ನಮ್ಮಲ್ಲಿ ಅದೆಷ್ಟೊಂದು ಸೋಮಾರಿತನ ಬಂದಿದೆ ಮತ್ತು ಕೆಲವೊಮ್ಮೆ ನಾವೆಷ್ಟು ನಾಲಾಯಕ್ ಆಗಿದಿವಿ ಅನಿಸುತ್ತೆ. ಕೊನೆಯ ಭಾನುವಾರ ನನ್ನ ಸ್ನೇಹಿತನ ಮದುವೆ ಇತ್ತು. ಹೋಗಬೇಕೆಂದು ನಿರ್ಧರಿಸಿ ಕೆಲವರು ಸ್ನೇಹಿತರಿಗೆ ಫೋನ್ ಹಾಯಿಸಿ ಕೇಳಿದೆ. ಮದುವೆ ಇದ್ದಿದ್ದು ಬೆಂಗಳೊರಿನಲ್ಲೇ. ಒಬ್ಬ ಹೇಳಿದ, ಮಗ ತುಂಬಾ ಟ್ರಾಫಿಕ್, ಬೈಕ್ ಅಲ್ಲಿ ಬರೋಕೆ ಬೇಜಾರು, ಮತ್ತೊಬ್ಬ ಮಗ ಏನು ಗಿಫ್ಟ್ ತಗೊಂಡಿಲ್ಲ, ಹೋಗ್ಡಿದ್ರು ನಡಿಯತ್ತೆ ಬಿಡು ನಾವೇನು ಅಷ್ಟು ಕ್ಲೋಸ್ ಇರಲಿಲ್ಲ ಬಿಡು ಅಂದ! ಇಬ್ಬರೂ ಸೋಮಾರಿಗಳೇ, ೫ ದಿನ ಕತ್ತೆ ತರ ಕೆಲಸ ಮಾಡಿ ಮತ್ತೆರಡು ದಿನ ಬರಿ ಮಲಗುವ, ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜೀವನವನ್ನು ಯಾವಾಗಲು ಬೈಕೊಂಡೆ ಕಳೆಯುವ ಸ್ನೇಹಿತರು! ನಾವು ಇಂತವರನ್ನು ಬಹಳಷ್ಟು ಜನರನ್ನ ನೋಡಿರ್ತಿವಿ.
ಆದರೆ ಕೆಲವರು ನಮ್ಮೊಳಗೇ ಇರುವವರು ಅದೆಷ್ಟು ಉತ್ಸಾಹದಿಂದ ಜೀವನ ಸಾಗಿಸ್ತಾರೆ. ಅದೇನೇ ಕಷ್ಟದ ಸನ್ನಿವೇಶ ಬರಲಿ, ಅದೆಷ್ಟೇ ದಣಿವಿರಲಿ, ಅವರ ಜೀವನೋತ್ಸಾಹಕ್ಕೆ ಒಂದು ಚೂರು ಕಡಿಮೆ ಆಗೋಲ್ಲ. ಅಂಥಹ ಜೀವನೋತ್ಸಾಹವನ್ನು ನಾನು ಬಹಳಷ್ಟು ಸ್ನೇಹಿತರಲ್ಲಿ, ಹೊರಗಿನವರಲ್ಲಿ, ಬಸ್ಸಿನಲ್ಲಿ, ಪಾರ್ಕಿನಲ್ಲಿ, ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತೆ ಕೆಲವು ಸ್ಥಳಗಳಲ್ಲಿ ಕಂಡಿದ್ದೇನೆ. ಇಲ್ಲಿ ನಾನು ಮೊನ್ನೆ ಭೇಟಿಯಾದ ರಾಮರಾವ್ ಬಗ್ಗೆ ಬರೆಯೋಣ ಎಂದು ಅನಿಸಿತು. ಮೊನ್ನೆ ಅಂದರೆ ಎರಡು ವಾರಗಳ ಹಿಂದೆ ಎಂದು ಓದಿಕೊಳ್ಳಿ :)
ವೀಕ್ಎಂಡ್ ಗಳಲ್ಲಿ ಲೇಟ್ ಆಗಿ ಎದ್ದರೂ ಸಹ ಒಂದೆರಡು ಸುತ್ತು ಹಾಕಿ ಬರೋಣ ಎಂದು ನಮ್ಮ ಮನೆಯ ಹತ್ತಿರ ಇರುವ ಪಾರ್ಕಿಗೆ ಹೋಗುತ್ತೇನೆ. ನನಗೆ ಒಂದು ಸಿಕ್ಕವರಿಗೆಲ್ಲ ಒಂದು ಸಣ್ಣ ನಗು ಕೊಡುವ ಅಭ್ಯಾಸವಿದೆ(ಕೆಲವೊಮ್ಮೆ ಮುಂದಿನವರು ಪ್ರತಿಕ್ರಿಯೆ ಕೊಡದಿದ್ದರೂ ನಾನು ಕೊಟ್ಟು ಮುಂದೆ ಸಾಗುವೆ). ಒಂದೆರಡು ಸುತ್ತು ಹಾಕಿದ ಮೇಲೆ ಒಂದು ಬೆಂಚಿನ ಮೇಲೆ ಒಬ್ಬ ಸರಿ ಸುಮಾರು ನಮ್ಮ ಅಪ್ಪನ ವಯಸ್ಸಿನವರು ಕೂತು ವಿಶ್ರಮಿಸುತ್ತಿದ್ದರು. ಅವರ ಬಲಗೈಯಲ್ಲಿ ಈ ತಾತಂದಿರು ಹಿಡಿದುಕೊಳ್ಳುವ ಊರುಗೋಲು. ಅವರಿಗೆ ಒಂದು ಸಣ್ಣ ನಗು ಬೀರಿದೆ, ಮತ್ತೆ ನನ್ನ ಸುತ್ತು ಮುಗಿಸಲು ಮುಂದೆ ಓಡಿದೆ. ಓಟ ಮುಗಿದ ಮೇಲೆ ಸುಸ್ತಾಗಿ ಸುಮ್ಮನೆ ನಡ್ಕೊಂಡು ಬರುತ್ತಿದ್ದೆ, ರಾಮರಾವ್ ಇನ್ನ ಅಲ್ಲಿಯೇ ಕುಳಿತ್ತಿದ್ದರು. ನನ್ನ ನೋಡಿದ ತಕ್ಷಣ ಅವರು "ಹಲೋ" ಅಂದ್ರು, ನಾನು ಹಲೋ ಸರ್ ಅಂದು ಅವರ ಪಕ್ಕ ಕುಳಿತೆ. ಅವರು ಆ ಪಾರ್ಕಿಗೆ ಮೊದಲು ಬರುತ್ತಿದ್ದರಂತೆ. ಕೊನೆಯ ೮ ತಿಂಗಳಿಂದ ಬಂದಿರಲಿಲ್ಲ ಅಂದ್ರು. ನಾನು ಯಾಕೆ ಬರುತ್ತಿರಲಿಲ್ಲ ಅಂತೆಲ್ಲ ಪ್ರಶ್ನೆ ಹಾಕಿದೆ.
