Showing posts with label ತೋಟದಪ್ಪ. Show all posts
Showing posts with label ತೋಟದಪ್ಪ. Show all posts

Monday, February 25, 2013

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೩ ಮಾರ್ಚ್ ೨೩

ಈ ಬ್ಲಾಗಿನಲ್ಲಿ ನಾನು ಬರೆಯುವುದು ಬಹಳ ಕಡಿಮೆಯೇ! ನನ್ನ ಪ್ರವಾಸಗಳ ಪ್ರವಚನ ಮತ್ತು updateಗಳು ಇನ್ನೊಂದು www.pakkapravasi.blogspot.com ಅಲ್ಲಿ ಲಭ್ಯ. ಹೊದ ವರ್ಷ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ  ಜಯಂತ್ಯೋತ್ಸವದ ಬಗ್ಗೆ ಬರೆದಿದ್ದೆ. ಮತ್ತೆ ಈ ವರ್ಷವೂ ಬರೆಯೋಣ ಅಂದುಕೊಂಡಾಗ ಈ ಬ್ಲಾಗ್ ನೆನಪಾಯಿತು.

ಮೊನ್ನೆ  ಆಫೀಸಿನಲ್ಲಿ ಒಬ್ಬ ಸ್ನೇಹಿತ ಕೇಳ್ತಿದ್ದ ತೋಟದಪ್ಪನವರಿಗೆ ಯಾರು ಮಕ್ಕಳಿರಲಿಲ್ಲವ ಅಂತ, ನನ್ನ ಬಾಯಿಂದ ಥಟ್ಟನೆ ಬಂದ ಉತ್ತರ ನಾವೆಲ್ಲಾ ಅವರ ಮಕ್ಕಳೇ ಎಂದು(ಇದು ಸಿನಿಮೀಯ ಅನಿಸಿದರು ಸತ್ಯ ಘಟನೆ). ಅಲ್ಲಿ ಓದಿದ ಎಲ್ಲರಿಗೂ ಊಟ-ವಸತಿ ಕೊಟ್ಟು ಮತ್ತು ಬದುಕಲು ಬೇಕಾದ ಎಲ್ಲ skillsಗಳನ್ನ ಕಲಿಸಿದ ಹಾಸ್ಟೆಲ್ ಅದು(ತಿಗಣೆಯನ್ನೂ ಸ್ನೇಹಿತನನ್ನಾಗಿ ಮಾಡಿದ ಹಾಸ್ಟೆಲ್ ಅಂದರೂ ಅದು ಅತಿಶಯೋಕ್ತಿಯಾಗಲಾರದು). ಇಂಥಹ ಒಂದು ಸುಂದರ ಛತ್ರದ/ಹಾಸ್ಟೆಲಿನ ಕರ್ತೃವಿನ ಜಯಂತ್ಯೋತ್ಸವವನ್ನ ಹಳೆಯ ವಿದ್ಯಾರ್ಥಿಗಳ ಬಳಗ ಮೊನ್ನೆ ೨೩ ಫೆಬ್ರವರಿಯಂದು ಹಾಸ್ಟೆಲಿನ ಆವರಣದಲ್ಲಿ ಆಚರಿಸಿತು.

ಅದು ರಕ್ತದಾನದ ಮೂಲಕ ಮತ್ತು ಅಲ್ಲಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ಜ್ಞಾನ ದಾಸೋಹದ ಮೂಲಕ... ನಮ್ಮ ವಿದ್ಯಾರ್ಥಿ ನಿಲಯದ ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಹೇಳಿದಂತೆ ಅಲ್ಲಿ ದಾನ ಮಾಡಿದ ರಕ್ತ ಪವಿತ್ರವಾದ, ಶುಭ್ರವಾದ, ಒಳ್ಳೆಯ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶಕ್ಕೆ ದಾನ ಮಾಡಿದ ರಕ್ತ. ಅದೂ ತೋಟದಪ್ಪನವರಂಥ ಮಹಾನ್ ದಾನಿಯ ನೆನಪಿನಲ್ಲಿ! ಸರಿಯಾಗಿ ೯೩ unitಗಳ ರಕ್ತವನ್ನು ದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಬಳಗ, ರೆಡ್ ಕ್ರಾಸ್ ಸಹಯೋಗದಿಂದ ಆಯೋಜಿಸಲಾಗಿತ್ತು. 

ರಕ್ತದಾನ ಮಾಡಿದ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು!

