ಮೊನ್ನೆ ಅಸ್ಸಾಮಿನಲ್ಲಿ ನಡೆದ ಗಲಭೆಗಳ ಬಗ್ಗೆ ಮಾತನಾಡುತ್ತ ನನ್ನೊಬ್ಬ ಸ್ನೇಹಿತ ಪವನ್ ಹೇಳ್ತಿದ್ದ, ಮಗ..! ನಾವು ದೇಶದ ಬಗ್ಗೆ ಯೋಚನೆ ಮಾಡುತ್ತಾ ತಲೆ ಕೆಡಿಸಿ ಕೊಂಡರೆ ನಾನು ದೇಶ ಬಿಟ್ಟು ಯಾವದಾದ್ರು ಬೇರೆ ದೇಶಕ್ಕೆ ಹೋಗಿ ಇದ್ಬಿಡ್ಬೇಕು ಅನಿಸುತ್ತೆ ಅಂದ. ಒಂದು ದೇಶ ಬೆಳೆಯುವುದು ಹೇಗೆ? ಅದರ ಸಂಪತ್ತು ಯಾವುದು? ಇವೆಲ್ಲಾ ಯಾವಾಗಲೂ ಕ್ಲಿಷ್ಟ ಪ್ರಶ್ನೆಗಳೇ! ಅದೂ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಅದರ ಬಗ್ಗೆ ಯೋಚಿಸುವುದೇ ಬೇಡ ಎಂದು ಅನಿಸುತ್ತದೆ. ಹಾಗೇ ಇನ್ನೊಬ್ಬ ಸ್ನೇಹಿತ, ನಟ ಧನಂಜಯ ಹೇಳ್ತಿದ್ದ ಬೇರೆಯವರಿಗೆ ತೊಂದರೆ ಮಾಡದೆ, ಆದರೆ ಸಹಾಯ ಮಾಡಿ ಆಗದಿದ್ದರೆ ತೊಂದರೆ ಮಾಡದೆ ಬದುಕಿದರೆ ಸಾಕು ಎಂದ. ನಾನು ಯಾಕೆ ಈ ಪುರಾಣ ಉದ್ತಿದೀನಿ ಅನ್ಕೊತಿದಿರ?
ಈ ತರದ ಎಷ್ಟೋ ಘಟನೆಗಳು ನಮ್ಮ ದೇಶದಲ್ಲಿ ನಡೆದಿವೆ ಮತ್ತು ನಡೆಯುತ್ತಲಿವೆ. ಮೊನ್ನೆ ನಾರಾಯಣ ಹೃದಯಾಲಯದ ಡಾಕ್ಟ್ರು ದೇವಿ ಶೆಟ್ಟಿ ಮಾತನಾಡುತ್ತಾ ಯಾವುದಾದರೂ ಒಂದು ದೇಶವನ್ನೂ ದೇವರು ನಡೆಸುತ್ತಿದ್ದರೆ ಅದು ಭಾರತ ಮಾತ್ರ ಅಂದ್ರು! ಕೂತು ಯೋಚಿಸಿದರೆ ಒಂದು ಸಣ್ಣ ನಗು ಜೊತೆಯಲ್ಲೇ ಸತ್ಯ ಅನ್ನೋ "ನಂಬಿಕೆ". ಆದೊಂದೇ ಆಶಾ ಭಾವನೆ! ಆದರೆ ಒಂದು ಸಂತೋಷದ ಸಂಗತಿ ಅಂದರೆ ಈ ಎಲ್ಲಾ ಸಮಸ್ಯೆಗಳ ಜೊತೆಯಲ್ಲೇ ಬಹಳಷ್ಟು ಜನ ದೇಶದಲ್ಲಿಯ ಸಮಸ್ಯೆಗಳ ಬಗ್ಗೆ ಅವುಗಳ ನಿವಾರಣೆಗೆ ಅವರದೇ ಆದ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ಶನಿವಾರ ಶಾಲೆಗಳಿಗೆ ಹೋಗಿ ಪಾಠ ಮಾಡುವ ಸ್ನೇಹಿತರು, ವರ್ಷಕೊಮ್ಮೆ ಗ್ರಾಮೀಣ ಶಾಲೆಗಳಿಗೆ ಹೋಗಿ ಪುಸ್ತಕ ಮತ್ತು ಕಲಿಯಲು ಬೇಕಾದ ವಸ್ತುಗಳನ್ನು ಕೊಡಿಸಿ ಬರುವ ಸ್ನೇಹಿತರು, ಒಬ್ಬ ವಾಯುಸೇನೆಯ ಸೈನಿಕ ಸ್ನೇಹಿತನ ನೆನಪಿನಲ್ಲಿ ಒಂದು ಸಂಸ್ಥೆ(Sreejith Maloor trust) ತೆರೆದು ಗ್ರಾಮೀಣ ವಿದ್ಯಾರ್ಥಿಗಳ ಅಭಿವೃದ್ದಿಗೆ ದುಡಿಯುತ್ತಿರುವ ಸ್ನೇಹಿತರೂ ಇದ್ದಾರೆ.
