ಮೊನ್ನೆ ಮೊನ್ನೆ ನಮ್ಮ ಆಫೀಸಿನಲ್ಲಿ ಕಾಫಿ ಹೀರುತ್ತಾ, ಬಿಟ್ಟಿ ಬ್ರಿಟಾನಿಯ ಬಿಸ್ಕತ್ತು ತಿನ್ನುತ್ತಾ ಹರಟುತ್ತಿರುವಾಗ ಒಂದು ವಿಷಯ ಬಂತು. ಅದು ಬಹಳ ಚಿಲ್ಲರೆ ವಿಷಯವೇ, ಆದರೂ ಅದನ್ನ ಸೂಕ್ಷ್ಮ ರೀತಿಯಲ್ಲಿ ನೋಡಿದರೆ ಇಲ್ಲೊಂದು ದೊಡ್ಡ ಕಂದಕ ಬೆಳೆಯುತ್ತಿದೆ ಎಂದು ಅನಿಸಿತು! ವಿಷಯವೇನೆಂದರೆ ನಮ್ಮ ಆಫೀಸಿನ ಬಸ್ಸುಗಳಲ್ಲಿ ಜನ ಮಾತನಾಡುವುದಿಲ್ಲ ಅನ್ನುವುದು! ನಿಮಗೆ ಅನಿಸಬಹುದು ಮತ್ತೆ ಏನು ಮಾಡುವರು ಇವರು ಅಂತ! ಕೆಲವರು ಪಕ್ಕದವರ ಬಿಟ್ಟು ದೂರದಲ್ಲಿರುವವರ ಜೊತೆ ಫೋನಿನಲ್ಲೇ ಮುಳುಗುವ ಮಂದಿ ಅಥವಾ ಸ್ವಲ್ಪ ಸಮಯ ಸಿಕ್ಕಿತಲ್ಲ ಎಂದು ಗೊರಕೆ ಹಾಕುವವರು ಸಿಗುವರು(ಕೆಲವೊಮ್ಮೆ ನಾನು ಗೊರಕೆ ಹಾಕಿದ್ದೇನೆ, ಪಕ್ಕದವರು ಹೇಳಿದ್ದು). ಹೀಗೆ ಕಾಫಿ ಕಾರ್ನರ್ ಹರಟೆ ಮುಂದುವರೆದು ನಮ್ಮ ಜೀವನ ಅದೆಷ್ಟು ಯಾಂತ್ರಿಕವಾಗುತ್ತಿದೆ ಎನ್ನುವ ಕಹಿ ಸತ್ಯ ನಮ್ಮ ಆ ದಿನದ ಟಾಪಿಕ್!
ಆದರೂ ನಮ್ಮೊಳಗೆ ಕೆಲವಾರು ಜನ ನಮ್ಮ ಯಾಂತ್ರಿಕೃತ ಬದುಕನ್ನ ಆ ಕ್ಷಣಕ್ಕೆ ನಿಲ್ಲಿಸಿ, ಒಂದು ಸಣ್ಣ ಸುಂದರ ಟಚ್ ಕೊಡುವ ಹಾಗು ಮನಸಿಗೆ ಈ ದಿನಗಳಲ್ಲೂ ಆ ಬಾಂಧವ್ಯ ಬೆಸೆಯುವ ಅನಾಮಿಕ ಸಾಮಾನ್ಯ ಜನರೂ ಸಿಗುತ್ತಾರೆ. ಆ ಸಾಮಾನ್ಯ, ಮನಸಿಗೆ ಒಳ್ಳೆಯ ಹಿತಾನುಭವ ನೀಡುವ ವ್ಯಕ್ತಿಗಳ ಬಗ್ಗೆ ಸ್ವಲ್ಪ ಬರೆಯೋಣ ಅಂದುಕೊಂಡು ಈ ಸರಣಿ ಶುರು ಮಾಡಿದ್ದೇನೆ.
ಅದಕ್ಕಾಗಿ ಮೊದಲಿಗೆ ಬರೆಯಬೇಕು ಅನಿಸಿದ ಮೊದಲ ವ್ಯಕ್ತಿ ವೀಳ್ಯದೆಲೆ ಅಜ್ಜಿ. ನಿಮಗೆ ಅನಿಸುತ್ತಿರಬಹುದು ಇದು ಯಾರು ಅಂದು. ನಾನು ಪ್ರತಿ ಭಾನುವಾರ ಯಶವಂತಪುರ ಸಂತೆಗೆ ಹೋದಾಗ ವೀಳ್ಯದೆಲೆಗಾಗಿ ಅಶ್ರಯಿಸಿರುವ ಒಂದು ಅಜ್ಜಿ. ಈ ದಿನಗಳಲ್ಲಿ ಅದೆಂಥಹ ಬಿಸಿಲು. ಅಲ್ಲೊಂದು ಕಪ್ಪು ಛತ್ರಿ ಹಿಡಿದು ಎಲೆ-ಅಡಿಕೆ ಜಗೆಯುತ್ತಾ ಕೂತಿರುತ್ತಾಳೆ ಆ ಅಜ್ಜಿ. ದಪ್ಪ ಶರೀರ, ಬಿಸಿಲಿಗೆ ಬೆಂದು ಕಪ್ಪಾದ ಮುಖ. ಆದರೆ, ತಲೆಯ ತಿನ್ನುವ ಗ್ರಾಹಕರ ನೋಡಿಯು ಶಾಂತ ಚಿತ್ತದಿಂದ ವೀಳ್ಯದೆಲೆ ಮಾರುವ ಅಜ್ಜಿ. ಇವಳಿಗೆ ಸರಿ ಸುಮಾರು ೬೦ ದಾಟಿರಬಹುದು. ನನ್ನ ಪರಿಚಯ ಆಕೆಗೆ ಆಗಿದ್ದು ವೀಳ್ಯದೆಲೆ ಬುಟ್ಟಿ ಇಟ್ಟುಕೊಂಡಿದ್ದ ಅಜ್ಜಿಯ ಹೋಗಿ ಕರಿಬೇವನ್ನು ಕೇಳಿದಾಗ. ನಾನು ಕೇಳಲೂ ಒಂದು ಕಾರಣವಿತ್ತು. ಆ ವೀಳ್ಯದೆಲೆ ಬುಟ್ಟಿಯ ಜೊತೆ ಒಂದು ಕಟ್ಟು ಕರಿಬೇವನ್ನ ಅಜ್ಜಿ ಇಟ್ಟುಕೊಂಡಿದ್ದಳು. ಅವಳಿಗಾಗಿ ಒಬ್ಬ ತಂದುಕೊಟ್ಟು ಹೋಗಿದ್ದ. ನಾನು ಪಟ್ಟನೆ ಹೋಗಿ ಕೇಳಿದ ತಕ್ಷಣ ಅಜ್ಜಿ ಒಂದು ನಿಮಿಷವನ್ನೂ ಯೋಚಿಸದೆ ಕೊಟ್ಟುಬಿಟ್ಟಳು. ನಾನು ದುಡ್ಡು ಎಷ್ಟು ಎಂದು ಕೇಳಿದೆ, ಅದಕ್ಕೆ ಅವಳ ಉತ್ತರ ನನಗೆ ಅದನ್ನ ಪುಕ್ಕಟೆಯಾಗಿ ಮತ್ತೊಬ್ಬ ವ್ಯಾಪಾರಿ ತಂದು ಕೊಟ್ಟ ನೀನು ದುಡ್ಡು ಕೊಡುವುದು ಬೇಡ ಅಂದು ಬಿಟ್ಟಳು. ನನಗೆ ಆಶ್ಚರ್ಯ ಮತ್ತು ಅದನ್ನು ತೆಗೆದು ಕೊಂಡು ಬರಲು ಭಯ. ನಾನು ಪುಕ್ಕಟೆಯಾಗಿ ಬೇಡವೇ ಬೇಡ ಎಂದರೂ ಅಜ್ಜಿ ಸುಮ್ಮನೆ ತೆಗೆದುಕೊಂಡು ಹೋಗು ಎಂದಳು. ಅದನ್ನ ತಗೊಂಡು ಮನೆಗೆ ಬರುವ ತನಕವೂ ಅದೇ ಯೋಚನೆ. ನಮ್ಮಲ್ಲಿಯೂ ಎಂತೆಂಥ ಜನರಿದ್ದಾರೆ.
ಅಂದಿನಿಂದ ಪ್ರತಿ ಭಾನುವಾರ ಅಲ್ಲಿಗೆ ಹೋದಾಗಲೆಲ್ಲ ಮತ್ತಷ್ಟು ಸಲಿಗೆ, ಸ್ವಲ್ಪ ಮಾತು ಮತ್ತು ಒಂದು ಸಣ್ಣ ನಗು. ಅವಳಿಗೂ ಸ್ವಲ್ಪ ಖುಷಿ ನನಗೆ ಸ್ವಲ್ಪ ಜಾಸ್ತಿಯೇ ಖುಷಿ. ಮಾನವ ಸಂಬಂಧಗಳಿಗೆಕೆ ಬೇಲಿ, ಎಲ್ಲಿ ಬೇಕಾದರೂ ಒಂದು ಸುಂದರ ಕ್ಷಣ ಸೃಷ್ಟಿ ಆಗಬಹುದು. ಸುತ್ತಲಿರುವವರನ್ನ ಸ್ವಲ್ಪ ಪ್ರೀತಿಯಿಂದ ಮಾತನಾಡಿಸೋಣ. ಇತ್ತೀಚಿನ ದಿನಗಳಲ್ಲಿ ತರಕಾರಿ ತರುವುದರಲ್ಲೂ ಖುಷಿ ಅಡಗಿದೆ ಎಂದು ಅನಿಸುತ್ತಿದೆ!
ದೇವರಿಗೆ ಒಂದಷ್ಟು ವೀಳ್ಯದೆಲೆ ಕೊಡಜ್ಜಿ ಅಂದರೆ, ಒಂದಷ್ಟು ಕೊಟ್ಟು ಹತ್ತು ರುಪಾಯಿ ಕೊಟ್ಟರೆ ಎರಡೇ ರುಪಾಯಿ ತಗೊಂಡು ಉಳಿದ ಹಣ ವಾಪಸು ನೀಡುವ ಅಜ್ಜಿ ಎಲ್ಲಿ ನಮ್ಮ ಮನೆಯ ಹತ್ತಿರದ ಶೆಟ್ಟರು ಮೂರು ರೂಪಾಯಿಗೆ ಮೂರು ಎಲೆ ಕೊಟ್ಟು ದೇವರಿಗೆ ಕೊಡಬಹುದಾದ ಎಲೆ ಇಲ್ಲ ಎನ್ನುತ್ತಲೇ ಜಾಸ್ತಿ ದುಡ್ಡಿಗೆ ಮಾರುವವರು ಎಲ್ಲಿ!
ಮುಂದಿನ ವಾರ ಹೋದಾಗ ನನ್ನ ಮೊಬೈಲ್ ತಗೊಂಡು ಹೋದರೆ ಒಂದು ಫೋಟೋ ಕ್ಲಿಕ್ಕಿಸಿ ತಂದು ಲಗತ್ತಿಸುವೆ ಇಲ್ಲಿ!