ಸ್ವಲ್ಪ ತಡವಾಗಿ ಶುರುವಾದರೂ, ಬಹಳ ಬೇಗ ಅದರ ವೇಗವನ್ನು ಪಡೆದುಕೊಂಡಿತು. ರಕ್ತದಾನ ಕಾರ್ಯಕ್ರಮನ್ನ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶ್ರೀ ಜಯಲಿನ್ಗಪ್ಪನವರು, ರಕ್ತದಾನದ ಮಹತ್ವ ಮತ್ತು ಅವರ ಅನುಭವಗಳನ್ನ ಮೆಲುಕು ಹಾಕಿದರು. ರೆಡ್ ಕ್ರಾಸ್ ಸಂಸ್ಥೆಯ ಡಾ|| ದಿವ್ಯಶ್ರೀ ರಕ್ತದಾನದ ಮಹತ್ವ, ಅವಶ್ಯಕತೆಗಳ ಬಗ್ಗೆ ತಿಳಿಸಿದರು. ಮಾತು ಮುಗಿದ ತಕ್ಷಣ ರಕ್ತದಾನ ಶುರುವಾಯಿತು. ಮೊದಲ ಬಾರಿಗೆ ರಕ್ತದಾನ ಮಾಡಿದ ನನ್ನ ಮಿತ್ರರು ರಾಜೇಶ್, ಅರುಣ್ ಮತ್ತು ಗೋಕುಲ್ ಬಹಳ ಸಂತೃಪ್ತಿಯಿಂದ ಕಂಡಿದ್ದು ಕಂಡು ಬಂತು.

ಉದ್ಯಮಿಯಾಗು, ಉದ್ಯೋಗ ನೀಡು!
ಮಧ್ಯಾನ, ಉದ್ಯಮಿಯಾಗು ಮತ್ತು ಉದ್ಯಮಿಯಾಗು ಎಂಬ ವಿಷಯದ ಮೇಲೆ ಡಾ|| ಚಂದ್ರಶೇಕರನ್ ಅವರ ಅನುಭವಗಳನ್ನ ಹಂಚಿಕೊಂಡರು. ಅವರ ಏಳು ಬೀಳುಗಳು, ಉದ್ಯಮಿ ಆಗಬೇಕಾದರೆ ಪಟ್ಟ ಶ್ರಮಗಳ ಪರಿಚಯವನ್ನ ಮಾಡಿಕೊಟ್ಟರು. ಅವರ ಅರ್ಧಾಂಗಿ "ಪೂರ್ತಿ-ಅಂಗಿಯಾಗಿ" ಕೆಲಸ ಮಾಡಿದ ತಮ್ಮ ದಿನಗಳ ಪುಟ ತೆರೆದಿಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರು ಶ್ರೀ ಶಿವಾನಂದ್ ಮತ್ತು ಧರ್ಮದರ್ಶಿ ರೇವಣ್ಣಸಿದ್ದಯ್ಯನವರು ಉಪಸ್ಥಿತರಿದ್ದರು. 


