ಮ ಹತ್ತಿರ ಎಷ್ಟೇ ದುಡ್ಡಿದ್ದರೂ ಅನ್ನ, ಸಾರು ಮತ್ತು ಮಜ್ಜಿಗೆ ಬಿಟ್ಟರೆ ಬೇರೆನನ್ನು ಕೊಡಲ್ಲ. ಅವರ ಬಾಳೆ ತೋಟದ ಬಾಳೆಹಣ್ಣು ಇದ್ದರೆ ಕೊಡುತ್ತಾರೆ. ಮಲಗಲು ಅಷ್ಟೇ, ಯಾರು ಮೊದಲು ಬರುತ್ತಾರೆ ಅವರಿಗೇ ಮೊದಲ ಆದ್ಯತೆ. ಭಟ್ಟರ ಮನೆ ಮೊದಲು ಹೇಗಿತ್ತೊ ಇವತ್ತೂ ಹಾಗೆ ಇದೆ.
ಇದು ಗೂಗಲ್‍ನಿಂದ ತೆಗೆದಿದ್ದು. 

ಮೊನ್ನೆ ನಾವು ಭಟ್ಟರ ಮನೆಗೆ ಹೋದಾಗ ತೆಗೆಸಿಕೊಂಡ ಪಟ. ಇನ್ನೊಬ್ಬ ಭಟ್ಟರು, ಊಟದ ನಂತರ ಮಲಗಿಬಿಟ್ಟರು. 


ನಿಮಗೆ ಮತ್ತೂ ಅನಿಸುತ್ತಿರಬೇಕು ಇದರಲ್ಲೇನು ವಿಶೇಷ ಎಂದು. ನಾನು ಸಾಕಷ್ಟು ಕಡೆ ಚಾರಣಕ್ಕೆ ಹೋಗಿದ್ದೇನೆ. ಎಲ್ಲ ಕಡೆಯೂ ನಗರಗಳಲ್ಲಿ ಏನೇನು ಸಿಗುತ್ತದೆ ಅದನ್ನೇಲ್ಲ ತಂದು ದುಬಾರಿ ಬೆಲೆಗೆ ಮಾರುವ ಅಂಗಡಿಗಳು ಸಿಗುತ್ತವೆ. ದೂರದ ಹಿಮಾಲಯದ ಚಾರಣ ತಾಣಗಳಿಂದ ಇಡಿದು, ನಮ್ಮ ಸುತ್ತಲ ಬೆಟ್ಟಗಳಲ್ಲಿರುವ ಅಂಗಡಿಗಳು ಹೊರತಲ್ಲ. ಭಟ್ಟರ ಮನೆಯಲ್ಲಿ ಟಿ.ವಿಯಿದೆ, ಅವರ ಹತ್ತಿರ ಮೊಬೈಲ್ ಕೂಡ ಇದೆ. ನಗರಗಳ ಪರಿಚಯವಿದೆ. ಆದರೂ ಅವರ ಮನೆಯಲ್ಲಿ ಎಲ್ಲರೂ ಒಂದೇ.

ನಾಗರೀಕತೆಯಿಂದ ಜಾಗತೀಕರಣದವರೆಗೆ ಬೆಳೆದ ನಾವು ಅಸಮಾನತೆಯನ್ನು ಮಾತ್ರ ಹೆಚ್ಚಿಸುತ್ತಲೇ ಬಂದಿದ್ದೇವೆ. ಆದರೆ ಗಿರಿಗದ್ದೆ ಭಟ್ಟರಂತವರು ತಿಳಿದೋ ತಿಳಿಯದೆಯೋ ಸಮಾನತೆಯ ಗಿಡವನ್ನು ಪೋಷಿಸುತ್ತಿದ್ದಾರೆ. ಬಸವಣ್ಣ ಮತ್ತು ಗಾಂಧಿಜೀ ಇದನ್ನೆ ಅಲ್ಲವೇ ಮಾಡಿದ್ದು.    

