ನಾನು ಚಿಕ್ಕವನಿದ್ದಾಗ ಮಳೆಗಾಲ ಇಷ್ಟು ಕೆಟ್ಟದಾಗಿರಲಿಲ್ಲ. ಚೆನ್ನಾಗಿಯೇ ಮಳೆ ಬರುತ್ತಿತ್ತು. ನಮ್ಮೂರ ಕೆರೆ ಮಳೆಗಾಲದಲ್ಲಿ ಯಾವಾಗಲೂ ತುಂಬಿರುತ್ತಿತ್ತು. ನಮ್ಮೂರ ಕಾರ್ತಿಕವಾದ ಮೇಲೆಯೇ ಮಳೆ ಬಿಡುವು ಕೊಡುತ್ತಿದ್ದುದು. ಊರ ಕಾರ್ತಿಕ, ಜಾತ್ರೆಯ ನಂತರ ನಮ್ಮ ಹಳ್ಳಿಯಲ್ಲಿ ಅದ್ದೂರಿಯಾಗಿ ಆಚರಿಸುವ ಹಬ್ಬ. ಸಾಮನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಮೊದಲನೇ ಅಥವಾ ಎರಡನೇ ಮಂಗಳವಾರ ಇರುತ್ತೆ. ನಾನು ಕಾರ್ತಿಕಕ್ಕೆ ಊರಿಗೆ ಹೋಗಿದ್ದೆ. ಅಜ್ಜಿಗುಂಡಿ ದಾಟಿ ನಾವು ಹೋಗಬೇಕು, ನೀರಿನ ಮಟ್ಟ ಕಡಿಮೆಯಾಗಿತ್ತು. ಆದರೆ ಅಜ್ಜಿಗುಂಡಿ ತುಂಬಿ ನೀರು ಹರಿಯುತ್ತಿತ್ತು. ಅಜ್ಜಿಗುಂಡಿ ಎಂದು ಯಾಕೆ ಹೆಸರು ಬಂತೋ ಗೊತ್ತಿಲ್ಲ, ಅದೊಂದು ಸಣ್ಣ ಕೊಳ್ಳ. ಆಗ ಸೇತುವೆ ಇರಲಿಲ್ಲ. ಈ ಕಡೆ ಅರಕೆರೆ ಕೆರೆ ತುಂಬಿ, ವಡೆರಳ್ಳಿ, ಬೇವಿನಹಳ್ಳಿಯ ಸಣ್ಣ ಕೆರೆಗಳನ್ನೂ ತುಂಬಿಸಿ ಹಳ್ಳ ನಮ್ಮೂರ ಕೆರೆಗೆ ಬಂದು ಸೇರುತ್ತಿತ್ತು. ದೇವನೂರಿನ ಕಡೆಯಿಂದ ಕಬ್ಬಳ್ಳಿ ಹಳ್ಳ ಬೇರೆ. ಮೂರೂ ದಿಕ್ಕುಗಳಲ್ಲೂ ನೀರು ಬಂದಿದ್ದರಿಂದ ಕೆರೆ ತುಂಬಿ, ಕೆರೆ ಕೊಡಿಯಿಂದ ನೀರು ಹರಿಯುತ್ತಿತ್ತು. ನೀರು ಜಾಸ್ತಿ ಖಾಲಿ ಆದಂತೆ ನಮ್ಮೂರಿನ ಕೆರೆಯಲ್ಲಿ ಹಸಿರು ಕಾಣಿಸುತ್ತದೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಗುವಾಗುವ ತನಕ, ಕೆಲವು ಬಾರಿ ಮುಂದಿನ ಮಳೆಗಾಲದ ತನಕವೂ ಈ ಹಸಿರೇ ನಮ್ಮೂರಿನ ಎಮ್ಮೆ ದನಗಳಿಗೆ ಆಹಾರ. ಆಗ ಜನರ ಆಹಾರ ಹೇಗೆ ಸಾತ್ವಿಕವಾಗಿತ್ತೂ ದನಕರುಗಳ ಆಹಾರವೂ ಕೂಡ ಸಾತ್ವಿಕವೇ ಆಗಿತ್ತು. ಮನೆಯಲ್ಲಿ ಹುಲ್ಲು ಹಾಕಿದ್ದು ನೋಡಿದ್ದೇ ಕಡಿಮೆ. ಬಣವೆಯ ಹುಲ್ಲೆಲ್ಲ ಗೆಯ್ಯುತ್ತಿದ್ದ ಎತ್ತುಗಳಿಗೆ ಮಾತ್ರ. ದನಕರುಗಳು ಮತ್ತು ಹೆಮ್ಮೆಗಳು ಹಗಲೆಲ್ಲ ಕೆರೆಯಲ್ಲೂ, ರಸ್ತೆ ಬದಿಯಲ್ಲೋ, ಬೇಲಿ ಸಂಧಿಗಳಲ್ಲೋ ಚೆನ್ನಾಗಿ ತಿಂದು ಬರುತ್ತಿದ್ದವು. ಆಗ ತೋಟಗಳು ಇದ್ದಿದ್ದು ಕಡಿಮೆ, ಹೊಲಗಳೇ ಹೆಚ್ಚು. ಹೊಲಗಳ ತುಂಬಾ ಪೈರು ಇರುತ್ತಿದ್ದ ಕಾರಣದಿಂದಾಗಿ ಕೆರೆಯೇ ನಮ್ಮೂರಿನ ದನ ಮತ್ತು ಎಮ್ಮೆಗಳ ಆಹಾರಕ್ಕೆ ಮೂಲವಾಗಿತ್ತು.
ಮಳೆಗಾಲ ಮುಗಿದು ಮನೆಯ ಹಿಂದಲ ಕಣದಲ್ಲಿ ರಾಗಿ ಹುಲ್ಲು ತುಳಿಸುತ್ತಿರುವಾಗ ಓಡಿ ಬಂದ ನಮ್ಮ ದೊಡ್ಡಮ್ಮ, ಗೌರಿ ಅಜ್ಜಿ ಗುಂಡಿ ದಾಟಿ ನಿರ್ಗುಂಡಿ ಕಡೆಗೆ ಓಡಿ ಹೋದಳಂತೆ ಎಂದಳು. ಅವಳ ಮುಖದ ತುಂಬಾ ಗಾಬರಿ ಮತ್ತು ದುಃಖ ಒಟ್ಟೊಟ್ಟಿಗೆ ಒತ್ತರಿಸುತ್ತಿದ್ದವು. ಗೌರಿ ಹೀಗೆ ಓಡಿ ಹೋದದ್ದು ಇದೆ ಮೊದಲಲ್ಲವಾದುದರಿಂದ ನಮ್ಮ ದೊಡ್ಡಪ್ಪ ಮತ್ತು ಇತರರಿಗೆ ಯಾವುದೇ ಭಾವನೆಗಳು ಕೆರಳಲಿಲ್ಲ. ಅವರು ಅವರ ಕೆಲಸದಲ್ಲಿ ಮಗ್ನರಾದರು. ಇವಳು ಮತ್ತೊಮ್ಮೆ, ಈ ಹುಲ್ಲು ಎಲ್ಲೂ ಹೋಗಲ್ಲ, ಗಾಡಿಯಾರಿಗೆ ಬಿಸಾಕಿ ಹೋಗಿ ಗೌರಿ ಕರ್ಕೊಂಡು ಬನ್ನಿ ಎಂದು ದುಂಬಾಲು ಬಿದ್ದಳು. ಅಲ್ಲೇ ಗಾಡಿ ಮೇಲೆ ಕೂತು ನಮ್ಮ ದೊಡ್ಡಪ್ಪನ ತಲೆಗೆ ಉತ್ತರಿಸಲಾಗದಂತಹ ಪ್ರಶ್ನೆಗಳನ್ನು ಎಸೆಯುತ್ತಾ ನಾನು ಕುಳಿತಿದ್ದೆ. ರಾಗಿ ಕಾಳುಗಳು ಯಾಕೆ ಅಷ್ಟು ಸಣ್ಣವು, ತೆಂಗಿನ ಕಾಯಿ ಯಾಕೆ ದಪ್ಪ, ತೆಂಗಿನ ಮರ ಬೆಳೆಯುತ್ತಾ ಬೆಳೆಯುತ್ತಾ ಆಕಾಶದೊಳಗೆ ಹೋದರೆ ನಾವೇನು ಮಾಡುವುದು, ಹೀಗೆ ಹಲವಾರು ಉಪಿನಕಾಯಿಗೂ ಬರದ ಪ್ರಶ್ನೆಗಳು. ಅವರ ಉತ್ತರ ಕೆಲವೊಮ್ಮೆ ಸುಮ್ಮನಿರುವುದು ಅಥವಾ ಈ ನನ್ಮಗ ಯಾವ ನಕ್ಷತ್ರದಲ್ಲಿ ಹುಟ್ಟಿದ್ನೋ ಎಂದು ಗೊಣಗುತ್ತಿದ್ದರು. ನನ್ನ ಪ್ರಶ್ನೆಗಳ ಜೊತೆ ನನ್ನ ದೊಡ್ದಮ್ಮನದು ಬೇರೆ. ಅವರಿಗೆ ರೋಸಿ ಹೋಗಿತ್ತು. ಬೆಳಗ್ಗೆ ಬರುತ್ತೆ ಬಿಡೆ ಅದು ಅಂದ್ರು ನಮ್ಮ ದೊಡ್ಡಪ್ಪ. ನಮ್ಮ ದೊಡ್ಡಮ್ಮ ಗೌರಿ ಎಂದು ಬಡಿದು ಕೊಳ್ಳುತ್ತಿದ್ದುದು ಕೊಟ್ಟಿಗೆಯಲ್ಲಿ ೩ನೇ ಸ್ಥಾನದಲ್ಲಿ ಗೊಡೆಕೆರೆದುಕೊಂಡು ನಿಲ್ಲುವ ಗೌರಿಯ ಬಗ್ಗೆ. ನನಗೆ ನಮ್ಮ ದೊಡ್ಡಮ್ಮ ಹಸುಗಳಿಗೆ ಮತ್ತು ಹೆಮ್ಮೆಗಳಿಗೆ ಹೆಸರಿಡುತ್ತಾಳೆ ಎಂದು ಗೊತ್ತಿದ್ದರೂ ನನಗೆ ಆ ಕ್ಷಣಕ್ಕೆ ಮರೆತು ಹೋಗಿತ್ತು. ನಮ್ಮ ದೊಡ್ಡಮ್ಮ ಅಳುವುದೊಂದು ಬಾಕಿ ಅಷ್ಟೇ. ಅವಳಿಗೂ ಗೊತ್ತಿತ್ತು ಮತ್ತೆ ಗೌರಿ ಓಡಿ ಬರುತ್ತಾಳೆ ಎನ್ನುವುದು. ರಾತ್ರಿಯಲ್ಲ ಅವಳು ನಿದ್ದೆ ಮಾಡಲಿಲ್ಲ, ಆಚೆ ಮಲಗಿದ್ದ ರುಪಾಲಿಗೆ ಗೌರಿ ಏನಾದ್ರು ದನಿನ ಕೊಟ್ಟಿಗೆ ಹತ್ತಿರ ಬಂದಿದಳ ನೋಡ್ಕೊಂಡು ಬಾ ಅಂತ ಹೇಳಿ ಕಳಿಸಿದಳು.