Saturday, March 17, 2012

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವ- ೨೦೧೨ ಮಾರ್ಚ್ ೧೦

ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪನವರ ಜಯಂತ್ಯೋತ್ಸವವನ್ನು ಬಹಳ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚಿಗೆ ಅಂದರೆ ೨೦೧೨ ಮಾರ್ಚ್ ೧೦ರಂದು ಹಿರಿಯ ವಿದ್ಯಾರ್ಥಿ ಬಳಗ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮಸಂಸ್ಥೆಯ ಸಹಯೋಗದಲ್ಲಿ ಆಚರಿಸಿತು. ಬೆಂಗಳೂರಿನ ವಾಹನ ದಟ್ಟನೆ ಈ ಕಾರ್ಯಕ್ರಮಕ್ಕೂ ತನ್ನ ಇರುವಿಕೆಯನ್ನು ತೋರಿಸಿತ್ತು, ಸ್ವಲ್ಪ ತಡವಾಗಿಯೇ ಕಾರ್ಯಕ್ರಮ ಶುರುವಾಗಲು ಕಾರಣವಾಯಿತು! ಕಾರ್ಯಕ್ರಮಕ್ಕೆ ಮುನ್ನವೇ ಬಡಿಸಿದ ಕೇಸರಿಬಾತು ಉಪ್ಪಿಟ್ಟು ಬಾಯಿಗೆ ರುಚಿಯನ್ನು, ಬಡಿಸುತಿದ್ದ ನಮ್ಮ ನಿಲಯದ ಭಟ್ಟರ ನಗು ಮನಸಿಗೆ ಖುಷಿಯನ್ನು ನೀಡಿತು. ಮೊದಲಿಗೆ ವಚನ ಗಾಯನ ಕಾರ್ಯಕ್ರಮ ನಿಗದಿಯಾಗಿತ್ತು, ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಶಿವಾನಂದ ಹೆರೂರ ತಮ್ಮ ವಚನಗಳ ಮೂಲಕ ನೆರೆದಿದ್ದ ಹಿರಿಯ ಮತ್ತು ನಿಲಯದ ವಿದ್ಯಾರ್ಥಿಗಳ ಗಮನ ಸೆಳೆದರು, ಸ್ವಲ್ಪ ನಿದ್ದೆಯನ್ನೂ ಬರಿಸಿದರು ಎಂದರೂ ತಪ್ಪಿಲ್ಲ, ಎಲ್ಲರೂ ಅಷ್ಟು ಮಗ್ನ ಭಾವದಿಂದ ವಚನಗಾಯನವನ್ನ ಆಲಿಸಿದರು. ಮುಖ್ಯ ಅತಿಥಿಗಳಾಗಿ ಐ.ಎ.ಎಸ್. ಅಧಿಕಾರಿ ಡಾ|| ಸಿ ಸೋಮಶೇಖರ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಜಯಲಿಂಗಪ್ಪನವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ರೇವಣ್ಣಸಿದ್ದಯ್ಯಐ.ಪಿ.ಎಸ್ ಮತ್ತು ಹಿರಿಯ ಧರ್ಮದರ್ಶಿಗಳು ಹಾಗು ಹಳೆಯ ವಿದ್ಯಾರ್ಥಿಗಳೂ ಆದ ಶ್ರೀ ರಾಜೇಶ್ವರ ಶಾಸ್ತ್ರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ಶ್ರೀ ಚಿಕ್ಕಕರಿಯಪ್ಪ ಮತ್ತು ಮತ್ತೊಬ್ಬ ಹಿರಿಯ ವಿದ್ಯಾರ್ಥಿ ಹಾಗು ಖ್ಯಾತ ನಿರೂಪಕ ಶ್ರೀ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿ ತಮ್ಮ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿನ ಅನುಭವಗಳನ್ನ ಮತ್ತು ಬದುಕಿನ ಯಶೋಗಾಥೆಗೆ ತೋಟದಪ್ಪ ನಿಲಯದ ಕೊಡುಗೆಯನ್ನು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೋಮಶೇಖರ್ ವಿದ್ಯಾರ್ಥಿಗಳಿಗೆ ತಮ್ಮ ಎಂದಿನ ಶೈಲಿಯಲ್ಲಿ ಮಾರ್ಗದರ್ಶನ ಮಾಡಿದರು. ಅವರ ಮಾತುಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೆಲ್ಲರೂ ಏಕ ಚಿತ್ತದಿಂದ ಆಲಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಸ್ವಲ್ಪ ಹಾಸ್ಯ, ಸ್ವಲ್ಪ ವೇದಾಂತ ಮತ್ತು ಸ್ವಲ್ಪ ಬುದ್ದಿ ಮಾತುಗಳಿಂದ ಎಲ್ಲರ ಮನ ಸೂರೆಗೊಂಡರು. ನಂತರ ಮಾತನಾಡಿದ ಶ್ರೀ ರೇವಣ್ಣಸಿದ್ದಯ್ಯನವರು ಎಂದಿನಂತೆ ವಿದ್ಯಾರ್ಥಿ ಜೀವನದ ಮುಖ್ಯ ಕರ್ತವ್ಯಗಳನ್ನ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟು, ಇಂಥಹ ಸುಂದರ ಕಾರ್ಯಕ್ರಮವನ್ನ ಆಯೋಜಿಸಿದ ಹಿರಿಯ ವಿದ್ಯಾರ್ಥಿ ಬಳಗದ ಶ್ರಮವನ್ನ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯಲಿಂಗಪ್ಪನವರು ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಹೇಮಚಂದ್ರ ಸಾಗರ್ ರವರು ವಿದ್ಯಾರ್ಥಿಗಳಿಗೆ ಸಂದರ್ಶನ ತರಬೇತಿ ನೀಡಿದರು.ಒಟ್ಟಿನಲ್ಲಿ ಒಂದು ಸುಂದರ ಸಂಜೆಗೆ ತೋಟದಪ್ಪನವ ಜಯಂತ್ಯೋತ್ಸವ ಅನುವು ಮಾಡಿ ಕೊಟ್ಟಿತು.

ಕೊನೆಗೆ ಎಲ್ಲರೂ ಸೇರಿ ಕೊಟ್ಟ ಪೋಸು ಇಲ್ಲಿದೆ ನೋಡಿ. ಯಾರಾದರೂ ಈ ಚಿತ್ರದಲ್ಲಿ ಇಲ್ಲದಿದ್ದರೆ ದಯವಿಟ್ಟು ಮುಂದಿನ ಕಾರ್ಯಕ್ರಮದಲ್ಲಿ ಮುಗಿಯುವ ತನಕ ಕಾಯಬೇಕಾಗಿ ಕೊರಿಕೊಳ್ಳುತ್ತೇವೆ..:-)