Thursday, November 27, 2014

ಪೇರ್ ಪ್ರೊಗ್ರಾಮಿಂಗ್

ಮೊನ್ನೆ ನನ್ನ ಆಫೀಸಿನ ಮೇಲ್‍ಡಬ್ಬಿಗೆ ಒಂದು ಮೇಲ್ ಬಂದು ಬಿತ್ತು. ಅದು ನಮ್ಮ ವಿ.ಪಿ ಕಳಿಸಿದ ಮೇಲ್. ಮತ್ತೆ, ಅದೇ ಪ್ರಯೋಜನಕ್ಕೆ ಬಾರದ ಮೇಲ್ ಇರಬೇಕು ಎಂದು ಡಿಲಿಟೆಡ್ ಎಂದು ಇರುವ ಮತ್ತೊಂದು ಡಬ್ಬಿಗೆ ಆದನ್ನು ದಬ್ಬಿದ್ದೆ. ದಿನಾಲೂ ಸಾಲ ಬೇಕಾ ಎಂದು ಬರುವ ರೀತುವಿನ ಮೇಲ್, ಅಪರ್ಟ್‍ಮೇಂಟ್ ಬೇಕಾ ಎಂದು ಬರುವ ಮಹಿಮಾಳ ಮೇಲ್,  ಕ್ರೇಡಿಟ್ ಕಾರ್ಡ್ ಬೇಕಾ ಎಂದು ಬರುವ ಟೀನಾಳ ಮೇಲ್‍ನೇ ಓದದೆ ಡಿಲಿಟೆಡ್ ಡಬ್ಬಿಗೆ ದಬ್ಬುತ್ತಿರುವಾಗ, ಇನ್ನೂ ವಿ.ಪಿಯಿಂದ ಬರುತ್ತಿರುವ ಮೇಲ್‍ಗೆ ಆ ಗತಿ ಕಾಣಿಸಿದ್ದು ತಪ್ಪಿಲ್ಲ ಎಂದು ಹೇಳುತ್ತಿತ್ತು ಮನಸು ಆ ದಿನ. ನಮ್ಮ ಚಾಳಿ ತಿಳಿದೋ ಏನೋ ನಮ್ಮ ಅಫೀಸುಗಳಲ್ಲಿ ನಮ್ಮನ್ನು ಕಾಯಲೆಂದೇ ಮ್ಯಾನೇಜರ್‌ಗಳಿರುತ್ತಾರೆ. ಸಾಮಾನ್ಯವಾಗಿ ಇವರ ಮೂಲಕವೇ ನಮ್ಮ ಕೆಲಸ ಕಾರ್ಯಗಳು ನಡೆಯುವುದು. ಆ ದಿನ ಸೋಮವಾರ, ಮಧ್ಯಾನದ ಸಮಯಕ್ಕೆ ಒಂದು ಮೀಟಿಂಗ್ ರಿಕ್ವೇಸ್ಟ್ ನನ್ನ ಮೇಲ್ ಡಬ್ಬಿಗೆ ಬಂದು ಬಿತ್ತು.  ಆದರ ವಿಷಯ "Discussion about implementing pair programming in the team" ಎಂದು ಇತ್ತು. ಅದು ಪೇರ್ ಪ್ರೊಗ್ರಾಮಿಂಗ್ ಅನ್ನು ನಮ್ಮ ಟೀಮ್‍ನಲ್ಲಿ ಅಳವಡಿಸುವ ಕುರಿತಾದ ಮಾತುಕತೆಗೆ ಆಹ್ವಾನ.  ಕೆಳಗೆ ಅದರ ಬಗ್ಗೆ ಸಂಕ್ಷಿಪ್ತವಾಗಿ ಬರೆಯಲಾಗಿತ್ತು. ಒಂದೆರಡು ಅದರ ಕುರಿತಾದ ಲೇಖನಗಳನ್ನು ಮೀಟಿಂಗ್ ರಿಕ್ವೇಸ್ಟ್‌ಗೆ ಅಂಟಿಸಲಾಗಿತ್ತು.  ಇದರ ಬಗ್ಗೆಯೇ ನಮ್ಮ ವಿ.ಪಿಯಿಂದ ಮೇಲ್ ಬಂದಿದ್ದು, ಅವರು ನಮ್ಮ ಎಲ್ಲ ಟೀಮ್‍ಗಳಲ್ಲಿ ಪೇರ್ ಪ್ರೊಗ್ರಾಮಿಂಗ್ ಮಾಡಬೇಕೆಂದು ಫರ್ಮಾನು ಹೋರಡಿಸಿದ್ದರು.

