ಬದುಕಿನ ಸೂಕ್ಷ್ಮಗಳನ್ನು ಮತ್ತು ಸಣ್ಣ ಸಂತೋಷಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಜೀವನ ವ್ಯರ್ಥ. ಬಹಳಷ್ಟು ಪುಸ್ತಕಗಳನ್ನು ಓದಿ ಮತ್ತು ಹಲವಾರು ಜನರ ಜೊತೆ ಬೆರೆತು ಕಲಿತ ಸತ್ಯ! ಇಂತಹ ಸಣ್ಣ ಸಣ್ಣ ತುಣುಕುಗಳೇ ಚಿತ್ರವಾದಾಗ? ಹೌದು ಲೂಸಿಯದ ಬಗ್ಗೆ ಬರೆಯುತ್ತಿದ್ದೇನೆ. ಹಲವಾರು ಜನ ಹಲವು ವಿಚಾರಗಳಿಗಾಗಿ ಈ ಚಿತ್ರವನ್ನು ಇಷ್ಟ ಪಟ್ಟಿದ್ದಾರೆ. ನಾನು ಇಷ್ಟಪಟ್ಟಿದ್ದು ಮೇಲಿನ ಕಾರಣಕ್ಕೆ :) ನಾನು ಚಿತ್ರಗಳನ್ನು ನೋಡುವುದೇ ಕಡಿಮೆ, ಅಂತದ್ರಲ್ಲಿ ವಿಮರ್ಶೆ ಎಲ್ಲ ಮಾಡುವುದಕ್ಕೆ ಹೋಗುವುದಿಲ್ಲ. ನಾನು ಅಷ್ಟು ಬುದ್ದಿವಂತನಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಮನುಷ್ಯ ಇರುವುದೆಲ್ಲವ ಬಿಟ್ಟು ಇರದುದೆರೆಡೆಗೆ ತುಳಿಯುವ ಪ್ರಾಣಿ, ಕನಸು ಕಾಣುತ್ತಾ ಬದುಕುವ ಜೀವ. ಇದೆ ಚಿತ್ರದ ಮೂಲ. ನಾಯಕನ ಕನಸೇ ಚಿತ್ರವನ್ನು ಓಡಿಸುತ್ತೆ. ನೋಡಿದವರಿಗೆ ಇದೊಂದು ಕಡಿಮೆ ಬಜೆಟ್ ಪಿಕ್ಚರ್ ಎಂದು ಅನಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ಚಿತ್ರದ ಎಡಿಟಿಂಗ್(editing) ಮಾಡಲಾಗಿದೆ. ಚಿತ್ರದಲ್ಲಿ ಎಲ್ಲಿಯೂ ಒಂದು ರೀತಿಯ ತಪ್ಪು ಸಂದೇಶ ಕೊಡುವಂಥಹ ಸಿನ್ಗಳಿಲ್ಲ. ಇದು ನಿರ್ದೇಶಕ ಪವನ್ರ ಕನಸಿನ ಕೂಸು. ಬದುಕಿನ ಆಳಗಳನ್ನು ತೋರಿಸುವುದರ ಜೊತೆಗೆ ಜನಕ್ಕೆ ಮನರಂಜನೆಯನ್ನು ಉಣಬಡಿಸುತ್ತಾರೆ. ಚಿತ್ರಕ್ಕೆ ಕಥೆಯೇ ಮೂಲಾಧಾರ. ಯಾವುದೇ ಸೂಪರ್ ಹೀರೋಗಳಿಲ್ಲದೆ ಚಿತ್ರ ಇನ್ನು ಓಡುತ್ತಿದೆ ಅಂದರೆ ನೀವೇ ಯೋಚಿಸಿ. ಕಥೆಯನ್ನು ಜನಕ್ಕೆ ತೋರಿಸುವುದು ಅಷ್ಟೇ ಮುಖ್ಯ ಅದನ್ನು ಪವನ್ ಚೆನ್ನಾಗಿ ಮಾಡಿದ್ದಾರೆ. ಇಲ್ಲಿ ಪವನ್ ಗೆಲ್ಲುತ್ತಾರೆ.