ಅವನು ಇನ್ನೂ ಬಂದಿಲ್ಲ ಬೆಳಗ್ಗೆ ಬರ್ತಾಳೆ ಬುಡವ್ವ ಅಂತ ಹೇಳಿ, ಮತ್ತೆ ಎಬ್ರಿಸ್ಬೇಡಕ್ಕ, ಬೆಳಗ್ಗೆ ಹಳೆ ತೋಟಕ್ಕೆ ತಂತಿ ಬಿಡಾಕೆ ಹೋಗ್ಬೇಕು ಅಂತ ಹೇಳಿ ಮಲ್ಕೊಂಡ. ಅವಳಿಗೆಲ್ಲಿ ನಿದ್ದೆ ಬರುತ್ತೆ. ಮತ್ತೆ ಎದ್ದು ನಮ್ಮ ದೊಡ್ಡಪ್ಪನನ್ನ ಎಬ್ರಿಸಿಕೊಂಡು ಮತ್ತೆ ಹೋಗಿ ನೋಡಿಕೊಂಡು ಬಂದಳು. ಆದರೆ ಗೌರಿ ಬಂದಿರಲಿಲ್ಲ. ಅವಳು ಬಂದಿದ್ದರೆ ಮನೆಯವರಿಗೆಲ್ಲ ಎಚ್ಚರ ಆಗುವಂತೆ ಚೀರಿರುತ್ತಿದ್ದಳು. ದೊಡ್ಡಮ್ಮ ಬೆಳಗಿನ ಜಾವದ ತನಕ ಹಾಗೆ ತುಕಡಿಸಿಕೊಂಡು ಕಳೆದಳು. ಎಂದಿನಂತೆ ಬೆಳಗ್ಗೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಳು. ದುಃಖ ತಡೆಯಲಾಗಲಿಲ್ಲ ಕಣ್ಣಿನ ಹನಿ ಹಾಲು ಕರೆಯುವ ತಮ್ಬಿಗೆಗೂ ಒಂದೆರಡು ಹೋದವು. ಗೌರಿ ಇಲ್ಲದಕ್ಕೆ ಆವತ್ತು ಹಾಲಿನ ಪ್ರಮಾಣ ಕಡಿಮೆಯೇ ಇತ್ತು. ಮನೆಗೆ ಬರುತ್ತಾಳೆ, ಗೌರಿ ಪಕ್ಕದ ಹುಲ್ಲಿನ ಹಿತ್ತಲ ಕಂಬಕ್ಕೆ ಮೈ ಉಜ್ಜುತ್ತ ನಿಂತಿದ್ದಾಳೆ. ದೊಡ್ಡಪ್ಪನ ಹತ್ತಿರ ಮಾತನಾಡುತ್ತಿದ್ದ ಲಕ್ಕಣ್ಣ ತಿರುಗಿ, ಅವ್ವ ನಿನ್ನೆ ರಾತ್ರಿ ನಮ್ಮೂರ ದಾರೀಲಿ ಕಂಡೆ ಗೌರಿನ, ನನಗೆ ಮೊದಲು ಗೊತ್ತಾಗ್ಲಿಲ್ಲ. ಆಮ್ಯಾಕೆ ಲಕ್ಷ್ಮಿ ಅಂದೇ ಅವಳು ಬರಲಿಲ್ಲ, ಗೌರಿ ಅಂದೇ ಬಂದಳು. ಕತ್ತಲಾಗಿದ್ರಿಂದ ನಮ್ಮ ಮನೆ ಮುಂದೇನೆ ಕಟ್ಟಿ ಬೆಳಗ್ಗೆ ಹೊಡಕೊಂಡು ಬಂದೆ ಕಣವ್ವ ಅಂದ. ದೊಡ್ಡಮ್ಮ ಖುಷಿ ಅಟ್ಟದ ಮೇಲೆ ಹೋಗಿತ್ತು. ಊರಿಗೆ ಹೋಗವಾಗ ಕಡಕಟ್ಟಿನ ಅಟ್ಟದಾಗೆ ಎರಡು ಹಲಸಿನ ಹಣ್ಣಿದವೆ ಒಂದ ತಗೊಂಡು ಹೋಗೋ ಲಕ್ಕಣ್ಣ ಎಂದು ಅವನ ಶ್ರಮಕ್ಕೂ ಬೆಲೆ ಕೊಟ್ಟಳು. ಅಲ್ಲೇ ನಿಂತಿದ್ದ ನನಗೆ ಮಾತ್ರ ಒಂದು ಹಲಸಿನ ಹಣ್ಣು ಹೋಗುತ್ತಾಲ್ಲ ಎನ್ನುವ ಬೇಜಾರು ಕಾಡುತ್ತಿತ್ತು.