ಪೇರ್ ಪ್ರೊಗ್ರಾಮಿಂಗ್ ಅಂದರೆ ಇಬ್ಬರು ಒಂದೇ ಕಂಪ್ಯೂಟರಿನ ಮುಂದೆ ಕೂತು ಒಂದೇ ಕೆಲಸ ಮಾಡುವುದು ಎಂದು. ಪ್ರೊಗ್ರಾಮ್ ಅಂದರೆ, ಬರೆದವನನ್ನು ಹೊರತುಪಡಿಸಿ ಬೇರೆ ಯಾರಿಗೂ ಸರಿಯಾಗಿ ಅರ್ಥವಾಗದೇ ಕಂಪ್ಯೂಟರ್‌ಗೆ ಮಾತ್ರ ಅರ್ಥವಾಗುವ ಕೆಲವು ಸಂಬಂಧಿ ವಾಕ್ಯಗಳು. ಈ ಕಂಪ್ಯೂಟರಿನ ವಾಕ್ಯಗಳನ್ನು ಒಬ್ಬರು ಬರೆದರೆ ಹೆಚ್ಚು ದೊಷಪೂರಿತವಾಗಿರುತ್ತವೆ ಎಂದು ನಂಬಿ ಇತ್ತೀಚಿನ ದಿನಗಳಲ್ಲಿ ಇಬ್ಬರು ಕೂತು ಬರೆಯುತ್ತಾರೆ. ಇದರ ಮೇಲೆ ಒಂದೆರಡು ತರಬೇತಿಗಳನ್ನು ನಡೆಸಲಾಯಿತು. ನಮ್ಮ ಟೀಮ್ ಒಳಗೆ ಮತ್ತೊಂದು ಬಾರಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಇವೆಲ್ಲವೂ ಇಲ್ಲಿ ನಡೆಯುತ್ತಿರಬೇಕಾದರೆ ಒಂದು ಶನಿವಾರ ಊರಿಗೆ ಹೋಗಿದ್ದೆ. ಊರೇನು ಬಹಳ ದೂರವಿಲ್ಲದ ಕಾರಣ ಬೆಂಗಳೂರಿನಲ್ಲಿ ಮಾಡಲು ಏನೂ ಕೆಲಸವಿಲ್ಲದಿದ್ದರೆ ಕೆಂಪು ಬಸ್ ಹಿಡಿದು ಹಳ್ಳಿ ಸೇರುವುದು ಮೊದಲಿನಿಂದಲೂ ಮಾಡಿಕೊಂಡು ಬಂದ ಸುಕಾರ್ಯ.