ಮತ್ತೊಂದು ಸ್ನೇಹಿತರ ತಂಡ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ನಾನು ಹೇಳುವುದೇನು ಬೇಡ ಬಿಡಿ, ಅದು ಗೊತ್ತಿರುವ ವಿಷಯ. ಶಿಕ್ಷಣ ಮತ್ತು ನಾಗರೀಕತೆ ಉತ್ತಮ ಸಮಾಜವನ್ನು ನಿರ್ಮಿಸುವುದರ ಬದಲು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿವೆ. ಉತ್ತಮ ದೇಶವನ್ನು ಕಟ್ಟಬೇಕಾದರೆ ಒಂದೊಳ್ಳೆ ಸಮಾಜವನ್ನು ಕಟ್ಟಬೇಕು. ಉತ್ತಮ ಸಮಾಜಕ್ಕೆ ಉತ್ತಮ ನಾಗರೀಕರೇ ಜೀವಾಧಾರ. ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ತಡೆಯುವುದು ಹೇಗೆ? ಯಾವುದರಿಂದ ಇದನ್ನು ತಡೆಯುವುದು? ದೇಶದ ಕಠಿಣ ನಿಯಮಗಳು ಇಂತಹ ಸಮಸ್ಯೆಗಳನ್ನೂ ತಡೆಯಲು ಸಾಧ್ಯವೇ? ಸ್ವಲ್ಪ ಮಟ್ಟಿಗೆ ಭಯ ಹುಟ್ಟಿಸಬಹುದು ಅಷ್ಟೇ, ಸಂಪೂರ್ಣ ತಡೆಯಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು, ಇದೊಂದೇ ಇದಕ್ಕೆ ಸರಿಯಾದ ಪರಿಹಾರ. ಗಂಡಸರಲ್ಲಿ ಹೆಂಗಸರ ಬಗ್ಗೆ ಗೌರವ ಮೂಡಬೇಕು. ಇದು ಯಾರಿಂದ ಸಾಧ್ಯ? ಹೆಣ್ಣು ಮತ್ತು ಗಂಡು ಇಬ್ಬರೂ ಮಾಡಬೇಕಾದ ಕೆಲಸ ಇದು. ನಾನು ಹೇಳಿದಂತೆ ಈ ಸ್ನೇಹಿತರ ತಂಡ ಜನರಲ್ಲಿ ಜಾಗೃತಿ ಮೂಡಿಸಲು ಕಿರುಚಿತ್ರ ಮತ್ತು ಪೆನ್ನಿನ ಮೊರೆ ಹೋಗಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ- knowyourstar. ಒಂದೊಳ್ಳೆ ಸ್ವಾರ್ಥವನ್ನ ಬೆಳಿಸಿಕೊಳ್ಳೋಣ, ಅದೇನಪ್ಪ ಒಳ್ಳೆ ಸ್ವಾರ್ಥ ಅಂತೀರ, ನಮ್ಮ ಸುತ್ತಲೂ ಒಳ್ಳೆಯ ಸಮಾಜವನ್ನು ಬಯಸುವುದು ಸ್ವಾರ್ಥವಲ್ಲವ್ವೆ?
ನಾನು ಮೊದಲು ಎರಡು ಪ್ರಶ್ನೆಗಳನ್ನು ಎತ್ತಿದೆ... ಒಂದು ದೇಶ ಬೆಳೆಯುವುದು ಹೇಗೆ? ಅದರ ಉತ್ತಮ ಜನರಿಂದ! ಇನ್ನೊಂದು ಪ್ರಶ್ನೆ.. ಅದರ(ದೇಶದ) ಸಂಪತ್ತು ಯಾವುದು? ಅದರ ಉತ್ತಮ ಜನ..! ಹೌದಲ್ವೆ ಸ್ನೇಹಿತರೆ?
ಕೇಳಿಸಿಕೊಳ್ಳಲು ಇಲ್ಲಿ ಒತ್ತಿ
ಕೆಲವು ಸ್ನೇಹಿತರು ತಯಾರಿಸಿದ ಕಿರು ಚಿತ್ರ ಇಲ್ಲಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಅವರ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ - RAPE: Rise Against Punishable Eccentricity