ಬಹಳಷ್ಟು ಜನರ ಮನೆಯಲ್ಲಿ ಹತ್ತಕ್ಕಿಂತ ಹೆಚ್ಚು ಎಮ್ಮೆಗಳೋ ಅಥವಾ ದೇಸಿ ಹಸುಗಳೋ ಇರುತ್ತಿದ್ದವು. ನಮ್ಮ ಕೊಟ್ಟಿಗೆ ತುಂಬಾ ಹಸುಗಳು ಮತ್ತು ಒಂದೆರಡು ಎಮ್ಮೆಗಳಿದ್ದವು. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಅಂತಹದೇನು ವಿಶೇಷವಿರಲಿಲ್ಲ. ಆದರೆ ನನ್ನ ದೊಡ್ಡಮ್ಮನ ಮನೆಯ ಕೊಟ್ಟಿಗೆಯಲ್ಲೇ ವಿಶೇಷ. ನನ್ನ ಶಾಲೆಯಲ್ಲೂ ನಡೆಯದಂತ ಪ್ರಯೋಗಗಳು ಅವಳ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದವು. ಹಸು ಎಮ್ಮೆಗಳಿಗೆಲ್ಲ ನಾಮಕರಣ ಮಾಡುವುದು ಅವಳ ಪ್ರಯೋಗಗಳಲ್ಲಿ ಒಂದು. ಹೆಣ್ಣು ಕರುಗಾಳದರೆ ಲಕ್ಷ್ಮಿ, ಗೌರಿ, ರಾಜಿ, ಮಲ್ಲಿ ಹೀಗೆ ಅವಳ ಬತ್ತಳಿಕೆಯಲ್ಲಿದ್ದ ಹೆಸರುಗಳು ಹೊರಬೀಳುತ್ತಿದ್ದವು. ಗಂಡು ಕರುಗಳಿಗೆ ರಾಮ, ಲಕ್ಷ್ಮಣ, ಕರಿಯ, ಬಿಳಿಯ, ಕೆಂದಿ, ಜಾಲಿ ಹೀಗೆ ಅನೇಕ ಹೆಸರುಗಳಿದ್ದವು. ಅವಳು ಎಲ್ಲ ಹಸುಗಳನ್ನು ಅಥವಾ ಎಮ್ಮೆಗಳನ್ನು ಕರೆಯುತ್ತಿದ್ದುದೆ ಅವುಗಳ ಹೆಸರಿನಿಂದ. ಬೇರೆಯವರು ಹಾಗೆ ಕರೆಯ ಬೇಕೆಂದೂ ಅಪೇಕ್ಷಿಸುತ್ತಿದ್ದಳು. ನಮ್ಮ ದೊಡ್ಡಮ್ಮ ಅವುಗಳು ನಮ್ಮಂತೆ ಮಾತಾಡುತ್ತವೆ. ಅವುಗಳು ನಮ್ಮಂತೆ ಅವುಗಳಟ್ಟಿಗೆ ಮಾತಾಡಿಕೊಂಡಿರುತ್ತವೆ ನಮಗೆ ಮಾತ್ರ ಅವರ ಭಾಷೆ ತಿಳುಯುವುದಿಲ್ಲ ಅನ್ನುತ್ತಿದ್ದಳು. ಅವುಗಳಿಗೂ ಭಾವನೆಗಳಿವೆ. ನೋಡು ನೀರೊಳಗೆ ಬಿಟ್ಟಾಗ ಅವು ನಮ್ಮ ಹಾಗೆ ಶಾಂತಿಯಿಂದ ಇರುತ್ತವೆ, ಬಿಸಿಲು