ಈ ಬಾರಿ ಹೋದಾಗ ಮುಂಗಾರಿನ ಮಳೆ ಚೆನ್ನಾಗಿಯೇ ಆಗಿತ್ತು. ಕೆಲವು ರೈತರು ಬಿತ್ತನೆ ಕಾರ್ಯವನ್ನು ಶುರು ಮಾಡಿದ್ದರು. ನಮ್ಮ ಮನೆಯಲ್ಲಿ ಹೊಲ ಹೆಚ್ಚಿಲ್ಲದ ಕಾರಣ ತೋಟಗಳಲ್ಲಿ ಸಮೃಧಿಯಾಗಿ ಬೆಳೆದಿದ್ದ ಕಾಂಗ್ರೆಸ್ ಗಿಡಗಳನ್ನು ನಾಶಮಾಡಲು ಒಂದೆರಡು ಬಾರಿ ಟ್ರಾಕ್ಟ್‌ರ್‌ನಲ್ಲಿ ಉಳುಮೆ ಮಾಡಿ ಮುಗಿಸಿಯಾಗಿತ್ತು. ಶನಿವಾರ ನಮ್ಮೆಲ್ಲ ತೋಟಗಳನ್ನು ಅಡ್ಡಾಡಿ ಸಂಜೆಯಾಗುತ್ತಿದ್ದಂತೆ ಪಕ್ಕದ ಊರಿನಲ್ಲಿರುವ ನಮ್ಮ ದೊಡ್ಡಪ್ಪನ ಊರಿಗೆ ಹೋದೆ. ನಮ್ಮ ದೊಡ್ಡಪ್ಪನಿಗೆ ಹೊಲ ಚೆನ್ನಾಗಿಯೇ ಇದೆ. ಮುಂಗಾರಿನಲ್ಲಿ ಸೂರ್ಯಕಾಂತಿ ಅಥವ ನೆಲಗಡಲೆ ಬೆಳೆದರೆ ಹಿಂಗಾರಿನಲ್ಲಿ ಹುರುಳಿ ಬೆಳೆಯುತ್ತಿದ್ದರು. ಈ ಬಾರಿ ಟ್ರಾಕ್ಟ್‌ರ್‌ನಲ್ಲಿ ಒಮ್ಮೆ ಹೊಲವನ್ನೆಲ್ಲ ಉಳುಮೆ ಮಾಡಿಸಿ, ಪಕ್ಕದೂರಿಗೆ ಹೋಗಿ ಕಳೆ ಆಯುವವರನ್ನು ಕರೆದು ತಂದು, ಅವರಿಗೆ ಸಂಬಳದ ಜೊತೆ ಒಂದು ನೈಂಟಿ ಹಾಕಿಸಿ ಹೊಲದ ಕಳೆಯನ್ನೆಲ್ಲ ಆಯಿಸಿಯಾಗಿತ್ತು. ಕೆಂಪು ನೆಲದ ಹೊಲ, ಎರಡು ಮಗ್ಗಲ ಬೇಸಾಯಕ್ಕೆ ಯಂಟೆಗಳೆಲ್ಲ ಚೂರಾಗಿ ಮಂಗಳೂರಿನ ಕಡಲ ಮರಳಿನಂತೆ, ಉಪ್ಪಿಟ್ಟಿನ ರವೆಯಂತೆ ಉದುರಾಗಿ ಹೋಗಿದೆ. ಬಿತ್ತಲು ಬೀಜ, ಗೊಬ್ಬರ ಮತ್ತು ಬಿತ್ತಲು ಬೇಕಾದ ಕೂರಿಗೆ ತಯಾರಾಗಿದೆ. ಪ್ರತಿ ಸಲ ಬಿತ್ತಲು ಬರುತ್ತಿದ್ದ ಈರಮ್ಮ ಈ ಬಾರಿ ಬರದ ಕಾರಣ ನಮ್ಮ ದೊಡ್ಡಮ್ಮನೇ ಬಿತ್ತುವುದು ಎಂದು ತೀರ್ಮಾನವಾಗಿದೆ. ಆದರೆ ಮುಖ್ಯವಾಗಿ ಕೂರಿಗೆ ಮುನ್ನಡೆಸಲು ಜೋಡಿ ಎತ್ತುಗಳು ಸಿಗುತ್ತಿಲ್ಲ. ನೂರು ಮನೆಯ ಹಳ್ಳಿ. ಊರನ್ನೆಲ್ಲ ಒಂದು ಸುತ್ತು ಬಂದರೂ ಒಂದು ಜೊತೆ ಎತ್ತು ಆ ದಿನಕ್ಕೆ ಇಲ್ಲ. ಊರಲ್ಲೆಲ್ಲ ಇರುವುದೇ ಮೂರೋ ನಾಲ್ಕೋ ಜೊತೆ ಎತ್ತುಗಳು. ಆ ಎತ್ತುಗಳಿಗೆ ಎಲ್ಲಿಲ್ಲದ ಪೈಪೂಟಿ. ಅವುಗಳ ಮಾಲೀಕರಿಗೆ ಎಲ್ಲಿಲ್ಲದ ಬೆಲೆ. ರಾತ್ರಿ ನೈಂಟಿ ಗ್ಯಾರೆಂಟಿ, ನೈಂಟಿ ಹಾಕದವರಿಗೆ  ಬೇರೆ ರೀತಿಯಲ್ಲಿ ವ್ಯವಸ್ಥೆ ಇದ್ದೆ ಇರುತ್ತೆ. 

