ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವವನ್ನು ಬಹಳ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚಿಗೆ ಅಂದರೆ ೨೦೧೨ ಮಾರ್ಚ್ ೧೦ರಂದು ಹಿರಿಯ ವಿದ್ಯಾರ್ಥಿ ಬಳಗ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ಸಹಯೋಗದಲ್ಲಿ ಆಚರಿಸಿತು. ಬೆಂಗಳೂರಿನ ವಾಹನ ದಟ್ಟನೆ ಈ ಕಾರ್ಯಕ್ರಮಕ್ಕೂ ತನ್ನ ಇರುವಿಕೆಯನ್ನು ತೋರಿಸಿತ್ತು, ಸ್ವಲ್ಪ ತಡವಾಗಿಯೇ ಕಾರ್ಯಕ್ರಮ ಶುರುವಾಗಲು ಕಾರಣವಾಯಿತು! ಕಾರ್ಯಕ್ರಮಕ್ಕೆ ಮುನ್ನವೇ ಬಡಿಸಿದ ಕೇಸರಿಬಾತು ಉಪ್ಪಿಟ್ಟು ಬಾಯಿಗೆ ರುಚಿಯನ್ನು, ಬಡಿಸುತಿದ್ದ ನಮ್ಮ ನಿಲಯದ ಭಟ್ಟರ ನಗು ಮನಸಿಗೆ ಖುಷಿಯನ್ನು ನೀಡಿತು. ಮೊದಲಿಗೆ ವಚನ ಗಾಯನ ಕಾರ್ಯಕ್ರಮ ನಿಗದಿಯಾಗಿತ್ತು, ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಶಿವಾನಂದ ಹೆರೂರ ತಮ್ಮ ವಚನಗಳ ಮೂಲಕ ನೆರೆದಿದ್ದ ಹಿರಿಯ ಮತ್ತು ನಿಲಯದ ವಿದ್ಯಾರ್ಥಿಗಳ ಗಮನ ಸೆಳೆದರು, ಸ್ವಲ್ಪ ನಿದ್ದೆಯನ್ನೂ ಬರಿಸಿದರು ಎಂದರೂ ತಪ್ಪಿಲ್ಲ, ಎಲ್ಲರೂ ಅಷ್ಟು ಮಗ್ನ ಭಾವದಿಂದ ವಚನಗಾಯನವನ್ನ ಆಲಿಸಿದರು. ಮುಖ್ಯ ಅತಿಥಿಗಳಾಗಿ ಐ.ಎ.ಎಸ್. ಅಧಿಕಾರಿ ಡಾ|| ಸಿ ಸೋಮಶೇಖರ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಯಲಿಂಗಪ್ಪನವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ರೇವಣ್ಣಸಿದ್ದಯ್ಯಐ.ಪಿ.ಎಸ್ ಮತ್ತು ಹಿರಿಯ ಧರ್ಮದರ್ಶಿಗಳು ಹಾಗು ಹಳೆಯ ವಿದ್ಯಾರ್ಥಿಗಳೂ ಆದ ಶ್ರೀ ರಾಜೇಶ್ವರ ಶಾಸ್ತ್ರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ಶ್ರೀ ಚಿಕ್ಕಕರಿಯಪ್ಪ ಮತ್ತು ಮತ್ತೊಬ್ಬ ಹಿರಿಯ ವಿದ್ಯಾರ್ಥಿ ಹಾಗು ಖ್ಯಾತ ನಿರೂಪಕ ಶ್ರೀ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ ತಮ್ಮ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿನ ಅನುಭವಗಳನ್ನ ಮತ್ತು ಬದುಕಿನ ಯಶೋಗಾಥೆಗೆ ತೋಟದಪ್ಪ ನಿಲಯದ ಕೊಡುಗೆಯನ್ನು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೋಮಶೇಖರ್ ವಿದ್ಯಾರ್ಥಿಗಳಿಗೆ ತಮ್ಮ ಎಂದಿನ ಶೈಲಿಯಲ್ಲಿ ಮಾರ್ಗದರ್ಶನ ಮಾಡಿದರು. ಅವರ ಮಾತುಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೆಲ್ಲರೂ ಏಕ ಚಿತ್ತದಿಂದ ಆಲಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಸ್ವಲ್ಪ ಹಾಸ್ಯ, ಸ್ವಲ್ಪ ವೇದಾಂತ ಮತ್ತು ಸ್ವಲ್ಪ ಬುದ್ದಿ ಮಾತುಗಳಿಂದ ಎಲ್ಲರ ಮನ ಸೂರೆಗೊಂಡರು. ನಂತರ ಮಾತನಾಡಿದ ಶ್ರೀ ರೇವಣ್ಣಸಿದ್ದಯ್ಯನವರು ಎಂದಿನಂತೆ ವಿದ್ಯಾರ್ಥಿ ಜೀವನದ ಮುಖ್ಯ ಕರ್ತವ್ಯಗಳನ್ನ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟು, ಇಂಥಹ ಸುಂದರ ಕಾರ್ಯಕ್ರಮವನ್ನ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಬಳಗದ ಶ್ರಮವನ್ನ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯಲಿಂಗಪ್ಪನವರು ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಹೇಮಚಂದ್ರ ಸಾಗರ್ ರವರು ವಿದ್ಯಾರ್ಥಿಗಳಿಗೆ ಸಂದರ್ಶನ ತರಬೇತಿ ನೀಡಿದರು.ಒಟ್ಟಿನಲ್ಲಿ ಒಂದು ಸುಂದರ ಸಂಜೆಗೆ ತೋಟದಪ್ಪನವರ ಜಯಂತ್ಯೋತ್ಸವ ಅನುವು ಮಾಡಿ ಕೊಟ್ಟಿತು.
ಕೊನೆಗೆ ಎಲ್ಲರೂ ಸೇರಿ ಕೊಟ್ಟ ಪೋಸು ಇಲ್ಲಿದೆ ನೋಡಿ. ಯಾರಾದರೂ ಈ ಚಿತ್ರದಲ್ಲಿ ಇಲ್ಲದಿದ್ದರೆ ದಯವಿಟ್ಟು ಮುಂದಿನ ಕಾರ್ಯಕ್ರಮದಲ್ಲಿ ಮುಗಿಯುವ ತನಕ ಕಾಯಬೇಕಾಗಿ ಕೊರಿಕೊಳ್ಳುತ್ತೇವೆ..:-)