ಜಾಸ್ತಿಯಾದಂತೆ ಅವುಗಳಿಗೂ ಕಿರಿಕಿರಿಯಾಗುತ್ತದೆ ಎಂದು ಅವಳ ತರ್ಕವನ್ನು ಮುಂದಿಡುತ್ತಿದ್ದಳು. ಕರುಗಳು ನೀರಿನಲ್ಲಿ ಈಜುತ್ತಿದ್ದರೆ, ತನ್ನ ಸ್ವಂತ ಮಕ್ಕಳು ಈಜು ಕಲಿತಾಗ ಖುಷಿ ಪಡುವ ತಾಯಿಯಂತೆ ಸಂಭ್ರಮಿಸುತ್ತಿದ್ದಳು. ಅವಳ ಜೊತೆ ಎಂದೂ ವಾದಮಾಡಿದವನಲ್ಲ, ಅವಳ ತರ್ಕವು ಸಾಮಾನ್ಯವಾಗಿ ಸುತ್ತಲೂ ನೋಡಿ ಕಂಡುಕೊಂಡಿದ್ದೆ ಆಗಿರುತ್ತಿತ್ತು. ಬಹಳಷ್ಟು ಹೆಂಗಸರು ಮತ್ತು ಊರ ಹಿರಿಯರಿಗೂ ಅವಳ ಮೇಲೆ ಇದೆ ಅಭಿಪ್ರಾಯವಿತ್ತು. ನಾನು ಕರುಗಳ ಜೊತೆ ಆಡಿಕೊಂಡು ಇರುತ್ತಿದ್ದೆ. ಸ್ವಲ್ಪ ದೊಡ್ಡ ಕರುಗಳ ಮೇಲೆ ಸವಾರಿ ಮಾಡಲು ಹೋಗಿ ಹಲ್ಲು ಮುರಿದುಕೊಳ್ಳುವುದಷ್ಟೇ ನಾನು ಮಾಡುತ್ತಿದ್ದ ಮಾಹಾನ್ ಕೆಲಸ. ಅವಳು ಎಮ್ಮೆಗಳಿಗಾಗಲಿ ಅಥವಾ ಹಸುಗಳಿಗಾಗಲಿ ಹೊಡೆದಿದ್ದು ನಾನು ನೋಡಿರಲಿಲ್ಲ. ಬೇಸಿಗೆಯಲ್ಲಿ ಬಹುಪಾಲು ಮಜ್ಜಿಗೆ ಹಸು ಎಮ್ಮೆಗಳಿಗೆ ಮೀಸಲು. ಆ ದಿನಗಳಲ್ಲಿ ಡೈರಿಗಳು ತಲೆ ಎತ್ತಿರಲಿಲ್ಲ, ಕರೆದ ಹಾಲೆಲ್ಲ ಮನೆ ಬಳಕೆಗೆ ಅಥವಾ ಅಲ್ಪ ಸ್ವಲ್ಪ ದಾನಕ್ಕೆ. ಮನೆಯಲ್ಲಿ ಮಕ್ಕಳಿಗೆ ಎಷ್ಟು ಪ್ರೀತಿ ತೋರಿಸುತ್ತಿದ್ದಳೊ ಅಷ್ಟೇ ಪ್ರೀತಿ ಅವುಗಳ ಮೇಲೂ ತೋರಿಸುತ್ತಿದ್ದಳು. ಕೆಲವೊಮ್ಮೆ ಇನ್ನೂ ಹೆಚ್ಚು. ಅವುಗಳಿಗೆ ಜ್ವರ ಬಂದರೆ ಅವುಗಳಿಗೂ ಅಮ್ಮನ ಪೂಜಿಸುತ್ತಿದ್ದಳು. ಕಾಯಿಲೆ ವಾಸಿಗಾಗಿ ಹರಕೆ ಹೊರುತ್ತಿದ್ದಳು.