ರಾತ್ರಿ ಊಟವಾದ ಮೇಲೆ ಬತ್ತಿದ ಬಾವಿಯ ದಡದಲ್ಲಿ ಕೂತು, ಮೇಲೆ ನಕ್ಷತ್ರಗಳನ್ನು ಏಣಿಸುತ್ತ, ಪಕ್ಕದಲ್ಲೇ ಪಾತ್ರೆ ತೊಳೆಯುತ್ತಿದ್ದ ದೊಡ್ದಮ್ಮನ ಸ್ಟೀಲ್ ಪಾತ್ರೆಗಳ ಸದ್ದನ್ನು ಕೇಳಿಸಿಕೊಳ್ಳುತ್ತ,  ಎಲೆ ಅಡಿಕೆ ಹಾಕಿಕೊಳ್ಳುತ್ತ, ನಮ್ಮ ದೊಡ್ಡಪ್ಪನನ್ನು ಕೇಳಿದೆ, ಮೊದಲು ಮನೇಲೆ ಎತ್ತು ಇದ್ದವಲ್ಲ, ಈಗ ಏನ್ ಮಾಡಿದೆ? ನಮ್ಮ ದೊಡ್ಡಪ್ಪ, ಅವನ್ನು ಸಾಕಲು ಆಗದೆ ಮಾರಿ ಬಹಳ ವರುಷಗಳೇ ಕಳೆದಿವೆ ಅಂದರು. ಯಾಕ್ ದೊಡ್ಡಪ್ಪ ನೀನು ಇಷ್ಟಪಟ್ಟು ಬೆಳಿಸಿದವು ಅಲ್ವ ಅಂದೆ. ದೊಡ್ದಮ್ಮ ಪಕ್ಕದ ಮನೆಯ ಗೌರಕ್ಕನ ಹತ್ರ ಧಾರವಾಯಿಯಲ್ಲಿ ಬರುವ ಯಾವುದೋ ವಿಲ್ಲನ್ ಪಾತ್ರವನ್ನು ಯಗ್ಗ ಮಗ್ಗ ಬೈತಿದ್ರು. ದೊಡ್ಡಪ್ಪ, ಬೇಸಿಗೆಲಿ ಮೇವಿರಲ್ಲ, ಏನ್ ಮಾಡದು. ಈಗ ಟ್ರಾಕ್ಟ್‌ರ್ ಇರೋದಕ್ಕೆ ಎತ್ತು ಅಷ್ಟು ಬೇಕಾಗಲ್ಲ, ಬರೀ ಬಿತ್ತಕೆ, ಕುಂಟೆ ಹೋಡಿಯೋಕೆ ಬೇಕು ಅಷ್ಟೇ. ಅದಕ್ಕೆ ಆ ಶಂಕ್ರನವು ಇದ್ವು ಮೊದಲು, ಈಗ ಆ ಬೋಳಿಮಗನು ಮಾರಿದನೆ ಅಂದ್ರು. ದೊಡ್ಡಮ್ಮನ ಮಾತು ಮುಗಿದು ಗೌರಕ್ಕನ ಮಾತು ಶುರುವಾಗಿತ್ತು.