ನಾಯಕ, ಸತೀಶ್ ನೀನಾಸಂ. ಇದು ಒಂಥರಾ ದ್ವಿಪಾತ್ರ ಅಭಿನಯ, ಇಲ್ಲೇ ನೋಡಿ ಚಾಲೆಂಜ್. ಒಂದು ಪಾತ್ರವನ್ನ ನೋಡಿದಾಗ ಇವನನ್ನು ಬಿಟ್ಟು ಬೇರೆಯವರ ಕೈಯಲ್ಲಿ ಆಗ್ತಿರಲಿಲ್ಲ ಎಂದು ಅನಿಸಿದರೆ ಅವನೇ ಸರಿಯಾದ ಕಲಾವಿದ. ಸತೀಶ, ಇಲ್ಲಿ ಗೆಲ್ಲುತ್ತಾನೆ. ಅವನ ಮುಗ್ದತೆ ಜನರ ಮನಸನ್ನು ಗೆಲ್ಲುತ್ತೆ. ಅವನ ಮಾತು, ಜನರಲ್ಲಿ ನಮ್ಮವನೇ ಈ ಹೈದ ಎಂದು ಅನಿಸುತ್ತೆ. ಇಕ್ಕಿ ಅಲ್ಲ ನಿಕ್ಕಿ, ನನಗೆ ಅವನ ಕನಸಿನ ಪಾತ್ರದಲ್ಲೇ ಇಷ್ಟವಾಗಿದ್ದು. ಅವನ ನಿಜ ಜೀವನದ ಪಾತ್ರ ಅವನಿಗೆ ಸಲಿಸಾಗಿರಬಹುದು. ಆದರೆ ಸೂಪರ್ ಸ್ಟಾರ್ ಆಗಿ ಅವನ ಅಭಿನಯ, ಗಾಂಭೀರ್ಯ ಮೆಚ್ಚುವಂತದ್ದು.
ನಾಯಕಿ, ಶ್ರುತಿ. ನಮ್ಮ ಪಕ್ಕದ ಮನೆಯ ಹುಡುಗಿಯಂತೆ ಅಭಿನಯಿಸಿದ್ದಾಳೆ. ಇವಳ ಪಾತ್ರದಲ್ಲಿ ಸಾಕಷ್ಟು ನೈಜತೆ ಎದ್ದು ಕಾಣುತ್ತೆ. ಅಭಿನಯದಲ್ಲಿ ಇವಳು ಅಷ್ಟೇ ಪಾತ್ರಕ್ಕೆ ಹೊಂದಿಕೆಯಾಗುವಂತೆ ಅಭಿನಯಿಸಿದ್ದಾಳೆ. ಮತ್ತೊಂದು ಮುಖ್ಯ ಪೋಷಕ ಪಾತ್ರ, ಅಚ್ಯುತ ಕುಮಾರ್. ಕಾಯಕವೇ ಕೈಲಾಸ ಈ ಮನುಷ್ಯನಲ್ಲಿ ನೋಡಬಹುದು. ಬಹಳ ಅನುಭವದ ನಟರು, ನಾನು ಯಾವ ದೊಣ್ಣೆ ನಾಯಕ ಅವರ ಬಗ್ಗೆ ಬರೆಯೋಕೆ :) ಪುರ್ರ್ ಎಂದು ಬಾಯಿಗೆ ಏನೋ ಎಳೆದುಕೊಳ್ಳುವ ಪೋಲಿಸ್ ಆಫೀಸರ್ ಕೂಡ ನನಗೆ ಇಷ್ಟವಾದ ಪಾತ್ರ.
ಸಂಗೀತದ ಬಗ್ಗೆ ನನಗೆ ಅಷ್ಟು ಜ್ಞಾನ ಇಲ್ಲ. ಆದರೆ ಹಾಡುಗಳ ಸಾಹಿತ್ಯ ಮೊದಲೇ ಇಷ್ಟವಾಗಿದ್ದವು. ಪೂರ್ಣಚಂದ್ರ ಯಾವುದಕ್ಕೂ ಮತ್ತು ಯಾರಿಗೂ;) ಕೊರತೆ ಬರದಂತೆ ಬಹಳಷ್ಟು ರೀತಿಯ ಹಾಡುಗಳನ್ನು ಹಾಕಿದ್ದಾರೆ. ಕ್ಯಾಮರ ಮ್ಯಾನ್ ಕೆಲಸವೂ ಅಷ್ಟೇ ಅದ್ಭುತವಾಗಿದೆ. ಒಂದು ಸಣ್ಣ ಕ್ಯಾಮೆರಾದಲ್ಲಿ ಸರ್ಕಸ್ ಮಾಡಿದ್ದು ಎಂದು ಓದಿದ್ದೆ.
PS: ಒಂದೆರಡು ಬಾರಿ ಕಣ್ಣುಗಳು ಒದ್ದೆಯಾದರೂ ಆಗಬಹುದು!
ಪವನನ ಪ್ರಯೋಗ
ಇನ್ನು ಚಿತ್ರ ಆನ್-ಲೈನ್ ನಲ್ಲಿ ಬಿಡುಗಡೆಯಾಗಿಲ್ಲ, ಆದರೆ ಇಲ್ಲಿ ವೀಕ್ಷಿಸಬಹುದು.