ಇವಳ ನೆನಪು ಬಂದಿದ್ದು ನಮ್ಮೂರಿನಲ್ಲಿ ಇಂದು ನಡೆಯುತ್ತಿರು ಕ್ಷೀರ ಕ್ರಾಂತಿಯನ್ನು ನೋಡಿ. ಡೈರಿ ಉದ್ಯಮ ಸಾಕಷ್ಟು ಬೆಳೆದಿದೆ. ನಮ್ಮೂರು ಒಂದರಲ್ಲೇ ತಿಂಗಳಿಗೆ ಸುಮಾರು ೬ ರಿಂದ ೭ ಲಕ್ಷದಷ್ಟು ವಹಿವಾಟು ನಡೆಯುತ್ತಂತೆ. ಜನರ ಜೀವನ ಸಾಕಷ್ಟು ಸುಧಾರಿಸಿದೆ. ಪ್ರತಿ ಮನೆಗಳಲ್ಲೂ ಒಂದೆರಡು ಸಿಂಧಿ ಅಥವಾ ಹೈಬ್ರಿಡ್ ಹಸುಗಳು ಇವೆ. ಎಮ್ಮೆಗಳು ನೋಡಲು ಸಿಗುವುದೇ ಅಪರೂಪ. ಇನ್ನೂ ದೇಸಿ ಹಾಸುಗಳು ಇಲ್ಲವೇ ಇಲ್ಲ ಎಂದು ಹೇಳಬೇಕು. ಇದು ತಪ್ಪು ಎಂದು ನಾನು ಭಾವಿಸದಿದ್ದರೂ ನಾಟಿ ಹಸು ಮತ್ತು ಎಮ್ಮೆಯ ಹಾಲು, ಮೊಸರು, ಬೆಣ್ಣೆ ರುಚಿ ನೋಡಿದವನಿಗೆ ಈ ಸಿಂಧಿ ಹಸುಗಳ ಉತ್ಪನ್ನಗಳು ರುಚಿ ಕೊಡುವುದಿಲ್ಲ ಎಂದಷ್ಟೇ ನನ್ನ ಅಸಮಧಾನವನ್ನು ಹೊರ ಹಾಕಬಹುದು! ಜನರು ಮಾತನಾಡುವುದು, ಇವನು ೫೦ ಸಾವಿರದ ಹಸು ಸಾಕಿದಾನೆ, ಅವನು ೧೦ ಮೂಟೆ ಭೂಸ ಖರ್ಚು ಮಾಡುತ್ತಾನೆ, ಇವರ ಹಸು ೨೦ ಲೀಟರ್ ಹಾಲು ಕೊಡುತ್ತೆ, ಮತ್ತೊಂದು ೨೫ ಲೀಟರ್ ಹಾಲು ಕೊಡತ್ತೆ ಎಂದು. ಇದಷ್ಟೇ ನಮ್ಮ ಜನರ ಹಸುಗಳ ಜೊತೆಗಿನ ಸಂಬಂಧ. ನಮ್ಮ ದೊಡ್ಡಮ್ಮ ೧೦ ವರ್ಷಗಳ ಹಿಂದೆಯೇ ತೀರಿಕೊಂಡಳು. ಕರುಗಳ ಮೊದಲನೇ ದಿನದ ಚಿನ್ನಾಟ ನೋಡಿ ಅವಳು ಖುಷಿ ಪಟ್ಟ ಹಾಗೆ, ಹಸುಗಳ ಬಾಲ ಕೆರೆಯುವಾಗ ಅವುಗಳಿಗೆ ಚೆಕ್ಕಳಿ ಗುಳಿಗೆ ಕೊಟ್ಟು ಕುಣಿದ ಹಾಗೆ, ಅವುಗಳ ಒರಲಾಟ ಕಿವಿಗೆ ಬಿದ್ದ ಕೂಡಲೇ ಓದಿದ ಹಾಗೆ ಬದುಕುತ್ತಿರುವವರು ಬಹಳ ವಿರಳ. ಸಿಗುವುದೇ ಇಲ್ಲ ಎಂದು ಹೇಳಬಹುದು. ಹಬ್ಬಕ್ಕೆ ಮಾಡಿದ ಒಬ್ಬಟ್ಟನ್ನು ಹಸುಗಳಿಗೂ ತಿನಿಸಿದ ನಂತರವೇ ಮನುಷ್ಯರಿಗೆ.