ಚಿಕ್ಕವನಿದ್ದಾಗ ಬೇಸಿಗೆ ರಜೆಯಲ್ಲಿ ಊರಿಗೆ ಹೋದರೆ ನಮ್ಮ ದೊಡ್ಡಪ್ಪ ಅವರ ಮನೆಯಲ್ಲಿದ್ದ ಎತ್ತುಗಳ ಬಗ್ಗೆ ಬಹಳ ಹೇಳುತ್ತಿದ್ದರು. ಈಗ ಇರುವ ಎತ್ತುಗಳು, ಮುಂಚೆ ಇದ್ದ ಎತ್ತುಗಳು, ಊರಿಗೆ ಹೆಮ್ಮೆ ತಂದ ಎತ್ತುಗಳು, ಕಲ್ಲಸಾದರಳ್ಳಿ ಸಂತೆಯಲ್ಲಿ ಬಹಳ ದುಡ್ಡಿಗೆ ಹೋದ ಎತ್ತುಗಳ ಬಗ್ಗೆ ಗಂಟೆಗಟ್ಟಲೇ ಹೇಳುತ್ತಿದ್ದರು. ಸುತ್ತ ಮುತ್ತಲ ಹಳ್ಳಿಗಳಲ್ಲಿ ಯಾರು ಕಟ್ಟಲಾಗದಂತಹ ಎತ್ತುಗಳನ್ನು ನನ್ನ ಕೊಟ್ಟಿಗೆಲಿ ಕಟ್ಟಬೇಕು ಎಂದು ಆಸೆಪಡುತ್ತಿದ್ದರು. ಬೆಳಗ್ಗೆ ಎದ್ದು ಕೊಟ್ಟಿಗೆಯಿಂದ ಆಚೆ ಕಂಬಕ್ಕೆ ಎತ್ತುಗಳನ್ನು ಕಟ್ಟಿದ್ದರೆ ಕೈಲಿ ಬೇವಿನ ಕಡ್ಡಿ ಹಿಡಿದು ಮತ್ತೊಂದು ಕೈಲಿ ಎತ್ತುಗಳ ಬೆನ್ನು ಸವರುವುದು, ಅವುಗಳ ಮೇಲಿರುತ್ತಿದ್ದ ಉಣ್ಣೆಗಳನ್ನು ಕಿತ್ತು, ಕಾಲಿನಲ್ಲಿ ತುಳಿದು ಸತ್ತಿದೆಯ ಎಂದು ಪರೀಕ್ಷಿಸುವುದು ಅವರ ಬೆಳಗಿನ ದಿನಚರಿ. ನಾವು ಹತ್ತಿರದಲ್ಲಿ ಕಂಡರೆ ಹಾಯುವುದಿಲ್ಲ ಬಾ ಎಂದು ಕರೆದು ಎತ್ತುಗಳ ಕತ್ತು ಸವರಲು ಹೇಳುತ್ತಿದ್ದರು. ನಮ್ಮ ದೊಡ್ಡಪ್ಪನ ಮನೆಯಲ್ಲಿ ಅಷ್ಟೇಯಲ್ಲ, ಪ್ರತಿಯೊಬ್ಬ ರೈತರು ನಮ್ಮ ದೊಡ್ಡಪ್ಪ ಮಾಡುತ್ತಿದ್ದುದ್ದನ್ನೇ ಮಾಡುತ್ತಿದ್ದರು. ಮನೆಗೆ ಕನಿಷ್ಠ ಪಕ್ಷ ಒಂದು ಜೊತೆ ಎತ್ತುಗಳಾದರು ಇದ್ದವು. ಪ್ರತಿಯೊಬ್ಬರ ಮನೆಯ ಹೊಸ್ತಲಿನ ಎದುರಿಗೆ ನಡುಮನೆಯಲ್ಲಿ ಮನೆಯ ಯಜಮಾನರು ಬಿಳಿ ಪಂಚೆ ಉಟ್ಟು ಅವರ ಎರಡು ಎತ್ತುಗಳ ಜೊತೆಗಿನ ಪಟ ರಾರಾಜಿಸುತ್ತಿತ್ತು.