ಅವರು ಅವರ ಕಥೆ ಹೇಳಲು ಶುರು ಮಾಡಿದರು. ೮ ತಿಂಗಳ ಹಿಂದೆ ರೋಡ್ ಕ್ರಾಸ್ ಮಾಡುವಾಗ ಒಂದು ಟೆಂಪೋ ಗುದ್ದಿ ಅವರ ಎರಡು ಕಾಲುಗಳನ್ನ ಕಳೆದುಕೊಳ್ಳುವಂಥಹ ಪರಿಸ್ಥಿತಿ ಬಂತು. ಅವರು ಈಗ ಎರಡೂ ಕೃತಕ ಕಾಲುಗಳಲ್ಲಿ ನಡೆಯಬೇಕು. ಅದರಲ್ಲಿಯೇ ಅವರು ಯಾರ ಸಹಾಯವೂ ಇಲ್ಲದೆ, ಕೆಲವೊಮ್ಮೆ ಸ್ವಲ್ಪ ಸಹಾಯ ಪಡೆದು ಕೊಂಡು ಅವರ ಜೀವನ ಸಾಗಿಸುತ್ತಿದ್ದಾರೆ.
ಹೀಗೆ ನಾವಿಬ್ಬರು ಕೆಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾಗ, ಮತ್ತೊಬ್ಬರು ನಮ್ಮ ಪಾರ್ಕಿನಲ್ಲೇ ವಿಹರಿಸಲು ಬರುವವರು ಬಂದು ಕೇಳಿದರು. ಇವಾಗ ಕಷ್ಟ ಆಗುತ್ತೆ ಅಲ್ವಾ, ನಡೆಯೋಕೆ ಎಲ್ಲ ಆಗೋಲ್ಲ, ಸುಮ್ಮನೆ ವಾಕ್ ಎಲ್ಲ ಯಾಕೆ ಮಾಡ್ತಿರ ಅಂತ. ಒಂದು ನಿಮಿಷವೂ ತಡ ಮಾಡದೆ, ಏನನ್ನು ಯೋಚಿಸದೆ ಅವರು ಪ್ರತಿಕ್ರಿಯಿಸಿದರು. ಅವರ ಪ್ರತಿಕ್ರಿಯೆ ನಿಜಕ್ಕೂ ನನ್ನ ಉತ್ಸಹವನ್ನ ಮತ್ತು ಗೌರವವನ್ನ ಹಿಮ್ಮಡಿಗೊಳಿಸಿತು. ಅವರ ಉತ್ತರ ಹೀಗಿತ್ತು, "ಅಯ್ಯೋ ತೊಂದರೆ ಇಲ್ಲ ಸ್ವಾಮೀ, ನೀವೂ ಅರ್ಧ ಗಂಟೆಯಲ್ಲಿ ೫ ರೌಂಡ್ ಹಾಕಿದರೆ ನಾನು ಒಂದು ರೌಂಡ್ ಹಾಕ್ತೇನೆ ಅಷ್ಟೇ. ನಾನು ತೊಂದರೆಯಿಲ್ಲದೆ ನಡಿತೇನೆ ಅಂದ್ರು". ಅದೆಷ್ಟು ಜೀವನೋತ್ಸಾಹ ಅಲ್ವೇ, ಎರಡು ಕಾಲಿಲ್ಲ ಮತ್ತು ಕೃತಕ ಕಾಲುಗಳ ಮೇಲೆ ಜೀವನ. ಮತ್ತಷ್ಟು ಮಾತನಾಡಿ ಮತ್ತೊಂದು ನಗು ಬೀರಿ ಅಲ್ಲಿಂದ ಅವರ ಬಗ್ಗೆಯೇ ಯೋಚಿಸುತ್ತಾ ಮನೆಯ ಕಡೆಗೆ ಹೊರಟೆ!
ಇವನೇ, ಹಲ್ಲು ಮುರಿದುಕೊಂಡ ಸುಹಾಸ್ |
2 comments:
Thumba Chennagi ede Life li Yavathu hopes kalkobaradu:-)
ee uncle ra utsaha nijavaglu prashansaneeya. Adeno ee naduve jana ella tamma jeevanadalle muLugi hogirtare. Akka pakka nodoke samaya irodilvo ishta irodilvo gottilla. Vottinalli monotonous aagi baduki konege enu madlilvalla anta koragtare.
Post a Comment