ನಮ್ಮ ಮನೆಯಲ್ಲೂ ಎರಡು ಜೊತೆ ಎತ್ತುಗಳಿದ್ದವು. ಒಂದೊಂದು ಜೊತೆಗೂ ಒಬ್ಬ ಆಳು. ಅವರಿಬ್ಬರಲ್ಲೂ ಪೈಪೊಟಿ. ವಯಸ್ಸಾದ ನಿಂಗಣ್ಣ ವಯಸ್ಸಾದ ಕೆಂದೆತ್ತಿನ ಜೋಡಿಯನ್ನು ನೋಡಿ ಕೊಳ್ಳುತ್ತಿದ್ದರು. ಇವು ಬಹಳ ಸೌಮ್ಯ ಸ್ವಭಾವದವು. ಯಾರಿಗೂ ಅವುಗಳ ಕೊಂಬನ್ನು ತೋರಿಸದಂತಹವು. ಹಬ್ಬಗಳ್ಳಲ್ಲಿ ಎತ್ತಿನ ಪೂಜೆ ಮಾಡಲು ಈ ಜೋಡಿಯನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಜೋಡಿಗೆ ಮಾತ್ರ ನಾವೇ ಪೂಜೆಯ ನಂತರ ಎಡೆ ತಿನಿಸುತ್ತಿದ್ದೆವು. ನಿಂಗಣ್ಣ ಬರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸೋಮ, ನಮ್ಮ ಮನೆಯ ಬಿಳಿ ತರುಣ ಎತ್ತುಗಳನ್ನ ನೋಡಿಕೊಳ್ಳುತ್ತಿದ್ದ. ಇವುಗಳ ಬಳಿ ಹೋಗಲೂ ಬಿಡುತ್ತಿರಲಿಲ್ಲ. ಅವು ಅಷ್ಟು ಭಯ ಹುಟ್ಟಿಸುತ್ತಿದ್ದವು. ಅಷ್ಟೇ ಸುಂದರವಾಗಿದ್ದವು. ಪ್ರತಿ ಸೋಮವಾರ ಅವುಗಳ ಮೈ ತೊಳೆದಾಗ ಅವುಗಳನ್ನು ನೋಡುವುದೆ ಒಂದು ಖುಷಿ. ಅವುಗಳ ಮೈಕಟ್ಟು ಸೋಮನ ಮೈಕಟ್ಟಿನಂತೆ ದಷ್ಟ ಪುಷ್ಟವಾಗಿತ್ತು. ಇವುಗಳ  ಪೂಜೆ ಮತ್ತು ಎಡೆ ಸೋಮನ ಜವಬ್ದಾರಿ. ನಮ್ಮನ್ನು ಅವುಗಳ ಬಳಿಯೂ ಬಿಟ್ಟುಕೊಡುತ್ತಿರಲಿಲ್ಲ. ಈ ಜೋಡಿ ಕೇವಲ ಅವನ ಮಾತನ್ನಷ್ಟೆ ಕೇಳುತ್ತವೆ ಎಂದು ಬಹಳ ಹೆಮ್ಮೆ ಪಡುತ್ತಿದ್ದ ಸೋಮ. ಊರಿನವರೆಲ್ಲರ ಮುಂದೆ ಅವನ ಎತ್ತುಗಳ ಬಗ್ಗೆ ಕೊಚ್ಚಿ ಕೊಳ್ಳುತ್ತಿದ್ದ.  ಈ ಎರಡು ಜೋಡಿಗೂ ಹುರುಳಿ ನುಚ್ಚು ಕೊಡುವುದು, ಬಣವೆಯಿಂದ ಮೇವು ತಂದು ಕೊಟ್ಟಿಗೆಯಲ್ಲಿ ಇಡುವುದು, ಮಧ್ಯ ರಾತ್ರಿ ಎದ್ದು ಮೇವಾಕುವುದು,   ಬೆಳಗ್ಗೆ ಮತ್ತು ಸಂಜೆ ಉಳುಮೆ ಮಾಡುವುದು, ಸೋಮವಾರ ಕೆರೆಯಲ್ಲಿ ಅವುಗಳ ಮೈ ತೊಳೆಯುವುದು,  ಬಸವನ ಹಬ್ಬದಲ್ಲಿ ಸಿಂಗಾರ ಮಾಡಿ ಊರ ಹೊರಗಿನ ದೇವಸ್ಥಾನದ ಬಳಿ ಪೂಜೆಗೆ ಕರೆದುಕೊಂಡು ಹೋಗುವುದು  ಮತ್ತು ಪೂಜೆಯ ನಂತರ ಊರ ಬೀದಿಗಳಲ್ಲಿ ಅವುಗಳ ಹಿಂದೆ ಓಡುವುದು. ಎಲ್ಲವೂ ನಿಂಗಣ್ಣ ಮತ್ತು ಸೋಮರ ಕೆಲಸ. ಇಬ್ಬರೂ ಅಷ್ಟೇ ಅಚ್ಚುಕಟ್ಟಾಗಿ, ಪ್ರೀತಿಯಿಂದ ಅವುಗಳನ್ನು ನೋಡಿಕೊಳ್ಳುತ್ತಿದ್ದರು. ಈಗ ನಮ್ಮ ಮನೆಯಲ್ಲಿ ಒಂದು ಜೊತೆ ಎತ್ತುಗಳೂ ಇಲ್ಲ. ಟ್ರಾಕ್ಟ್‌ರ್ ತಂದಾಗ ಒಂದೇ ಜೊತೆ ಸಾಕು ಎಂದು ನಿಂಗಣ್ಣ ನೋಡಿಕೊಳ್ಳುತ್ತಿದ್ದ ಕೆಂದೆತ್ತಿನ ಜೋಡಿ ಮಾರಿದರು. ಸೋಮ ಮದುವೆಯಾಗಿ ಮನೆ ಬಿಟ್ಟ ನಂತರ ಕ್ರಮೇಣ ಬಿಳಿ ಎತ್ತಿನ ಜೋಡಿಯನ್ನು ಮಾರಿದರು. 

ಒಂದು ಕಾಲದಲ್ಲಿ ಜೋಡಿ ಎತ್ತುಗಳು ಆ ಮನೆಯ ಅಂತಸ್ತನ್ನು ಪ್ರತಿಬಿಂಬಿಸುತ್ತಿದ್ದವು. ನನ್ನ ಕೊಟ್ಟಿಗೆಯಲ್ಲಿ ಅಂತ ಎತ್ತುಗಳಿವೆ, ಇಂತ ಎತ್ತುಗಳಿವೆ ಎಂದು ಅವುಗಳ ವರ್ಣನೆಯಲ್ಲಿ ಜನ ಮುಳುಗಿರುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅವುಗಳ ಮೈ ತೊಳೆಯದೆ ಇವರು ಬಚ್ಚಲಿಗೆ ಇಳಿಯುತ್ತಿರಲಿಲ್ಲ. ಅವುಗಳಿಗೆ ಹಬ್ಬದೂಟವಾದ ಮೇಲೆ ಮನೆಯವರಿಗೆ. ಕೆಲವೊಮ್ಮೆ ಮನೆಯ ಪಡಸಾಲೆಗೆ ಎತ್ತುಗಳನ್ನು ಕರೆದುಕೊಂಡು ಬಂದು ಪೂಜೆ ಮಾಡಿದ್ದು ಉಂಟು. ಈಗ ಬೈಕುಗಳು, ಕಾರುಗಳು, ಜೀಪುಗಳು ಮತ್ತು ಟ್ರಾಕ್ಟರ್‌ಗಳು ಜೋಡಿ ಎತ್ತಿನ ಜಾಗದಲ್ಲಿವೆ. ಪೇರ್ ಪ್ರೊಗ್ರಾಮಿಂಗ್ ಮೊದಲು ಶುರುಮಾಡಿದ್ದು ನಮ್ಮ ಮನೆಗಳಲ್ಲಿದ್ದ ಎತ್ತುಗಳು. ನಾವು ಅವುಗಳನ್ನು ಅನುಸರಿಸುತ್ತಿದ್ದೇವೆ ಅಷ್ಟೇ ಎಂದು ಅನಿಸತೊಡಗಿದೆ.